ಮಂಗಳೂರು: ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯ ಸಿಟಿವಿಎಸ್ ತಂಡ ವಿಶೇಷ ಶಸ್ತ್ರಚಿಕಿತ್ಸೆ ನಡೆಸಿ 12 ವರ್ಷದ ಬಾಲಕನ ಕುತ್ತಿಗೆಯ ಮೂಲಕ ಎದೆಗೂಡಿಗೆ ಸೇರಿದ ತೆಂಗಿನ ಗರಿ ಹಾಗೂ ಬಾಲಕನ ಕುತ್ತಿಗೆಗೆ ಹಾಕಿಕೊಂಡಿದ್ದ ಚೈನ್ ಹೊರ ತೆಗೆಯುವ ಮೂಲಕ ಜೀವದಾನ ನೀಡಿದ್ದಾರೆ.
ಬಾಲಕನ ಕುಟುಂಬ ಅಸ್ಸಾಂ ರಾಜ್ಯದ ಗುವಾಹಟಿ ಮೂಲದವರಾಗಿದ್ದು, ಮಡಿಕೇರಿಯಲ್ಲಿ ಕಾಫಿ ಎಸ್ಟೇಟ್‌ನಲ್ಲಿ ಹೆತ್ತವರು ಕೂಲಿ ಕೆಲಸ ಮಾಡುತ್ತಿದ್ದರು. ಶನಿವಾರ ಕಮಲ್ ಹುಸೇನ್ (12) ಬಾಲಕ ಆಟವಾಡುತ್ತಿದ್ದಾಗ ಹತ್ತಿರದಲ್ಲಿದ್ದ ತೆಂಗಿನ ಮರದ ಗರಿಯೊಂದು ಬಾಲಕನ ಮೇಲೆ ಬಿದ್ದು ಅವಘಡ ಸಂಭವಿಸಿತ್ತು.
ಇದರಿಂದ ತೆಂಗಿನಗರಿಯ (ಅಂದಾಜು 20 ಸೆಂ.ಮೀ. ಉದ್ದ) ಭಾಗ ಬಾಲಕನ ಕುತ್ತಿಗೆಯಲ್ಲಿ ಹಾಕಿಕೊಂಡಿದ್ದ ಸ್ಟೀಲ್ ಚೈನ್‌ನೊಂದಿಗೆ ಎದೆಯೊಳಗೆ ಹೊಕ್ಕಿತ್ತು. ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ತಕ್ಷಣವೇ ಮಂಗಳೂರಿನ ವೆನ್ಲಾಕ್ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತೆಂಗಿನ ಗರಿಯ ತುಂಡು ಹಾಗೂ ಚೈನ್ ಹೊರತೆಗೆದು ಬಾಲಕನಿಗೆ ಹೊಸ ಬದುಕು ನೀಡಿದ್ದಾರೆ.
ಡಾ. ಸುರೇಶ್ ಪೈ ನೇತೃತ್ವದ ವೆನ್ಲಾಕ್ ಆಸ್ಪತ್ರೆಯ ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜರಿ(ಸಿಟಿವಿಎಸ್) ತಂಡ ರಾತ್ರಿ 1.30ರಿಂದ 3.30ರ ನಡುವೆ ಬಾಲಕನ ಸರ್ಜರಿ ನಡೆಸಿತು. ತಂಡ ಮಾಡಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ.
ಈ ಬಗ್ಗೆ ಮಾತನಾಡಿದ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್ ಡಿ.ಎಸ್ ಅವರು, "ಮಡಿಕೇರಿಯಿಂದ ಬಾಲಕನ ಹೆತ್ತವರು ನಮ್ಮನ್ನು ಸಂಪರ್ಕಿಸಿದರು. ನಾವು ತಕ್ಷಣವೇ ಕಾಯಪ್ರವೃತ್ತರಾಗಿ ಶಸ್ತ್ರಚಿಕಿತ್ಸೆ ಮಾಡಿದೆವು. ಸಿಟಿವಿಸ್ ತಂಡದ ವಿಶೇಷ ಕೆಲಸದಿಂದ ಯಾವುದೇ ದುಬಾರಿ ವೆಚ್ಚ ಇಲ್ಲದೇ ಉಚಿತ ಸರ್ಜರಿ ಮೂಲಕ ಬಾಲಕನ ಜೀವ ಉಳಿಯಿತು. ಡಾ. ಸುರೇಶ್ ಪೈ ನೇತೃತ್ವದ ವೆನ್ಲಾಕ್ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸೆಯ (ಸಿಟಿವಿಎಸ್) ಸಂಪೂರ್ಣ ತಂಡವು ಅವರ ಅಸಾಧಾರಣ ಕೌಶಲ್ಯ ಮತ್ತು ಸಮರ್ಪಣೆಗೆ ಪ್ರಶಂಸೆಗೆ ಅರ್ಹವಾಗಿದೆ".
"ಇಂದು, ಅವರು 12 ವರ್ಷದ ಬಾಲಕನ ಎದೆಯಿಂದ ತೆಂಗಿನ ಗರಿ ಯಶಸ್ವಿಯಾಗಿ ಹೊರತೆಗೆದರು. ಮಡಿಕೇರಿಯಿಂದ ಬಂದ ಬಾಲಕ, ಬಿದ್ದು ತೀವ್ರ ಗಾಯಗೊಂಡಿದ್ದನು, ಇದರಿಂದಾಗಿ ಅವನ ಕುತ್ತಿಗೆಗೆ ಮರದ ತುಂಡು ಪ್ರವೇಶಿಸಿ ಎದೆಯಲ್ಲಿ ಸಿಲುಕಿಕೊಂಡಿತು. ಇಂದು ಬೆಳಗ್ಗೆ ಸಿಟಿವಿಎಸ್ ತಂಡವು ಜೀವ ಉಳಿಸುವ ಶಸ್ತ್ರಚಿಕಿತ್ಸೆ ನಡೆಸಿತು. ಯುವ ಜೀವವನ್ನು ಉಳಿಸುವಲ್ಲಿ ಅವರ ಗಮನಾರ್ಹ ಪ್ರಯತ್ನಗಳಿಗಾಗಿ ಇಡೀ ಸಿಟಿವಿಎಸ್ ತಂಡ, ಒಟಿ ಸಿಬ್ಬಂದಿ ಮತ್ತು ಅರಿವಳಿಕೆ ತಂಡವನ್ನು ನಾವು ಅಭಿನಂದಿಸುತ್ತೇವೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕ್ಲೀನರ್ ಎದೆ ಸೀಳಿದ್ದ 98 ಸೆಂಮೀ ಉದ್ದದ ಪೈಪ್ ಹೊರತೆಗೆದ ಕೆಎಂಸಿಆರ್‌ಐ ವೈದ್ಯರು - Successful Operation