ಬೆಂಗಳೂರು: ಕರ್ನಾಟಕದಲ್ಲಿ ಕೇವಲ 15% ಮಹಿಳೆಯರು ಮಾತ್ರ ಚಾಲನಾ ಪರವಾನಗಿ ಪಡೆದಿದ್ದಾರೆ ಎಂದು ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ತಿಳಿಸಿದ್ದಾರೆ.
ಸಖಿ ಸಾರಥಿ : ಸ್ವಾವಲಂಬನೆಯ ಮೊದಲ ಹೆಜ್ಜೆ ಕಾರ್ಯಕ್ರಮದಲ್ಲಿ, ಲಘು ಅಥವಾ ಭಾರಿ ವಾಹನ ಚಾಲನಾ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, "ಭಾರತದಲ್ಲಿ ಮಹಿಳೆಯರು 6.8% ಚಾಲನಾ ಪರವಾನಗಿ ಹೊಂದಿದ್ದರೆ, ಕರ್ನಾಟಕದಲ್ಲಿ ಕೇವಲ 15% ಮಹಿಳೆಯರು ಚಾಲನಾ ಪರವಾನಗಿ ಪಡೆದಿದ್ದಾರೆ. ವಾಣಿಜ್ಯ ಸಾರಿಗೆ ವಾಹನಗಳಲ್ಲಿ (Ola, Uber) ಕೇವಲ 1% ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಿಸುವ ಉದ್ದೇಶವನ್ನು ಈ ತರಬೇತಿ ಹೊಂದಿದ್ದು, ಇದರಿಂದ ಉದ್ಯೋಗ, ಸಂಬಳ ಹಾಗೂ ಗೌರವವೂ ಸಿಗುತ್ತದೆ" ಎಂದು ತಿಳಿಸಿದರು.
"ಸಖಿ ಸಾರಥಿ ಯೋಜನೆ ಮಹಿಳೆಯರಿಗೆ ವಾಹನ ಚಾಲನೆ ಕಲಿಸುವುದು ಮಾತ್ರವಲ್ಲ, ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಲಿದೆ. ಇಂದು ಮಹಿಳೆಯರ ಹೆಜ್ಜೆ ಸಾಮಾಜದ ಸಾಂಪ್ರದಾಯಿಕ ಮಾನದಂಡಗಳಿಗೆ ಸವಾಲು ಹಾಕುವಂತಿರಬೇಕು ಮತ್ತು ಆರ್ಥಿಕತೆಗೂ ಕೊಡುಗೆ ನೀಡುವಂತೆ ಮಹಿಳೆಯರು ಸಬಲರಾಗಬೇಕು" ಎಂದು ಕರೆ ಕೊಟ್ಟರು.
"ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಕಾರ್ಯಕ್ಷೇತ್ರಗಳಲ್ಲಿ ಭೇದ-ಭಾವವಿಲ್ಲದೇ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ "ಸಖಿ ಸಾರಥಿ" ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ 168 ಮಹಿಳೆಯರಿಗೆ ವಾಹನ ಚಾಲನೆ ತರಬೇತಿ ನೀಡಲಾಗುತ್ತಿದೆ" ಎಂದು ತಿಳಿಸಿದರು.
"ಸಖಿ ಸಾರಥಿ ಮಹಿಳಾ ಸಬಲೀಕರಣದತ್ತ ದೊಡ್ಡ ಹೆಜ್ಜೆಯಾಗಿದ್ದು, ಸಮಾನತೆಯನ್ನು ಪ್ರತಿಪಾದಿಸುತ್ತದೆ. ಹೆಚ್.ಎಂ.ವಿ (ಭಾರೀ ಮೋಟಾರ್ ವಾಹನ) ಮತ್ತು ಎಲ್.ಎಂ.ವಿ (ಲಘು ಮೋಟಾರ್ ವಾಹನ) ಪರವಾನಗಿ ಪಡೆಯಲು ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು ಭಾರಿ ವಾಹನ ಹಾಗೂ ಲಘು ವಾಹನ ಎರಡಕ್ಕೂ ಮಹಿಳೆಯರು ಚಾಲನಾ ಪರವಾನಗಿ ಪಡೆಯಬೇಕು" ಎಂದು ಕರೆ ನೀಡಿದರು.
ಇದನ್ನೂ ಓದಿ: ಹಾವೇರಿ : ಗೃಹಲಕ್ಷ್ಮಿ ಹಣ ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ ಆಶಾ ಕಾರ್ಯಕರ್ತೆ