ನವದೆಹಲಿ:ಸತತ ಲಾಭದತ್ತ ಮುನ್ನಗ್ಗುತ್ತಿರುವ ಭಾರತೀಯ ಷೇರುಪೇಟೆ ಹೊಸ ಗರಿಷ್ಠ ಎತ್ತರವನ್ನು ತಲುಪಿದೆ. ಇದೇ ಮೊದಲ ಬಾರಿಗೆ ಮುಂಬೈ ಷೇರು ಸೂಚ್ಯಂಕ 85 ಸಾವಿರ ಅಂಕಗಳ ಗಡಿ ದಾಟಿದೆ. ಒಂದು ಹಂತದಲ್ಲಿ ಸೆನ್ಸೆಕ್ಸ್ 85,052.42 ಅಂಕಕ್ಕೆ ತಲುಪಿದರೆ, ನಿಫ್ಟಿ 26 ಸಾವಿರದ ಸನಿಹಕ್ಕೆ ಬಂದಿತ್ತು. ಇದು ಷೇರುದಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಕಳೆದ ಮೂರು ದಿನಗಳಿಂದ ಭರ್ಜರಿ ಲಾಭದಲ್ಲಿ ನಡೆಯುತ್ತಿರುವ ಷೇರುಪೇಟೆ ಮಂಗಳವಾರ ಕೂಡ ಉತ್ತಮವಾಗಿ ಆರಂಭ ಕಂಡಿತು. ದಿನದ ಕೊನೆಯಲ್ಲಿ ಸೆನ್ಸೆಕ್ಸ್ 14.57 ಪಾಯಿಂಟ್ ಅಥವಾ ಶೇಕಡಾ 0.017 ರಷ್ಟು ಕುಸಿದು 84,914.04 ಪಾಯಿಂಟ್‌ಗಳಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿತು. ಇತ್ತ, ನಿಫ್ಟಿ 1.35 ಪಾಯಿಂಟ್ ಅಥವಾ 0.0052 ರಷ್ಟು ಏರಿಕೆಯಾಗಿ 25,940.40 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು.
ಜಾಗತಿಕ ಮಾರುಕಟ್ಟೆಯಲ್ಲಾದ ಬದಲಾವಣೆಗಳು ದೇಶೀಯ ಮಾರುಕಟ್ಟೆಯ ಮೇಲೆ ಭರ್ಜರಿ ಪರಿಣಾಮ ಬೀರಿವೆ. ಚೀನಾದ ಕೇಂದ್ರ ಬ್ಯಾಂಕ್ ಬಡ್ಡಿ ಕಡಿತ, ಆಸ್ತಿ ಮಾರುಕಟ್ಟೆ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಘೋಷಿಸಿದೆ. ಲೆಬನಾನ್ನಲ್ಲಿ ಇಸ್ರೇಲ್ ಬಾಂಬ್ ದಾಳಿ ನಡೆಸಿದ್ದರ ನಡುವೆಯೂ ಷೇರು ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.