ಬೆಂಗಳೂರು : ಭಾರತೀಯ ಆಡಳಿತ ಸೇವೆ(ಐಎಎಸ್) ಅಧಿಕಾರಿಗಳ ಕನಿಷ್ಠ ಸೇವಾವಧಿ ನಿಗದಿಪಡಿಸುವ ಮತ್ತು ಕರ್ತವ್ಯ ನಿರ್ವಹಣೆಯ ವೇಳೆ ಅವರ ಹಿತ ಕಾಯುವ ಉದ್ದೇಶ ಹೊಂದಿರುವ ನಾಗರಿಕ ಸೇವಾ ಮಂಡಳಿ (ಸಿಎಸ್‌ಬಿ) ಕುರಿತ ನಿರ್ಧಾರ ರಾಜ್ಯದ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ನಿರ್ಧಾರವೇ ವಿನಃ ರಾಕೆಟ್ ತಂತ್ರಜ್ಞಾನವಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕದಲ್ಲಿ ನಾಗರಿಕ ಸೇವಾ ಮಂಡಳಿ ರಚಿಸಬೇಕು ಹಾಗೂ ನಾಗರಿಕರ ಸೇವಾ ಅಧಿಕಾರಿಗಳ ಕನಿಷ್ಠ ಸೇವಾವಧಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತ ಬೆಂಗಳೂರಿನ ರಿಷಬ್ ಟ್ರಕ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ಪೀಠ ಈ ಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿಯ ಸಂಬಂಧ ಮಾಹಿತಿ ಪಡೆದು ತಿಳಿಸುವುದಾಗಿ ಸರ್ಕಾರಿ ವಕೀಲರು ತಿಳಿಸಿದರು. ಇದಕ್ಕೆ ಪೀಠ, ನಿರ್ದಿಷ್ಟ ಹುದ್ದೆಯಿಂದ ಅಧಿಕಾರಿಯೊಬ್ಬರನ್ನು ಏಕೆ ವರ್ಗಾವಣೆ ಮಾಡಲಾಗುತ್ತದೆ ಎಂಬುದನ್ನು ಲಿಖಿತವಾಗಿ ಉಲ್ಲೇಖಿಸಿ, ಅಸಾಮಾನ್ಯ ಸಂದರ್ಭದಲ್ಲಿ ವರ್ಗಾವಣೆ ಮಾಡಬಹುದು. ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಅಧಿಕಾರಿಯೊಬ್ಬರಿಗೆ ನಿರ್ದಿಷ್ಟ ಸೇವಾ ಭದ್ರತೆ ಒದಗಿಸಬೇಕು. ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿತು.
ಸಿಎಸ್‌ಬಿ ರೂಪಿಸಲು ನಿಮಗೆ ಕಾಲಾವಕಾಶ ಬೇಕಿಲ್ಲ. ಇದು ರಾಕೆಟ್ ತಂತ್ರಜ್ಞಾನವಲ್ಲ. ಬೇರೆ ಇಲಾಖೆಗಳಿಂದ ಮಾಹಿತಿ ಪಡೆದು ರಾಕೆಟ್ ಅನ್ನು ಹೇಗೆ ರೂಪಿಸಬೇಕು ಎಂಬಂಥ ವಿಚಾರ ಇದಲ್ಲ. ರಾಜ್ಯದ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಆಡಳಿತಾತ್ಮಕ ನಿರ್ಧಾರ ಇದಾಗಿದ್ದು, ಒಬ್ಬ ಅಧಿಕಾರಿಯನ್ನು ಒಂದು ಹುದ್ದೆಗೆ ನೇಮಿಸಿ, ಕನಿಷ್ಠ ಮೂರು ವರ್ಷ ಅವರನ್ನು ಅಲ್ಲಿ ಉಳಿಸದಿದ್ದರೆ ಅವರು ಕೆಲಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿ ವಿಚಾರಣೆಯನ್ನು ಮಾರ್ಚ್ 21ಕ್ಕೆ ನ್ಯಾಯಾಲಯ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಾಗರಿಕ ಸೇವಾ ಮಂಡಳಿ ರಚಿಸುವುದಕ್ಕೆ ಸಂಬಂಧಿಸಿದಂತೆ 2014ರಲ್ಲಿ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯ ಸರ್ಕಾರವು ಅಮಾನತಿನಲ್ಲಿಟ್ಟಿದೆ. ಆನಂತರ ಸಿಎಸ್‌ಬಿ ರಚಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠವು ನಿರ್ದೇಶಿಸಿದೆ. ಆದರೆ, ಈವರೆಗೂ ರಚಿಸಲಾಗಿಲ್ಲ. ಹಿಂದಿನ ವಿಚಾರಣೆ ವೇಳೆ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ಸರ್ಕಾರದ ವಕೀಲರು ತಿಳಿಸಿದ್ದರು. ಆದರೆ, ಇದೀಗ ಮತ್ತೆ ಕಾಲಾವಕಾಶ ಕೇಳಲಾಗುತ್ತಿದೆ. ಒಂದು ದಶಕವಾದರೂ ಯಾವುದೇ ಕ್ರಮವಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಸರ್ಕಾರಿ ವಕೀಲರು, ಈ ವಿಚಾರವನ್ನು ಸಂಪುಟ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿದೆ. ಬೇರೆ ರಾಜ್ಯಗಳಿಂದಲೂ ಈ ಸಂಬಂಧ ಮಾಹಿತಿ ಕೇಳಲಾಗಿದೆ. ಪರಿಣಾಮಕಾರಿಯಲ್ಲದ ನಿರ್ಧಾರ ಕೈಗೊಳ್ಳಬಾರದು ಎಂಬುದರ ಹಿನ್ನೆಲೆಯಲ್ಲಿ ತಡವಾಗಿದ್ದು, ನಾಲ್ಕು ವಾರ ಕಾಲಾವಕಾಶ ನೀಡಬೇಕು ನೀಡಬೇಕು ಎಂದು ಕೋರಿದರು.
ಇದನ್ನೂ ಓದಿ: ನಿಯಮಗಳನ್ನು ಮೀರಿ ಸೀಟು ಹಂಚಿಕೆ ರದ್ದು ಪಡಿಸಲು ಕೆಇಎಗೆ ಹೈಕೋರ್ಟ್ ಆದೇಶ