ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಡಿಸೆಂಬರ್ ತಿಂಗಳಲ್ಲಿ ಒಟ್ಟು 1.76 ಲಕ್ಷ ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕಿಂತ ಶೇ.7.3 ರಷ್ಟು ಏರಿಕೆ ದಾಖಲಿಸಿರುವುದಾಗಿ ಹಣಕಾಸು ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದು ಬಂದಿದೆ.
2023ರ ಡಿಸೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹವು 1.64 ಲಕ್ಷ ಕೋಟಿ ರೂ.ಗಳಷ್ಟಿತ್ತು. ಸಿಜಿಎಸ್ಟಿ, ಎಸ್ಜಿಎಸ್ಟಿ, ಐಜಿಎಸ್ಟಿ ಮತ್ತು ಸೆಸ್ 2024ರ ಡಿಸೆಂಬರ್‌ನಲ್ಲಿ ಏರಿಕೆಯಾಗಿವೆ. 2024-25ರ ಸಾಲಿನಲ್ಲಿ ಇಲ್ಲಿಯವರೆಗೆ ಒಟ್ಟು ಜಿಎಸ್‌ಟಿ ಸಂಗ್ರಹವು ಶೇ. 9.1 ರಷ್ಟು ಏರಿಕೆಯಾಗಿ 16.33 ಲಕ್ಷ ಕೋಟಿ ರೂ.ಗೆ ತಲುಪಿದೆ. 2023ರ ಅವಧಿಯಲ್ಲಿ 14.97 ಲಕ್ಷ ಕೋಟಿ ರೂ ಸಂಗ್ರಹವಾಗಿತ್ತು.
2024ರ ಏಪ್ರಿಲ್ನಲ್ಲಿ ಜಿಎಸ್‌ಟಿ ಸಂಗ್ರಹವು ದಾಖಲೆಯ 2.10 ಲಕ್ಷ ಕೋಟಿ ರೂ.ಗೆ ಸಂಗ್ರಹವಾಗಿತ್ತು. 2023-24ರ ಹಣಕಾಸು ವರ್ಷದಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು 20.18 ಲಕ್ಷ ಕೋಟಿ ರೂ.ಗೆ ದಾಖಲಾಗಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ. 11.7 ರಷ್ಟು ಹೆಚ್ಚಳವಾಗಿದೆ.
ಇತ್ತೀಚಿನ ಜಿಎಸ್‌ಟಿ ಸಂಗ್ರಹವು ಭಾರತದ ಆರ್ಥಿಕತೆಯ ಸಕಾರಾತ್ಮಕ ಬೆಳವಣಿಗೆ ಪ್ರತಿಬಿಂಬಿಸುತ್ತದೆ. ಇದು ಜಾಗತಿಕ ಅನಿಶ್ಚಿತತೆಗಳ ನಡುವೆ ಸ್ಥಿತಿಸ್ಥಾಪಕತ್ವವನ್ನು ಸೂಚಿಸುತ್ತದೆ.
ಜಿಎಸ್‌ಟಿ ದರಗಳನ್ನು ಕಡಿತಗೊಳಿಸಲಾದ ವಸ್ತುಗಳು: ಹೇರ್ ಆಯಿಲ್, ಟೂತ್‌ಪೇಸ್ಟ್, ಸಾಬೂನು, ಡಿಟರ್ಜೆಂಟ್‌ಗಳು ಮತ್ತು ವಾಷಿಂಗ್ ಪೌಡರ್, ಗೋಧಿ, ಅಕ್ಕಿ, ಮೊಸರು, ಲಸ್ಸಿ, ಮಜ್ಜಿಗೆ, ಕೈಗಡಿಯಾರಗಳು, 32 ಇಂಚಿನ ಟಿವಿ, ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು, ಮೊಬೈಲ್ ಫೋನ್ಗಳು.
ಕೇಂದ್ರ ಹಣಕಾಸು ಸಚಿವರು ಅಧ್ಯಕ್ಷರಾಗಿರುವ ಮತ್ತು ಎಲ್ಲ ರಾಜ್ಯಗಳ ಹಣಕಾಸು ಮಂತ್ರಿಗಳು ಸದಸ್ಯರಾಗಿರುವ ಫೆಡರಲ್ ಸಂಸ್ಥೆಯಾದ ಜಿಎಸ್‌ಟಿ ಕೌನ್ಸಿಲ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಜಿಎಸ್‌ಟಿ ಮಂಡಳಿಯ ಇತ್ತೀಚಿನ ಸಭೆ ಡಿ.21 ರಂದು ರಾಜಸ್ಥಾನದ ಜೈಸಲ್ಮೇನ್ನಲ್ಲಿ ನಡೆದಿತ್ತು.
ಜುಲೈ 1, 2017 ರಿಂದ ಜಾರಿಗೆ ಬರುವಂತೆ ಸರಕು ಮತ್ತು ಸೇವಾ ತೆರಿಗೆಯನ್ನು ದೇಶದಲ್ಲಿ ಪರಿಚಯಿಸಲಾಯಿತು ಮತ್ತು ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆ, 2017 ರ ನಿಬಂಧನೆಗಳ ಪ್ರಕಾರ ಜಿಎಸ್‌ಟಿ ಅನುಷ್ಠಾನದಿಂದಾಗಿ ಉಂಟಾಗುವ ಆದಾಯದ ನಷ್ಟಕ್ಕೆ ರಾಜ್ಯಗಳಿಗೆ ಐದು ವರ್ಷಗಳವರೆಗೆ ಪರಿಹಾರದ ಭರವಸೆ ನೀಡಲಾಗಿತ್ತು.
ಇದನ್ನೂ ಓದಿ: 12 ವರ್ಷಗಳ ಕನಿಷ್ಠ ಮಟ್ಟಕ್ಕಿಳಿದ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಅನುಪಾತ; RBI ವರದಿ