ಬೆಂಗಳೂರು: ''ಸಮುದಾಯದ ಸಾಂಪ್ರದಾಯಿಕ ಶಕ್ತಿಯನ್ನು ಸದುಪಯೋಗಪಡಿಸಿಕೊಂಡು ಆಧುನಿಕ ಸವಾಲುಗಳೊಂದಿಗೆ ಕೃಷಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ'' ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.
ನಗರದ ಅರಮನೆ ಆವರಣದಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್‌ಪೋ 2025ರ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ''ಕೃಷಿ ನಮ್ಮ ಅಡಿಪಾಯ, ಆದರೆ, ಜಾಗತೀಕರಣವು ಹಲವಾರು ಸವಾಲುಗಳು ಮತ್ತು ಅವಕಾಶಗಳನ್ನು ಒಡ್ಡಿದೆ. ಮುಂದಿನ ಪೀಳಿಗೆಯನ್ನು ಬೆಂಬಲಿಸಲು ನಾವು ಸಂಪ್ರದಾಯದೊಂದಿಗೆ ಹೊಸತನವನ್ನು ಸಂಯೋಜಿಸಬೇಕು'' ಎಂದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರದಂತಹ ಜಿಲ್ಲೆಗಳಲ್ಲಿ ಗಮನಾರ್ಹ ಸಾಧನೆಗಳನ್ನು ಉಲ್ಲೇಖಿಸುತ್ತಾ, ''ರೈತರು ನೀರಿನ ಕೊರತೆ ನೀಗಿಸಲು ಮತ್ತು ವೈವಿಧ್ಯಮಯ ಬೆಳೆ ಬೆಳೆಯಲು ಸುಧಾರಿತ ತಂತ್ರಜ್ಞಾನ ಬಳಸುತ್ತಿದ್ದಾರೆ. ರೈತರು ಡ್ರ್ಯಾಗನ್ ಹಣ್ಣು ಮತ್ತು ಖರ್ಜೂರ ಬೆಳೆಸಲು ಸೂಕ್ಷ್ಮ ನೀರಾವರಿ ತಂತ್ರಗಳು ಮತ್ತು ಇಸ್ರೇಲಿ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ, ಪಾಲಿಹೌಸ್‌ಗಳಲ್ಲಿ ವಿದೇಶಿ ಹೂವುಗಳನ್ನು ಬೆಳೆಸುವುದರೊಂದಿಗೆ ಪುಷ್ಪ ಕೃಷಿಯು ಪ್ರವರ್ಧಮಾನಕ್ಕೆ ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಮನಗರ ಮತ್ತು ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆ ಕೃಷಿ ಮಾರುಕಟ್ಟೆಯನ್ನು ಸ್ಥಾಪಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಪ್ರಸ್ತಾಪಿಸಿ ಎಂ.ಸಿ. ಸುಧಾಕರ್, ''ರೇಷ್ಮೆ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಲು ಇದು ನೆರವಾಗುತ್ತದೆ ಮತ್ತು ಒಕ್ಕಲಿಗ ಉದ್ಯಮಿಗಳಿಗೆ ಹಲವಾರು ಅವಕಾಶಗಳನ್ನು ಸೃಷ್ಟಿಸುತ್ತದೆ. ಚಿಕ್ಕಬಳ್ಳಾಪುರದಲ್ಲಿ 5,000 ಎಕರೆ ಕೈಗಾರಿಕಾ ಭೂಮಿಯನ್ನು ಮೀಸಲಿಡಲಾಗಿದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಸ್ಥಳವನ್ನು ವ್ಯಾಪಾರದ ಬೆಳವಣಿಗೆಗೆ ಬಳಸಿಕೊಳ್ಳಬೇಕು'' ಎಂದು ಉದ್ಯಮಿಗಳಿಗೆ ಮನವಿ ಮಾಡಿದರು.
ವೈವಿಧ್ಯಮಯ ಅವಕಾಶಗಳು: ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ''ಹಿಂದೆ ನಮ್ಮ ಜೀವನದಲ್ಲಿ ಕೃಷಿ ಬಹಳ ಕೇಂದ್ರಿತವಾಗಿತ್ತು, ಆದರೆ, ತಾಂತ್ರಿಕ ಪ್ರಗತಿ ಮತ್ತು ಜಾಗತೀಕರಣದೊಂದಿಗೆ ನಾವು ಸ್ಪರ್ಧಾತ್ಮಕವಾಗಿ ಉಳಿಯಲು ಇತರ ಕ್ಷೇತ್ರಗಳನ್ನು ಅನ್ವೇಷಿಸಬೇಕು. ನಮ್ಮ ಕೃಷಿ ಪರಂಪರೆಯನ್ನು ಉಳಿಸಿಕೊಂಡು ವೈವಿಧ್ಯಮಯ ಉದ್ಯಮಗಳನ್ನು ಅಳವಡಿಸಿಕೊಳ್ಳಲು ನಮ್ಮ ಸಮುದಾಯದ ಯುವಕರನ್ನು ಪ್ರೇರೇಪಿಸಲು ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗದಂತಹ ವೇದಿಕೆಗಳು ಅತ್ಯಗತ್ಯ'' ಎಂದರು.
ಐಆರ್‌ಎಸ್ ಅಧಿಕಾರಿ ಮತ್ತು ಫಸ್ಟ್ ಸರ್ಕಲ್‌ನ ಮುಖ್ಯ ಮಾರ್ಗದರ್ಶಕ ಜಯರಾಮ್ ರಾಯಪುರ ಮಾತನಾಡಿ, ''ಉದ್ಯಮಿ ಒಕ್ಕಲಿಗ ವೇದಿಕೆಯು ದಕ್ಷಿಣ ಭಾರತದಾದ್ಯಂತ 1 ಕೋಟಿ ಬಲದ ಒಕ್ಕಲಿಗ ಸಮುದಾಯಕ್ಕೆ ಪರಿವರ್ತಕ ವೇದಿಕೆಯನ್ನು ರಚಿಸಲು ಪ್ರಾರಂಭಿಸಿದೆ. ಒಕ್ಕಲಿಗ ಉದ್ಯಮಿಗಳ ನಡುವೆ ಆತ್ಮವಿಶ್ವಾಸ ಮತ್ತು ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಮಹತ್ವದ ಹೆಜ್ಜೆಯಾಗಿದೆ. ಈ ವೇದಿಕೆಯಲ್ಲಿ 10 ಚಿಂತನಾ ಸಭೆಗಳು ನಡೆಯುತ್ತಿದ್ದು, ನೆಟ್‌ವರ್ಕಿಂಗ್ ಮತ್ತು ಜ್ಞಾನ - ಹಂಚಿಕೆಯನ್ನು ಸುಗಮಗೊಳಿಸಲಿದೆ. ಈ ಮೂಲಕ 14 ಪ್ರಮುಖ ಕ್ಷೇತ್ರಗಳಲ್ಲಿ ಒಕ್ಕಲಿಗ ಉದ್ಯಮಶೀಲತೆಯನ್ನು ಸಂಘಟಿಸಲು ಮತ್ತು ಬಲಪಡಿಸಲು ನಮಗೆ ಸಹಾಯವಾಗಲಿದೆ'' ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುಎಎಸ್ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಎಸ್.ವಿ.ಸುರೇಶ್, ಎಫ್‌ಸಿ ರಾಜ್ಯಾಧ್ಯಕ್ಷ ನಂದೀಶ್ ರಾಜೇಗೌಡ, ಜೀನಿ ಪ್ರಾಡಕ್ಟ್ಸ್ ಲಿಮಿಟೆಡ್ ಎಂಡಿ ದಿಲೀಪ್ ಕುಮಾರ್, ಮಂಡ್ಯ ಜಂಟಿ ಕೃಷಿ ನಿರ್ದೇಶಕ ವಿ.ಎಸ್ ಅಶೋಕ್, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಮಂಜುನಾಥ್ ಗೌಡ ಹಾಗೂ ಕೆಎಸ್‌ಟಿಇಪಿಎಸ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಡಾ ಹೊನ್ನೇಗೌಡ, ನಾಗರಾಜ್ ಗೌಡ ಇತರರು ಉಪಸ್ಥಿತರಿದ್ದರು.
ಎಕ್ಸ್‌ಪೋ ಗ್ರಾಮೀಣ ಜನಜೀವನ ಶೈಲಿ ಅನಾವರಣ: ಉದ್ಯಮಶೀಲತೆ ಮತ್ತು ಸಮುದಾಯದ ಸಬಲೀಕರಣವನ್ನು ಉತ್ತೇಜಿಸುವುದು ಈ ಎಕ್ಸ್‌ಪೋದ ಗುರಿಯಾಗಿದೆ. ಕೃಷಿ, ಅಗ್ರಿಟೆಕ್, ಮಹಿಳಾ ಉದ್ಯಮಶೀಲತೆ, ಆಹಾರ ಮತ್ತು ಆತಿಥ್ಯ, ರಿಯಲ್ ಎಸ್ಟೇಟ್, ನಿರ್ಮಾಣ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳ ವ್ಯಾಪಾರ ಅವಕಾಶಗಳು ಮತ್ತು ಚರ್ಚೆಗಳನ್ನು ಪ್ರದರ್ಶಿಸುವಿಕೆಯನ್ನು ಒಳಗೊಂಡಿದೆ. ಗ್ರಾಮೀಣ ಜನಜೀವನ ಶೈಲಿಯನ್ನು ಅನಾವರಣಗೊಳಿಸುವ ಮೂಲಕ ಸಾಕಷ್ಟು ಕಿರು ಮತ್ತು ಮಧ್ಯಮ ಉದ್ಯಮಿಗಳಿಗೆ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಮಳಿಗೆಗಳ ವ್ಯವಸ್ಥೆ ರೂಪಿಸಲಾಗಿದೆ. ಸಾಂಪ್ರದಾಯಿಕ ಎತ್ತಿನ ಗಾಣ ಇಡೀ ಎಕ್ಸ್‌ಪೋದ ಪ್ರಮುಖ ಆಕರ್ಷಣೆಯಾಗಿತ್ತು.
ಇದನ್ನೂ ಓದಿ: ಎಡದಂಡೆಗೆ ಇಂದಿನಿಂದ, ಬಲದಂಡೆಗೆ ಜ.8ರಿಂದ ನೀರು: ಕಾಡಾ ಅಧ್ಯಕ್ಷ ಡಾ.ಅಂಶುಮಂತ್