ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಒಂದೂ ಸ್ಥಾನ ಗೆಲ್ಲದ ಕಾಂಗ್ರೆಸ್ ಈ ಬಾರಿಯೂ ಮತ್ತೊಮ್ಮೆ ಅದೇ ಆಘಾತವನ್ನು ಅನುಭವಿಸಿದೆ. ಅಷ್ಟೇ ಅಲ್ಲ, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿಯನ್ನು ಕಳೆದುಕೊಂಡಿರುವುದು ಕಾಂಗ್ರೆಸ್ನ ಹೀನಾಯ ಸೋಲಿಗೆ ಸಾಕ್ಷಿಯಾಗಿದೆ.
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಸ್ಪರ್ಧಿಗಳಲ್ಲಿ ಸುಮಾರು ಶೇ.80ರಷ್ಟು ಅಭ್ಯರ್ಥಿಗಳು ತಮ್ಮ ಠೇವಣಿಯನ್ನೂ ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಎಎಪಿ, ಬಿಜೆಪಿ ಹಾಗೂ ಮಿತ್ರ ಪಕ್ಷಗಳಾದ ಜನತಾ ದಳ(ಯುನೈಟೆಡ್) ಮತ್ತು ಎಲ್ಜೆಪಿ (ರಾಮ್ ವಿಲಾಸ್) ಪಕ್ಷಗಳ ಎಲ್ಲಾ ಅಭ್ಯರ್ಥಿಗಳು ಮಾತ್ರ ತಮ್ಮ ಭದ್ರತಾ ಠೇವಣಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 27 ವರ್ಷಗಳ ಬಳಿಕ ದೆಹಲಿಯ 70 ಕ್ಷೇತ್ರಗಳಲ್ಲಿ 48 ಕ್ಷೇತ್ರಗಳಲ್ಲಿ ಗೆದ್ದಿರುವ ಕೇಸರಿ ಪಕ್ಷ ಗದ್ದುಗೆ ಏರುವ ಸಿದ್ಧತೆಯಲ್ಲಿದೆ. ಆಡಳಿತರೂಢ ಆಪ್ ಮಾತ್ರ 22 ಸ್ಥಾನಗಳಿಗೆ ಕುಸಿದಿದೆ. ಮಾತ್ರವಲ್ಲ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಸೋಲು ಎಎಪಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ.
ಫೆ. 5 ರಂದು ನಡೆದ ಚುನಾವಣೆಯಲ್ಲಿ ಕಣದಲ್ಲಿದ್ದ 699 ಅಭ್ಯರ್ಥಿಗಳ ಪೈಕಿ 555 ಅಂದರೆ ಶೇ. 79.39 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಸತತ ಮೂರನೇ ಬಾರಿಗೆ ಸಿಂಗಲ್ ಸೀಟ್ ಗೆಲ್ಲದೇ ಇರುವುದು ಮಾತ್ರವಲ್ಲದೆ ತನ್ನ 67 ಅಭ್ಯರ್ಥಿಗಳು ತಮ್ಮ ಭದ್ರತಾ ಠೇವಣಿಯನ್ನೂ ಕಳೆದುಕೊಂಡಿರುವುದು ಕಾಂಗ್ರೆಸ್ಗೆ ತೀವ್ರ ಆಘಾತವನ್ನುಂಟುಮಾಡಿದೆ.
ಇದನ್ನೂ ಓದಿ: ದೆಹಲಿ ಚುನಾವಣೆಯಲ್ಲಿ ಅತಿಹೆಚ್ಚು, ಅತಿ ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳು ಇವರೇ ನೋಡಿ!
1998 ರಿಂದ 2013ರ ವರೆಗೆ ಸತತ ಮೂರು ಅವಧಿಗೆ ದೆಹಲಿಯಲ್ಲಿ ಆಳ್ವಿಕೆ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಎಲ್ಲ 70 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕೇವಲ ಮೂವರು ಅಭ್ಯರ್ಥಿಗಳು- ಕಸ್ತೂರಬಾ ನಗರದ ಅಭಿಷೇಕ್ ದತ್, ನಂಗ್ಲೋಯ್ ಜಾಟ್ನ ರೋಹಿತ್ ಚೌಧರಿ ಹಾಗೂ ಬದ್ಲಿಯ ದೇವೇಂದ್ರ ಯಾದವ್ ತಮ್ಮ ಭದ್ರತಾ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದವರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂನ ಶಿಫಾ- ಉರ್-ರೆಹಮಾನ್ ಅವರು ಓಖ್ಲಾ ಕ್ಷೇತ್ರದಲ್ಲಿ ತಮ್ಮ ಭದ್ರತಾ ಠೇವಣಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕಾರ, ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮಾನ್ಯ ವರ್ಗದ ಯಾವುದೇ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ 10,000 ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ರೂ. 5000 ಭದ್ರತಾ ಠೇವಣಿಯಾಗಿ ಇಡಬೇಕು. ಚುನಾವಣಾ ಕಾನೂನಿನ ಪ್ರಕಾರ, ಅಭ್ಯರ್ಥಿ ಚುನಾವಣೆಯಲ್ಲಿ ಪಡೆದ ಮತ, ಆ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಪಡೆದ ಒಟ್ಟು ಮಾನ್ಯವಾದ ಮತಗಳ ಆರನೇ ಒಂದು ಭಾಗವನ್ನು ಮೀರದೇ ಇದ್ದಲ್ಲಿ, ಭದ್ರತಾ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಳ್ಳುತ್ತದೆ.
ಇದನ್ನೂ ಓದಿ: ಆಪ್ ಕೆಡವಿ ದೆಹಲಿ ಗದ್ದುಗೆ ಏರಿದ ಬಿಜೆಪಿ : ಬಲ ಕಳೆದುಕೊಂಡ ವಿಪಕ್ಷಗಳ INDIA ಮೈತ್ರಿಕೂಟ