ಮಹಾಕುಂಭ ನಗರ(ಉತ್ತರ ಪ್ರದೇಶ): ವಸಂತ್, ಬಸಂತಿ, ಗಂಗಾ, ಜಮುನಾ, ಸರಸ್ವತಿ, ಕುಂಭ.. ಇವರೆಲ್ಲರೂ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳದಲ್ಲಿ ನಿರ್ಮಿಸಲಾದ ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳು.
ಧಾರ್ಮಿಕವಾಗಿ ಮಹತ್ವದ್ದಾಗಿರುವ ಕುಂಭಮೇಳದಲ್ಲಿ ಜನಿಸಿದ ಮಕ್ಕಳಿಗೆ ಅವರ ಪೋಷಕರು ಧಾರ್ಮಿಕ ಹಿನ್ನೆಲೆಯ ಹೆಸರನ್ನೇ ನಾಮಕರಣ ಮಾಡಿ, ಎಲ್ಲರಿಗೂ ಈ ಧರೆಗೆ ಸ್ವಾಗತಿಸಿದ್ದಾರೆ. ಇದು ಮೇಳದ ನೆನಪು ಮತ್ತು ಧಾರ್ಮಿಕ ಸಂಯೋಗ ಹೊಂದಿದೆ ಎಂಬುದು ಅವರ ಅಭಿಮತ.
ಮಹಾ ಕುಂಭಮೇಳಕ್ಕೆ ಬರುವ ಭಕ್ತರಿಗಾಗಿ 13 ವೈದ್ಯಕೀಯ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಸೆಕ್ಟರ್ 2ರ ಬಳಿ ಹೆರಿಗೆಯೂ ಸೇರಿದಂತೆ ವಿವಿಧ ಸೌಲಭ್ಯಗಳ ಸೆಂಟ್ರಲ್ ಆಸ್ಪತ್ರೆ ತೆರೆಯಲಾಗಿದೆ. ಜನವರಿ 13ರಿಂದ ಆರಂಭವಾಗಿರುವ ಆಸ್ಪತ್ರೆಯಲ್ಲಿ ಈವರೆಗೂ 12 ಮಕ್ಕಳು ಜನಿಸಿದ್ದಾರೆ.
ಎಲ್ಲವೂ ಸಹಜ ಹೆರಿಗೆ: ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಮನೋಜ್ ಕೌಶಿಕ್ ಮಾತನಾಡಿ, "ಇಲ್ಲಿ ಮೇಳ ಆರಂಭವಾದಾಗಿನಿಂದ ಜನಿಸಿದ ಮಕ್ಕಳಿಗೆ ವಿಶಿಷ್ಟ ಹೆಸರನ್ನು ಇಡಲಾಗಿದೆ. 12ನೇ ಮಗು ಭಾನುವಾರ ಜನಿಸಿದೆ. ಎಲ್ಲ ಹೆರಿಗೆಗಳು ಸಹಜವಾಗಿಯೇ ಆಗಿವೆ" ಎಂದು ತಿಳಿಸಿದ್ದಾರೆ.
"12ನೇ ಮಗುವಿಗೆ ಕುಂಭ-2 ಎಂದು ನಾಮಕರಣ ಮಾಡಲಾಯಿತು. ಕಾರಣ ಡಿ.29ರಂದು ಹುಟ್ಟಿದ ಮಗುವಿಗೂ ಇದೇ ಹೆಸರು ಇಡಲಾಗಿತ್ತು. ಹೀಗಾಗಿ, ಈ ಮಗುವಿಗೆ ಕುಂಭ-2 ಎಂದು ಹೆಸರಿಸಲಾಯಿತು" ಎಂದು ಹೇಳಿದ್ದಾರೆ.
ಆ ಮಗುವಿನ ತಂದೆ ದೀಪಕ್ ಮಾತನಾಡಿ, "ನಮ್ಮ ಮಗು ಮಹಾಕುಂಭದಲ್ಲಿ ಜನಿಸಿದ್ದಕ್ಕೆ ಇಲ್ಲಿಯ ಸ್ಥಳ ಮಹಿಮೆಯನ್ನೇ ಸಾರುವ ಕುಂಭ ಎನ್ನುವ ಹೆಸರನ್ನಿಟ್ಟಿದ್ದೇವೆ. ಇದು ನಮ್ಮೆಲ್ಲರಿಗೂ ಸಂತಸ ಮತ್ತು ಧರ್ಮಬದ್ಧ ಎನ್ನಿಸಿತು" ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಭೋಲೇನಾಥ್, ಬಜರಂಗಿ, ನಂದಿ ಮತ್ತು ಜಮುನಾ ಎಂದು ಮಕ್ಕಳಿಗೆ ನಾಮಕರಣ ಮಾಡಲಾಗಿದೆ. ಫೆ.3 ರಂದು ವಸಂತ ಹುಣ್ಣಿಮೆಯಂದು ಹುಟ್ಟಿದ ಗಂಡು ಮತ್ತು ಹೆಣ್ಣು ಮಗುವಿಗೆ ವಸಂತ್ ಮತ್ತು ಬಸಂತಿ ಎಂದು ಹೆಸರಿಡಲಾಗಿದೆ.
ಹೆರಿಗೆಯಾದವರಲ್ಲಿ ಕೆಲವರು ಇಲ್ಲಿ ಕೆಲಸಕ್ಕೆ ನಿಯೋಜನೆ ಆಗಿರುವ ನಾಲ್ಕನೇ ದರ್ಜೆಯ ಉದ್ಯೋಗಿಗಳ ಪತ್ನಿಯರಾಗಿದ್ದಾರೆ. ಜೊತೆಗೆ, ವಿವಿಧೆಡೆಯಿಂದ ಬಂದ ಭಕ್ತರೂ ಇದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಕುಂಭದಲ್ಲಿ ಹೆರಿಗೆಗಾಗಿ ಪಟ್ಟು: ವಿಶೇಷವೆಂದರೆ, ಮಹಾ ಕುಂಭಮೇಳದ ಜಾಗದಲ್ಲಿ ತಮ್ಮ ಮಗು ಜನಿಸಬೇಕು ಎಂದು ಕೋರಿ ಹಲವು ಗರ್ಭಿಣಿಯರು ಇಲ್ಲಿನ ಆಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ. ಜಾರ್ಖಂಡ್, ಮಧ್ಯ ಪ್ರದೇಶದ ಮಹಿಳೆಯರು ಇಂತಹ ಕೋರಿಕೆ ಹೊಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಧ್ಯ ಪ್ರದೇಶದ ಗ್ವಾಲಿಯರ್‌ನ ಮಹಿಳೆಯೊಬ್ಬರು ಘಾಟ್‌ನಲ್ಲಿ ಸ್ನಾನ ಮಾಡುವಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ತರಲಾಯಿತು. ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸರಸ್ವತಿ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ: ಮಹಾಕುಂಭ ಮೇಳ: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು