ನವದೆಹಲಿ/ಬೆಂಗಳೂರು: "ಬೆಂಗಳೂರು ನಗರದ ಕುಡಿಯುವ ನೀರಿನ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಉತ್ತರ ನೀಡಬಲ್ಲ ನಾಯಕ" ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹೇಳಿದರು.
ರಾಜ್ಯಸಭೆಯಲ್ಲಿ ಗುರುವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಸಶಕ್ತವಾಗಿ ನಡೆಸಬಲ್ಲ ಅತ್ಯುನ್ನತ ನಾಯಕ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೆ ಅವರಿಂದ ಮಾತ್ರ ಪರಿಹಾರ ಸಿಗಲು ಸಾಧ್ಯ" ಎಂದರು.
ಬೆಂಗಳೂರಿನಲ್ಲಿ ಒಂದೂವರೆ ಕೋಟಿಯಷ್ಟು ಜನಸಂಖ್ಯೆ ಇದೆ. ಅಷ್ಟು ಜನಕ್ಕೆ 20 ಟಿಎಂಸಿ ನೀರು ಮಾತ್ರ ಸಿಗುತ್ತಿದೆ. 50ಕ್ಕೂ ಅಧಿಕ ಟಿಎಂಸಿ ನೀರಿನ ಬೇಡಿಕೆ ಇದೆ. ಕಾವೇರಿ, ಮಹದಾಯಿ, ಕೃಷ್ಣ ನದಿಗಳ ವ್ಯಾಜ್ಯವು ಮೂರು ರಾಜ್ಯಗಳ ನಡುವೆ ನಡೆಯುತ್ತಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಬೆಂಗಳೂರಿಗೆ ನೀರು ಕೊಡಿಸುವುದು ನನ್ನ ಕೊನೆಯ ಆಸೆ ಎಂದು ಹೇಳಿದರು.
ನಿರಾಕರಿಸಿದ್ದ ಮನಮೋಹನ್ ಸಿಂಗ್ : ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ದಿವಂಗತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಳಿ ಈ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದೆ. ಆದರೆ, ಅವರು ಇದು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದೀಗ, ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಈ ಬಿಕ್ಕಟ್ಟಿಗೆ ಪರಿಹಾರ ಕೊಡಿಸುವ ನಾಯಕ ಎಂದು ನಂಬಿದ್ದೇನೆ ಎಂದು ದೇವೇಗೌಡರು ಅಭಿಪ್ರಾಯಪಟ್ಟರು.
ಮೋದಿ ಅತ್ಯುನ್ನತ ನಾಯಕ : ಮುಂದುವರಿದು ಮಾತನಾಡಿದ ಹಿರಿಯ ಮುತ್ಸದ್ಧಿ ನಾಯಕ, ದೇಶವನ್ನು ಸಶಕ್ತವಾಗಿ ಮುನ್ನಡೆಸಬಲ್ಲ ಛಾತಿ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಅವರ ಅನುಭವದ ಆಧಾರದ ಮೇಲೆ ದೇಶವನ್ನು ಮುನ್ನಡೆಸಬಲ್ಲ ಅತ್ಯುನ್ನತ ನಾಯಕ ಎಂದು ಬಣ್ಣಿಸಿದರು.
ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಕೋಮುವಾದಿ ಮತ್ತು ಒಕ್ಕೂಟ ವ್ಯವಸ್ಥೆಯ ಶತ್ರು ಎಂದೆಲ್ಲಾ ಆರೋಪ ಮಾಡಿದರು. ಆದರೂ, ತಮ್ಮ ನೇತೃತ್ವದಲ್ಲಿ ಮೂರನೇ ಅವಧಿಗೂ ಎನ್ಡಿಎ ಕೂಟವನ್ನು ಅಧಿಕಾರಕ್ಕೆ ತಂದರು. ಪೂರ್ಣ ಬಹುಮತ ಬರದಿದ್ದಾಗ, ಪ್ರಾದೇಶಿಕ ಪಕ್ಷಗಳು ಮೋದಿ ಅವರ ದೂರದೃಷ್ಟಿಯನ್ನು ಗ್ರಹಿಸಿ ಬೆಂಬಲಕ್ಕೆ ನಿಂತವು ಎಂದರು.
ಬುಡಕಟ್ಟು ಜನಾಂಗದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಬೇಕು. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಮಧ್ಯಮ ವರ್ಗ, ಯುವಕರು, ಮಹಿಳೆಯರು ಸೇರಿದಂತೆ ಇತರರಿಗೆ ಆದ್ಯತೆ ನೀಡಿದ್ದಾರೆ. ಈ ಗುರಿಗಳನ್ನು ಸಾಧಿಸಲು, ಐದು ವರ್ಷಗಳ ಕಾಲ ನಡೆಸಬಹುದಾದ ಸ್ಥಿರ ಸರ್ಕಾರ ಹೊಂದಿರುವುದು ಅವಶ್ಯಕ ಎಂದು ಇದೇ ವೇಳೆ ಹೇಳಿದರು.
ಇದನ್ನೂ ಓದಿ; ಕುಮಾರಸ್ವಾಮಿ ಮೊದಲು ಮೇಕೆದಾಟಿಗೆ ಅನುಮತಿ ಕೊಡಿಸಲಿ; ಆಮೇಲೆ ಉಳಿದ ವಿಚಾರ ಮಾತಾಡಲಿ: ಡಿ.ಕೆ. ಶಿವಕುಮಾರ್