ರಾಮೇಶ್ವರಂ/ ಹುಬ್ಬಳ್ಳಿ : ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆಗೆ ಸಜ್ಜಾಗಿದೆ. ರಾಮೇಶ್ವರಂ ಭಕ್ತರಿಗೆ, ಧನುಷ್ಕೋಡಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಂಬನ್ ಬ್ರಿಡ್ಜ್ ನಿರ್ಮಿಸಲಾಗಿದೆ. ಇದು ದೇಶದಲ್ಲಿ ಮತ್ತೊಂದು ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿಯಾಗಿದೆ. ಸಮುದ್ರದಲ್ಲಿ ನಿರ್ಮಿಸಲಾದ ಮೊದಲ ವರ್ಟಿಕಲ್ ಲಿಫ್ಟ್ ಸೇತುವೆಯಾಗಿದ್ದು, ಶೀಘ್ರದಲ್ಲೇ ಆರಂಭವಾಗಲಿದೆ. ಇದು ಹಲವು ವಿಶೇಷತೆಗಳನ್ನು ಒಳಗೊಂಡಿದೆ.
78 ಮೀಟರ್ ಉದ್ದ ಮತ್ತು 380 ಟನ್ ತೂಕದ ಸೇತುವೆಯ ಒಂದು ಭಾಗವು ಭಾರವಾದ ದೋಣಿಗಳ ಸಂಚಾರಕ್ಕಾಗಿ 17 ಮೀಟರ್ ಎತ್ತರಕ್ಕೆ ಏರುತ್ತದೆ. ತಮಿಳುನಾಡಿನ ಮಂಟಪಂದಿಂದ ರಾಮೇಶ್ವರಂ ದ್ವೀಪವನ್ನು ಸಂಪರ್ಕಿಸಲು ಆಧುನಿಕ ಸ್ಪರ್ಶದಿಂದ ಇದನ್ನು ನಿರ್ಮಿಸಲಾಗಿದೆ. 111 ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ್ದ ಹಳೆಯ ಸೇತುವೆ ಅವಧಿ ಮುಗಿದಿದ್ದರಿಂದ ಅದರ ಪಕ್ಕದಲ್ಲಿಯೇ ಈ ಹೊಸ ಸೇತುವೆಯನ್ನು ನಿರ್ಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಇದನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.
ತಮಿಳುನಾಡಿನ ದ್ವೀಪನಗರ ಹಾಗೂ ನಾಲ್ಕು (ಚಾರ್) ಧಾಮಗಳಲ್ಲಿ ಒಂದಾಗಿರುವ ರಾಮೇಶ್ವರಂನ ಪಂಬನ್ನಲ್ಲಿ ವಿನೂತನ 'ವರ್ಟಿಕಲ್ ಸೀ ಬ್ರಿಡ್ಜ್' ಇದೇ ಫೆಬ್ರವರಿ ಕೊನೆಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಈ ಮೊದಲು 24-2-1914 ರಲ್ಲಿ ನಿರ್ಮಾಣಗೊಂಡಿದ್ದ ರೈಲು ಸೇತುವೆ ಪಕ್ಷಿಯ ರೆಕ್ಕೆಯಂತೆ ಎರಡೂ ದಿಕ್ಕಿನಲ್ಲಿ ತೆರೆದುಕೊಳ್ಳುತ್ತಿತ್ತು. ಆದರೆ, ಈ ಸೇತುವೆ ತುಕ್ಕು ಹಿಡಿದ ಕಾರಣ, ಭದ್ರತಾ ದೃಷ್ಟಿಯಿಂದ ಕಳೆದ 2022 ರ ಡಿಸೆಂಬರ್ನಲ್ಲಿ ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಂದಿನಿಂದ ರಾಮೇಶ್ವರಂಗೆ ಬರುವ ಭಕ್ತರು, ಧನುಷ್ಕೋಡಿಗೆ ಭೇಟಿ ನೀಡುವ ಪ್ರವಾಸಿಗರು, ರಾಮೇಶ್ವರಂಗೆ ಸಂಚರಿಸುವವರು ಸಂಪೂರ್ಣವಾಗಿ ರಸ್ತೆ ಸಂಚಾರವನ್ನೇ ಅವಲಂಬಿಸಬೇಕಿತ್ತು.
![vertical-pamban-bridge](https://etvbharatimages.akamaized.net/etvbharat/prod-images/09-02-2025/23508710_thumbhfghfghfgh.jpg)
ದಕ್ಷಿಣ ರೈಲ್ವೆಯು ರೈಲು ವಿಕಾಸ ನಿಗಮ ಸಹಯೋಗದೊಂದಿಗೆ 531 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರೈಲು ಸೇತುವೆ ನಿರ್ಮಿಸಿದೆ. ಪಂಬನ್ ಮತ್ತು ಮಂಡಪಂ ರೈಲು ನಿಲ್ದಾಣಗಳ ಮಧ್ಯದ ಈ ಸೇತುವೆ ದೇಶದ ಮೊದಲ ಲಂಬವಾಗಿ ತೆರೆದುಕೊಳ್ಳುವ ಸೇತುವೆಯಾಗಿದೆ. ಈ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಭಾರತೀಯ ರೈಲ್ವೆ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲಾಗಿದೆ.
ನೂತನ ರೈಲ್ವೆ ಸೇತುವೆ 2.10 ಕಿಲೋ ಮೀಟರ್ ಉದ್ದವಿದೆ. ಇದರಲ್ಲಿನ ಲಂಬ ಸೇತುವೆ 72.5 ಮೀಟರ್ ಉದ್ದವಿದ್ದು, ಬೋಟ್ ಬಂದಾಗ 17 ಮೀಟರ್ ಎತ್ತರಕ್ಕೆ ಮೇಲಕ್ಕೆ ಏರಿಸಲಾಗುತ್ತದೆ. ಸದ್ಯಕ್ಕೆ ಈ ಸೇತುವೆ ಮೇಲೆ ಏಕಪಥ ಇಲೆಕ್ಟ್ರಿಫಿಕೇಶನ್ ಮಾರ್ಗ ಇದ್ದು, ಭವಿಷ್ಯದಲ್ಲಿ ದ್ವಿಪಥ ಮಾರ್ಗ ನಿರ್ಮಾಣಕ್ಕೂ ಬೇಕಾದ ಸೌಲಭ್ಯ ಒದಗಿಸಲಾಗಿದೆ.
![vertical-pamban-bridge](https://etvbharatimages.akamaized.net/etvbharat/prod-images/09-02-2025/23508710_thumbnajhghjghj.jpg)
ಈ ಕುರಿತಂತೆ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ''ನೂತನವಾಗಿ ನಿರ್ಮಿಸಿರುವ ಪಂಬನ್ ಸೇತುವೆ ಭಾರತದ ಭೂ ಭಾಗವನ್ನು, ದ್ವೀಪ ನಗರಿ ರಾಮೇಶ್ವರಂನ್ನು ಸಂಪರ್ಕಿಸುತ್ತದೆ. ಹಳೆ ಪಂಬನ್ ಬ್ರಿಡ್ಜ್ನ ಸಂಪರ್ಕವನ್ನು 2022 ರಲ್ಲಿ ಭದ್ರತಾ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಈಗ ನೂತನ ಸೇತುವೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಇದಕ್ಕೆ ₹531 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, 2.10 ಕಿ.ಮೀ ಉದ್ದವಿದ್ದು, 333 ಪಿಲ್ಲರ್ ಗಳನ್ನು ಹಾಕಲಾಗಿದೆ. ವರ್ಟಿಕಲ್ ಲಿಪ್ಟ್ ಮಾಡುವ ವ್ಯವಸ್ಥೆ ಇದ್ದು, ದೊಡ್ಡ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಟ್ರ್ಯಾಕ್ ಡಬ್ಲಿಂಗ್ ಹಾಗೂ ವಿದ್ಯುತ್ ಕಾಮಗಾರಿ ಕೂಡ ಮಾಡಲಾಗಿದೆ. ರೈಲ್ವೆ ಟ್ರ್ಯಾಕ್ ಸೇರಿದಂತೆ ಈ ಸೇತುವೆಯ ತೂಕ 660 ಮೆಟ್ರಿಕ್ ಟನ್ ಇದೆ'' ಎಂದರು.
![vertical-pamban-bridge](https://etvbharatimages.akamaized.net/etvbharat/prod-images/09-02-2025/23508710_thujkgjhjg.jpg)
''ಸಮುದ್ರದಲ್ಲಿ ಸೇತುವೆ ನಿರ್ಮಾಣಕ್ಕೆ ಮರಳು ಹಾಗೂ ಉಪ್ಪುನೀರು ಸವಾಲಾಗುತ್ತದೆ. ಇದರಿಂದ ತುಕ್ಕು ಹಿಡಿಯುತ್ತದೆ. ಇದನ್ನು ತಡೆಗಟ್ಟಲು ಸಾಕಷ್ಟು ತಾಂತ್ರಿಕತೆ ಬಳಸಿಕೊಳ್ಳಲಾಗಿದೆ. ಹಳೇ ಬ್ರಿಡ್ಜ್ 1914 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಅದು 2021ರ ವರೆಗೆ ಬಂದಿದೆ. ತುಕ್ಕು ಹಿಡಿಯಬಾರದು ಎಂಬ ಕಾರಣಕ್ಕೆ ನಿರಂತರವಾಗಿ ಡಬಲ್ ಕೋಟ್ ಪೇಂಟ್ ಹಾಕಲಾಗಿದೆ. ಅದು ತುಕ್ಕು ರಹಿತ ಪೇಂಟ್ ಆಗಿದೆ. ಹಳೇ ಬ್ರಿಡ್ಜ್ ಇರುವರೆಗೂ ದೊಡ್ಡ ದೊಡ್ಡ ಹಡಗುಗಳ ಸಂಚಾರ ಅಸಾಧ್ಯವಾಗಿದ್ದು, ಹಳೇ ಬ್ರಿಡ್ಜ್ ತೆಗೆದು ಹಾಕಲಾಗುವುದು'' ಎಂದು ಮಾಹಿತಿ ನೀಡಿದರು.
![vertical-pamban-bridge](https://etvbharatimages.akamaized.net/etvbharat/prod-images/09-02-2025/23508710_thumbnaijjghjghjg.jpg)
ದಕ್ಷಿಣ ರೈಲ್ವೆ ರೆಸಿಡೆಂಟ್ ಇಂಜಿನಿಯರ್ ಕೆ. ವೇಲುಮುರುಗನ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ''ಈ ಮಾರ್ಗದಲ್ಲಿ ನಿತ್ಯ 10 ರಿಂದ 12 ರೈಲುಗಳು ಸಂಚರಿಸುತ್ತವೆ. ಇದರೊಂದಿಗೆ ಪ್ರತಿ ವಾರ 12 ವಿಶೇಷ ರೈಲುಗಳು ಸಹ ಹೆಚ್ಚುವರಿಯಾಗಿ ಸಂಚರಿಸುತ್ತವೆ. ಹಳೇ ಬ್ರಿಡ್ಜ್ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದು ಎಲೆಕ್ಟ್ರಿಕಲ್ ಆಟೋಮೆಕ್ಯಾನಿಕಲ್ ತಂತ್ರಜ್ಞಾನ ಒಳಗೊಂಡಿದೆ. ಹಳೇ ಬ್ರಿಡ್ಜ್ ತೆರೆದುಕೊಳ್ಳಲು 45 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿತ್ತು. ಆದ್ರೆ ಹೊಸ ಬ್ರಿಡ್ಜ್ 5.3 ನಿಮಿಷದಲ್ಲಿ ತೆರೆದುಕೊಳ್ಳಲಿದೆ. ಒಂದು ಬಾರಿ ಸೇತುವೆ ಮೇಲೆ ಎತ್ತಲು
120 ಕಿಲೋ ವ್ಯಾಟ್ ವಿದ್ಯುತ್ ಬೇಕು. ಯಾವ ವೇಳೆಯಲ್ಲಿ ಬ್ರಿಡ್ಜ್ ಮೇಲೆ ಎತ್ತಬೇಕು ಎಂಬ ಬಗ್ಗೆ ರೈಲ್ವೆ ಮಂಡಳಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
![Railway track](https://etvbharatimages.akamaized.net/etvbharat/prod-images/09-02-2025/23508710_thumbnajhghj.jpg)
ಕಳೆದ 10 ದಿನಗಳ ಹಿಂದೆ ಈ ಮಾರ್ಗದಲ್ಲಿ ಪರೀಕ್ಷಾರ್ಥಕವಾಗಿ ರೈಲು ಸಂಚರಿಸಿದೆ. ಪ್ರತಿ ತಾಸಿಗೆ 10 ಕಿ.ಮೀ, 30 ಕಿ.ಮೀ, 50 ಕಿ.ಮೀ, 70 ಕಿ.ಮೀ, 80 ಕಿ.ಮೀ ವೇಗದಲ್ಲಿ ರೈಲು ಓಡಿಸುವ ಮೂಲಕ ವೇಗವನ್ನು ಪರೀಕ್ಷಿಸಲಾಗಿದೆ. ಪರೀಕ್ಷಾರ್ಥ ರೈಲು ಸಂಚಾರ ಗಮನಿಸಿದ ನಂತರ ಪ್ರತಿ ತಾಸಿಗೆ 75 ಕಿ. ಮೀ ವೇಗದಲ್ಲಿ ರೈಲು ಸಂಚಾರ ನಡೆಸಲು ತೀರ್ಮಾನಿಸಲಾಗಿದೆ. ಒಂದು ವೇಳೆ ಗಾಳಿಯ ವೇಗ ತೀವ್ರವಾಗಿದ್ದರೆ ರೈಲು ಸಂಚಾರದ ವೇಗ ತಗ್ಗಲಿದೆ ಎಂದು ಮಾಹಿತಿ ನೀಡಿದರು.
![pamban-bridge](https://etvbharatimages.akamaized.net/etvbharat/prod-images/09-02-2025/23508710_thumbnajhjgj.jpg)
ಬೆಂಗಳೂರು, ಹುಬ್ಬಳ್ಳಿಯಿಂದಲೂ ಶೀಘ್ರ ರೈಲು ಸಂಚಾರ ಆರಂಭ : ನೂತನ ಪಂಬನ್ ಬ್ರಿಡ್ಜ್ ಲೋಕಾರ್ಪಣೆಗೊಂಡ ನಂತರ ರಾಮೇಶ್ವರಂಗೆ ದೇಶದ ವಿವಿಧ ಮೂಲೆಗಳಿಂದ ರೈಲು ಸಂಚಾರ ಮತ್ತೆ ಪ್ರಾರಂಭಗೊಳ್ಳಲಿದೆ. ನೈಋತ್ಯ ರೈಲ್ವೆ ವಲಯದ ಮುಖ್ಯ ಕಚೇರಿ ಇರುವ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಿಂದ ಈ ಮೊದಲು ರಾಮೇಶ್ವರಂಗೆ ರೈಲು ಸಂಚಾರ ಇತ್ತು. ಇದೀಗ ಮತ್ತೆ ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಪ್ರಮುಖ ನಗರಗಳಿಂದಲೂ ರಾಮೇಶ್ವರಂಗೆ ರೈಲು ಸಂಚಾರ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ.
![vertical-pamban-bridge](https://etvbharatimages.akamaized.net/etvbharat/prod-images/09-02-2025/kn-hbl-01-pamban-bridge-spl-7208089_09022025192041_0902f_1739109041_557.jpg)
ಯಾವ ಹಡಗುಗಳು ಸಂಚರಿಸಬಹುದು? ಇಲ್ಲಿ ಬೋಟ್ಗಳೊಂದಿಗೆ ಸಂಚರಿಸುವ ಮೀನುಗಾರರು ಹೊಸ ವರ್ಟಿಕಲ್ ರೈಲ್ವೆ ಬ್ರಿಡ್ಜ್ ದಾಟಲು ಸರ್ಕಾರದ ಪರವಾನಿಗೆ ಪಡೆದುಕೊಳ್ಳಬೇಕು. ನಂತರ ಸರ್ಕಾರ ರೈಲ್ವೆ ಇಲಾಖೆಗೆ ನೀಡುವ ಸೂಚನೆ ಆಧರಿಸಿ ಬ್ರಿಡ್ಜ್ ತೆರೆದುಕೊಳ್ಳುತ್ತದೆ. ಮೀನುಗಾರರ ಬೋಟ್ಗಳ ಜತೆಗೆ ನೌಕಾ ದಳದ ಬೋಟ್ಗಳು ಸಹ ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕಳೆದ ಎರಡು ವರ್ಷಗಳಿಂದ ಹಳೆಯ ಬ್ರಿಡ್ಜ್ ಸ್ಥಗಿತಗೊಂಡಿದ್ದರಿಂದ ಮೀನುಗಾರರು ಧನುಷ್ಕೋಡಿವರೆಗೆ ಸುತ್ತುವರೆದು ಮತ್ತೊಂದು ಬದಿಗೆ ಸಾಗುವ ಅನಿವಾರ್ಯತೆ ಇದೆ.
ವರ್ಟಿಕಲ್ ರೈಲ್ವೆ ಬ್ರಿಡ್ಜ್ ಮೇಲಕ್ಕೆ ಎತ್ತಲು 5.30 ನಿಮಿಷಗಳನ್ನು ತೆಗೆದುಕೊಳ್ಳುವುದರಿಂದ ಹಡಗು ಸಾಗಾಟ ಸಮಯ ಉಳಿತಾಯವಾಗಲಿದೆ. 17 ಮೀಟರ್ವರೆಗೂ ಈ ಬ್ರಿಡ್ಜ್ ಮೇಲಕ್ಕೆ ಹೋಗುವುದರಿಂದ ಡೊಡ್ಡ ಪ್ರಮಾಣದ ಹಡಗುಗಳು ಸರಳವಾಗಿ ಓಡಾಡಬಹುದಾಗಿದೆ.
ಇದನ್ನೂ ಓದಿ : ಆಧುನಿಕ ಇಂಜಿನಿಯರಿಂಗ್ನ ಅದ್ಭುತ 'ಪಂಬನ್ ಸೇತುವೆ': ಇದರ ಆಯಸ್ಸೆಷ್ಟು, ವಿಶಿಷ್ಟತೆಗಳೇನು ಗೊತ್ತಾ? - VERTICAL LIFT RAILWAY BRIDGE