ಬೆಂಗಳೂರು: ಶತ್ರು ರಾಷ್ಟ್ರಗಳ ರೆಡಾರ್ ಕಣ್ತಪ್ಪಿಸಿ ರಹಸ್ಯವಾಗಿ ಕಾರ್ಯಾಚರಣೆ ಮಾಡಬಲ್ಲ 5ನೇ ತಲೆಮಾರಿನ ಅಡ್ವಾನ್ಸ್ ಮೀಡಿಯಂ ಕಾಂಬ್ಯಾಟ್ ಏರ್ ಕ್ರಾಫ್ಟ್ (ಎಸಿಎಂಎ) ನಿರ್ಮಾಣಕ್ಕೆ ರಕ್ಷಣಾ ಮತ್ತು ಸಂಶೋಧನೆ ಸಂಸ್ಥೆಯ (ಡಿಆರ್ಡಿಓ) ಅಡಿಯ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಮುಂದಾಗಿದೆ. ಎಲ್ಲವೂ ಅಂದುಕೊಂಡಂತಾದರೆ 2028ಕ್ಕೆ ಸುಧಾರಿತ ಹಾಗೂ ದೇಶೀಯ ಎಸಿಎಂಎ ಏರ್ ಕ್ರಾಫ್ಟ್ ಹಾರಾಡಲಿದೆ.
ಏರೋ ಇಂಡಿಯಾ-2025 ಪ್ರಯುಕ್ತ ಡಿಆರ್ಡಿಓ ಏರ್ ಕ್ರಾಫ್ಟ್ ಮಾದರಿಯನ್ನ ಪ್ರದರ್ಶನಕ್ಕೆ ಇಡಲಾಗಿದೆ. ಅತ್ಯಾಧುನಿಕ ಹಾಗೂ ನಾವಿನ್ಯತೆಯ ಏರ್ ಕ್ರಾಫ್ಟ್ ತಯಾರಿಕೆಗೆ 2024ರಲ್ಲಿ ರಕ್ಷಣಾ ಇಲಾಖೆ ಅನುಮೋದಿಸಿದ್ದು, ನಗರದ ಹೊರವಲಯದ ಮಂಡೂರಿನಲ್ಲಿ ತಯಾರಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಮೆರಿಕ, ಚೀನಾ, ರಷ್ಯಾ ಮಾತ್ರ ಐದನೇ ತಲೆಮಾರಿನ ಏರ್ ಜೆಟ್ ಹೊಂದಿದೆ. ಈ ಸಾಲಿಗೆ ದೇಶವು ದಾಪುಗಾಲು ಹಾಕುವತ್ತ ಹೆಜ್ಜೆ ಇರಿಸಿದೆ. ಈ ಮೂಲಕ ವಾಯುಪಡೆಯಲ್ಲಿ ಸ್ವಾವಲಂಬನೆಯತ್ತ ಮುಖ ಮಾಡಿದೆ.
ಮೂರು ವರ್ಷಗಳಲ್ಲಿ ಹಾರಡಲಿದೆ ಈ ಯುದ್ದ ವಿಮಾನ: ಲಘು ಯುದ್ದ ವಿಮಾನ ತಯಾರಿಸಲು ವಾಯುಸೇನೆಗೆ ಹಸ್ತಾಂತರಿಸಲು ಸುಮಾರು 20 ವರ್ಷಗಳು ಸಂದಿದ್ದು, ಇದರ ಅನುಭವದ ಆಧಾರದ ಮೇಲೆಗೆ ನೂತನ ಏರ್ ಕ್ರಾಫ್ಟ್ ನಿರ್ಮಿಸಲಾಗುತ್ತಿದೆ. 2028ರಲ್ಲಿ ಮೊದಲ ಪ್ರೊಟೊಟೈಪ್ ನಿರ್ಮಿಸಿ ಹಾರಾಟ ನಡೆಸಲಾಗುವುದು. 2034ರ ವೇಳೆಗೆ ಸುಮಾರು 18 ವಿಮಾನಗಳನ್ನ ತಯಾರಿಸಲು ವಾಯುಸೇನೆಗೆ ಒಪ್ಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದಕ್ಕೆ ಸುಮಾರು 15 ಸಾವಿರ ಕೋಟಿ ರೂ.ಆರಂಭಿಕ ವೆಚ್ಚವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫ್ರಂಟ್ಲೈನ್ ನುಗ್ಗಿ ಶತ್ರುದೇಶಗಳ ಕಂಪ್ಯೂಟರ್ ಮಾನಿಟರಿಂಗ್ ಧ್ವಂಸ: ಅತ್ಯಾಧುನಿಕ ಏರ್ ಕ್ರಾಫ್ಟ್ 25 ಟನ್ ತೂಕವಿರಲಿದೆ. ಗರಿಷ್ಠ 55 ಸಾವಿರ ಅಡಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿರಲಿದೆ. ಯುದ್ದ ಸಂದರ್ಭದಲ್ಲಿ ಮುಂಚೂಣಿಯಾಗಿ ನುಗ್ಗಿ ಶತ್ರುದೇಶಗಳ ರಾಡಾರ್ನ ಕಣ್ತಪ್ಪಿಸಿ ರಹಸ್ಯವಾಗಿ ದಾಳಿ ನಡೆಸಲಿದೆ. ಆ ದೇಶದ ಕಂಪ್ಯೂಟರ್ ಮಾನಿಟರಿಂಗ್ ವ್ಯವಸ್ಥೆಯನ್ನು ಹಾಳುಗೆಡವಲಿದೆ. ಈ ವಿಮಾನದಲ್ಲಿ ಎರಡು ಇಂಜಿನ್ಗಳು, ಓರ್ವ ಪೈಲಟ್ ಹಾರಾಟ ನಡೆಸಬಹುದು. ಯುದ್ದ ವಿಮಾನವು 25 ಟನ್ ತೂಕವಿರಲಿದ್ದು, ಈ ಪೈಕಿ 6 ಟನ್ ಕ್ಷಿಪಣಿ, ಬಾಂಬ್, ರಾಕೆಟ್ಗಳನ್ನು ಇಟ್ಟುಕೊಳ್ಳಬಹುದಾಗಿದೆ. ಭೂ ನಿಗದಿತ ಪ್ರದೇಶ ಹಾಗೂ ವಾಯು ಮಾರ್ಗದ ಮೇಲೆ ನಿಖರ ಗುರಿಯಿಟ್ಟು ದಾಳಿ ನಡೆಸಬಹುದು ಎಂದು ಯೋಜನೆಯ ಹೆಚ್ಚುವರಿ ನಿರ್ದೇಶಕ ನಾಗೇಶ್ 'ಈಟಿವಿ ಭಾರತ್'ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಏರೋ ಇಂಡಿಯಾ ಶೋ: NETRA-5 ಡ್ರೋನ್ ಸಾಮರ್ಥ್ಯ, ವಿಶೇಷತೆಗಳೇನು?
ಇದನ್ನೂ ಓದಿ:ಯೋಧರ ಜೀವಹಾನಿ ತಪ್ಪಿಸಲು ಬರ್ತಿದೆ ಬುಲೆಟ್ ರೆಸಿಸ್ಟೆಂಟ್ ಸೆಕ್ಯೂರಿಟಿ ಬೂತ್