ಹೈದರಾಬಾದ್; ಸೈಬರ್ ಅಪರಾಧಿಗಳು ದಿನದಿಂದ ದಿನಕ್ಕೆ ಹೊಸ ರೀತಿಯ ವಂಚನೆಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಜನರ ಹಣವನ್ನು ಸೆಕೆಂಡುಗಳಲ್ಲಿ ದೋಚಲು ಸಂಚು ರೂಪಿಸಿ, ಈಜಿಯಾಗಿ ಹಣ ಡ್ರಾ ಮಾಡಿ ನಿಮ್ಮ ಅರಿವಿಗಿಲ್ಲದಂತೆ ನಾಪತ್ತೆಯಾಗುತ್ತಾರೆ. ಇತ್ತೀಚೆಗೆ ಯುಪಿಎ ಬಳಕೆದಾರರನ್ನು 'ಜಂಪ್ಡ್ ಡೆಪಾಸಿಟ್’ ಎಂಬ ಮೋಸದ ಜಾಲಕ್ಕೆ ಬೀಳಿಸಿ ನಿಮ್ಮ ಬ್ಯಾಂಕ್ ಖಾತೆ ಖಾಲಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಏನಿದು 'ಜಂಪ್ಡ್ ಡೆಪಾಸಿಟ್ ಹಗರಣ'? ಇದನ್ನು ಹೇಗೆ ಎದುರಿಸುವುದು? ಎಂಬ ಬಗ್ಗೆ ತಿಳಿದುಕೊಳ್ಳೋಣ
'ಜಂಪ್ಡ್ ಡೆಪಾಸಿಟ್ ಸ್ಕ್ಯಾಮ್' ಎಂದರೇನು?: ಯುಪಿಐ ಮೂಲಕ ಮೊಬೈಲ್ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡು ಮಾಡುವ ಈ ಮೋಸದ ವಂಚನೆಯೇ ಜಂಪ್ಡ್ ಡಿಪಾಸಿಟ್ ಸ್ಕ್ಯಾಮ್. ಈ ಹಗರಣದ ಭಾಗವಾಗಿ ವಂಚಕ ಆತ ಗುರಿಯಾಗಿಸಿಕೊಂಡ ಖಾತೆಗೆ 5 ಸಾವಿರ ರೂ ಅಥವಾ ಅದಕ್ಕಿಂತ ಕಡಿಮೆ ಹಣ ಜಮಾ ಮಾಡುತ್ತಾನೆ. ಆ ನಂತರ ಹಣ ಪಡೆದಿದ್ದೀರಿ ಎಂದು ಫೋನ್‌ನಲ್ಲಿ ಸಂದೇಶ ರವಾನಿಸುತ್ತಾನೆ. ಈ ಸಂದರ್ಭದಲ್ಲಿ ಕೆಳಗಿನ ಲಿಂಕ್ ಒತ್ತಿ ಎಂಬ ಮನವಿಯನ್ನು ಕಳುಹಿಸುತ್ತಾನೆ. ಸಾಮಾನ್ಯವಾಗಿ ನಾವು SMS ಓಪನ್ ಮಾಡುತ್ತೇವೆ ಹಾಗೂ UPI ಪಿನ್ ಅನ್ನು ನಮೂದಿಸುತ್ತೇವೆ.
ಈ ಸಂದರ್ಭಕ್ಕಾಗಿಯೇ ಕಾಯುತ್ತಿರುವ ವಂಚಕ ನೀವು ಎಸ್ಎಂಎಸ್ ಮೂಲಕ ರವಾನಿಸಿದ ಸಂದೇಶ ಕ್ಲಿಕ್ ಮಾಡಿ ಪಿನ್ ಒತ್ತುತ್ತಿದ್ದಂತೆ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಡ್ರಾ ಮಾಡಲು ಅನುಮತಿ ಅಥವಾ ದೃಢೀಕರಣ ಪಡೆದುಕೊಳ್ಳುತ್ತಾನೆ. ಈ ಅನುಮತಿ ಸಿಕ್ಕ ತಕ್ಷಣ ನಿಮ್ಮ ಖಾತೆಗೆ ಪ್ರವೇಶ ಮಾಡುವ ವಂಚಕ ಅದರಲ್ಲಿದ್ದ ಹಣವನ್ನು ಡ್ರಾ ಮಾಡಿಕೊಳ್ಳುತ್ತಾನೆ.
ಹೀಗಾಗಿ ನಿಮಗೆ ಅಪರಿಚಿತ ನಂಬರ್ ಗಳಿಂದ ನಿಮ್ಮ ಖಾತೆಗೆ ಹಣವೇನಾದರೂ ಸಂದಾಯವಾಗಿದ್ದು, ಅಂತಹ ಸಂದೇಶಗಳನ್ನು ನೀವೇನಾದರೂ ಸ್ವೀಕರಿಸಿದರೆ ಯಾವ ಲಿಂಕ್ ಗಳ ಮೇಲೂ ಕ್ಲಿಕ್ ಮಾಡಬೇಡಿ.
ಅಪರಿಚಿತರ ಯುಪಿಐನಿಂದ ಬಂದ ಠೇವಣಿ ಸ್ವೀಕರಿಸುವಾಗ ಜಾಗರೂಕರಾಗಿರಿ: ಅಪರಿಚಿತ UPI ಸಂಖ್ಯೆಗಳಿಂದ ಠೇವಣಿಗಳನ್ನು ಸ್ವೀಕರಿಸುವಾಗ ಜಾಗರೂಕರಾಗಿರಿ ಎಂದು ಸೈಬರ್ ತಜ್ಞರು ಮತ್ತು ಪೊಲೀಸರು ಎಚ್ಚರಿಸಿದ್ದಾರೆ. ಇಲ್ಲದಿದ್ದರೆ ನಿಮ್ಮ ಖಾತೆಯಲ್ಲಿರುವ ಹಣವನ್ನು ಸೈಬರ್ ವಂಚಕರು ಲೂಟಿ ಮಾಡುತ್ತಾರೆ. ಇಂತಹ ವಂಚನೆಗಳಿಂದ ಸುರಕ್ಷಿತವಾಗಿರಲು ಈ ಸಲಹೆಗಳನ್ನು ಅನುಸರಿಸಲು ಸೂಚಿಸಲಾಗಿದೆ.
ಜಂಪ್ಡ್ ಡಿಪಾಸಿಟ್ ವಂಚನೆ ತಡೆಯುವುದು ಹೇಗೆ?:
- 'ಜಂಪ್ಡ್ ಠೇವಣಿ ಹಗರಣ'ದ ಬಗ್ಗೆ ಬಹಳ ಜಾಗರೂಕರಾಗಿರಿ. ಅಪರಿಚಿತ ನಂಬರ್ ಗಳಿಂದ ಬರುವ ಡೆಪಾಸಿಟ್ ಬಗ್ಗೆ ಮುಂಜಾಗ್ರತೆ ವಹಿಸಿ, ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಎಂಬ ಸಂದೇಶ ಬಂದಾಗ ಬ್ಯಾಲೆನ್ಸ್ ಚೆಕ್ ಮಾಡಲು ಹೋಗಬೇಡಿ
- ನೀವು ಅನುಮಾನಾಸ್ಪದ ಅಧಿಸೂಚನೆ ಅಥವಾ SMS ಪಡೆದುಕೊಂಡಿದ್ದರೆ ಕನಿಷ್ಠ 15-30 ನಿಮಿಷಗಳ ಕಾಲ UPI ಬಳಸುವುದನ್ನು ಸ್ಥಗಿತಗೊಳಿಸಿ. ಹೀಗೆ ಮಾಡಿದರೆ ಹಣ ಹಿಂಪಡೆಯಲು ಸೈಬರ್ ವಂಚಕರು ಕಳುಹಿಸಿರುವ ಮನವಿಯ ಅವಧಿ ಮುಕ್ತಾಯವಾಗಲಿದೆ.
- ಯಾವುದೇ ಅಪರಿಚಿತ ನಂಬರ್ ನಿಂದ ನಿಮ್ಮ ಖಾತೆಗೆ ಹಣ ಬಂದಿದ್ದರೆ ಈ ಬಗ್ಗೆ ಗಮನಿಸಿ. ಬ್ಯಾಲೆನ್ಸ್ ಪರಿಶೀಲಿಸುವ ಮೊದಲು ನಿಮ್ಮ ನಿಜವಾದ ಪಿನ್ ಸಂಖ್ಯೆಯನ್ನು ನಮೋದಿಸದೇ ತಪ್ಪು ಸಂಖ್ಯೆಯನ್ನು ನಮೂದಿಸಿ. ಹೀಗೆ ಮಾಡಿದಾಗ ಸೈಬರ್ ಗ್ರಾಹಕರು ನಿಮಗೆ ಕಳುಹಿಸಿದ ಲಿಂಕ್ ನ ವಿನಂತಿ ತನ್ನಿಂದ ತಾನೇ ರದ್ದಾಗುತ್ತದೆ. ಇದು ಸೈಬರ್ ವಂಚಕರ ಪ್ರಯತ್ನವನ್ನು ತಡೆಯುತ್ತದೆ. ಹೀಗೆ ಮಾಡಿದ ಕೆಲವು ನಿಮಿಷಗಳ ಬಳಿಕ ನಿಮ್ಮ ನಿಜವಾದ ಪಿನ್ ಸಂಖ್ಯೆಯೊಂದಿಗೆ ಬ್ಯಾಲೆನ್ಸ್ ಪರಿಶೀಲಿಸಿ.
- ನೀವು ಅಜ್ಞಾತ ನಂಬರ್ ಗಳಿಂದ ಅಪ್ಲಿಕೇಶನ್ ಅಧಿಸೂಚನೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿದಾಗ ನೇರವಾಗಿ ಬ್ಯಾಂಕ್ ಸಂಪರ್ಕಿಸಿ. ಆಗ ನಿಮಗೆ ಯಾವ ಖಾತೆಯಿಂದ ಹಣ ಕಳುಹಿಸಲಾಗಿದೆ ಎಂಬುದರ ಸತ್ಯಾಸತ್ಯತೆ ತಿಳಿಯುತ್ತದೆ.
- ನಿಮ್ಮ ಯುಪಿಎ ಪಿನ್ ಇತರರೊಂದಿಗೆ ಹಂಚಿಕೊಳ್ಳಬೇಡಿ. ಅದನ್ನು ಆದಷ್ಟು ಮಟ್ಟಿಗೆ ಗೌಪ್ಯವಾಗಿಡಿ.
- ನೀವು ಈ ಸಲಹೆಗಳನ್ನು ಅನುಸರಿಸಿದರೆ, ಜಂಪ್ಡ್ ಠೇವಣಿ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಬಹುದು. ನೀವು ಒಂದೊಮ್ಮೆ ವಂಚನೆಗೆ ಒಳಗಾಗಿದ್ದರೆ, ತಕ್ಷಣವೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿ. ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್‌ಗೆ ಘಟನೆಯನ್ನು ವರದಿ ಮಾಡಿ.