ಮುಂಬೈ: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ. ಶಿವಾಜಿ ಪಾರ್ಕ್ ಪ್ರದೇಶದಲ್ಲಿರುವ ರಾಜ್ ಠಾಕ್ರೆ ಅವರ ಶಿವತೀರ್ಥ ನಿವಾಸದಲ್ಲಿ ಈ ಭೇಟಿ ನಡೆದಿದೆ. ಸಿಎಂ ಫಡ್ನವೀಸ್ ಅವರೊಂದಿಗೆ ಮೋಹಿತ್ ಕಮಬೋಸೆ ಹಾಜರಿದ್ದರು. ಮನಸೆ ಕಡೆಯಿಂದ ಬಾಳಾ ನಂದಗಾಂವಕರ, ನಿತಿನ್ ಸರದೇಸಾಯಿ ಮತ್ತು ಸಂದೀಪ ದೇಶಪಾಂಡೆ ಸಭೆಯಲ್ಲಿ ಹಾಜರಿದ್ದರು.
ಲೋಕಸಭಾ ಚುನಾವಣೆಯಲ್ಲಿ ಭೇಷರತ್ ಬೆಂಬಲ ನೀಡಿದ್ದ ರಾಜ್: ಲೋಕಸಭಾ ಚುನಾವಣೆಯಲ್ಲಿ ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಮಹಾಯುತಿಗೆ ಬೇಷರತ್ತಾಗಿ ಬೆಂಬಲ ನೀಡಿದ್ದರು. ಆದರೆ ವಿಧಾನಸಭಾ ಚುನಾವಣೆಯಲ್ಲಿ ಎಂಎನ್ಎಸ್ ಸ್ವಂತ ಬಲದ ಮೇಲೆ ಸ್ಪರ್ಧಿಸಿತ್ತು. ಆದರೆ ಅದರ ಯಾವ ಶಾಸಕರೂ ಆಯ್ಕೆಯಾಗಲಿಲ್ಲ.
ಸ್ಥಳೀಯಸಂಸ್ಥೆ ಚುನಾವಣೆ ಹಿನ್ನೆಲೆ ನಡೆಯಿತಾ ಭೇಟಿ:ಸದ್ಯ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆಯಬೇಕಿವೆ. ಎಂಎನ್ಎಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ವಂತವಾಗಿ ಸ್ಪರ್ಧಿಸುತ್ತದೆಯೇ ಅಥವಾ ಮಹಾಯುತಿ ಮೈತ್ರಿಕೂಟವನ್ನು ಬೆಂಬಲಿಸುತ್ತದೆಯೇ ಎಂದು ನೋಡಬೇಕಾಗಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ರಾಜ್ ಠಾಕ್ರೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಮತ್ತೊಂದೆಡೆ, ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ಅವರನ್ನು ಬಿಜೆಪಿ ಕೋಟಾದಿಂದ ವಿಧಾನ ಪರಿಷತ್ತಿಗೆ ಕಳುಹಿಸುವ ಸಾಧ್ಯತೆಯಿದೆ.
ಏತನ್ಮಧ್ಯೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಜಯ್ ರಾವುತ್, "ರಾಜ್ ಠಾಕ್ರೆ ಶಿವಾಜಿ ಪಾರ್ಕ್ನಲ್ಲಿ ಒಂದು ಹೋಟೆಲ್ ಆರಂಭಿಸಿದ್ದಾರೆ. ಅದು ನನಗೆ ತಿಳಿದಿರುವುದು ಅಷ್ಟೆ. ಜನರು ನಿರಂತರವಾಗಿ ಚಹಾ ಕುಡಿಯಲು ಅಲ್ಲಿಗೆ ಹೋಗುತ್ತಿದ್ದಾರೆ. ಹೋಟೆಲ್ಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ರಾಜಕೀಯದಲ್ಲಿ ಇಂಥ ಚಹಾ ಸಭೆಗಳು ನಡೆಯುತ್ತಿರುವುದು ಒಳ್ಳೆಯದು. ಜನರು ಅಲ್ಲಿಗೆ ಹೋಗಿ ದೃಶ್ಯಾವಳಿಗಳನ್ನು ನೋಡಬೇಕು" ಎಂದು ಹೇಳಿದರು.
ಇದನ್ನೂ ಓದಿ : ಎಲ್ಲರಿಗೂ ಆಹಾರ ಭದ್ರತೆ ನೀಡಲು ತ್ವರಿತವಾಗಿ ಜನಗಣತಿ ನಡೆಸಿ: ಕೇಂದ್ರಕ್ಕೆ ಸೋನಿಯಾ ಗಾಂಧಿ ಒತ್ತಾಯ - POPULATION CENSUS