ಬೆಂಗಳೂರು: ಭಾರತದ ಆರ್ಥಿಕತೆಯ ಪರಿವರ್ತನೆಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿರುವ ರಾಜ್ಯ. ಇಂದು ದೇಶದಲ್ಲಿಯೇ ಕರ್ನಾಟಕ ಅತ್ಯಂತ ಹೂಡಿಕೆದಾರ ಸ್ನೇಹಿ ರಾಜ್ಯವೆಂಬ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ದೃಢೀಕರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಜಾಗತಿಕ ಹೂಡಿಕೆದಾರರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಸದೃಢ ನೀತಿ ನಿರೂಪಣೆ, ಸಕ್ರಿಯ ಆಡಳಿತ ಮತ್ತು ವ್ಯವಹಾರ-ಸ್ನೇಹಿ ಪರಿಸರ ವ್ಯವಸ್ಥೆಯಿದ್ದು, ಇಲ್ಲಿ ಮಾಡುವ ಪ್ರತಿ ಹೂಡಿಕೆಯೂ ಯಶಸ್ವಿಯಾಗುವಂತೆ ಹಾಗೂ ಸುಸ್ಥಿರ ಬೆಳವಣಿಗೆಗೆ ಕೊಡುಗೆ ನೀಡುವಂತೆ ಖಾತ್ರಿಪಡಿಸುತ್ತೇವೆ ಎಂದರು.
ಜಾಗತಿಕ ಹೂಡಿಕೆದಾರರ ಸಮಾವೇಶ - ಇನೆವೆಸ್ಟ್ ಕರ್ನಾಟಕ-2025ರಲ್ಲಿ ಆಯೋಜಿಸಿರುವ ನಾವೀನ್ಯತೆಯ ಭವಿಷ್ಯ ಕುರಿತ ವಸ್ತುಪ್ರದರ್ಶನವು ಸುಮಾರು 40ಕ್ಕೂ ಹೆಚ್ಚು ಜಾಗತಿಕ ಕಂಪನಿಗಳು, ಸ್ಟಾರ್ಟ್ ಅಪ್ ಕಂಪನಿಗಳಿಂದ, ಡ್ರೋನ್ ತಂತ್ರಜ್ಞಾನ, ಅಂತರಿಕ್ಷ ತಂತ್ರಜ್ಞಾನ, ಆರೋಗ್ಯ ವಲಯ, ಕೃಷಿ ಹಾಗೂ ಆರೋಗ್ಯ ತಂತ್ರಜ್ಞಾನ ಮತ್ತು ವೈಮಾನಿಕ ಮತ್ತು ರಕ್ಷಣಾ ವಲಯಗಳ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ವಲಯಗಳ ಕುರಿತು ಸ್ವಾಯತ್ತ ಪರಿಹಾರಗಳನ್ನು ಒದಗಿಸುತ್ತಿರುವುದನ್ನು ಬಿಂಬಿಸಲಿದೆ. ನೂತನ ಕೈಗಾರಿಕಾ ನೀತಿ-2025, ನಾವೀನ್ಯತೆ, ಸುಸ್ಥಿರತೆ ಮತ್ತು ಒಳಗೊಳ್ಳುವ ಬೆಳವಣಿಗೆಯನ್ನು ಸೇರಿದಂತೆ ಕರ್ನಾಟಕದ ಮಹತ್ವಾಕಾಂಕ್ಷಿ ದೂರದೃಷ್ಟಿಯನ್ನು ಒತ್ತಿಹೇಳಿದೆ. ಉತ್ಪಾದನಾ ವಲಯದಲ್ಲಿ ಶೇ.12 ರಷ್ಟು ವಾರ್ಷಿಕ ಬೆಳವಣಿಗೆಯ ದರದ ಗುರಿಯನ್ನು ಹೊಂದಿದ್ದು, 2030 ರೊಳಗೆ 7.5 ಲಕ್ಷ ಕೋಟಿ ಹೂಡಿಕೆ ಹಾಗೂ 20 ಲಕ್ಷ ಉದ್ಯೋಗ ಸೃಜನೆಯ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಸೂಕ್ತವಾದ ಸ್ಥಳವನ್ನು ಗುರುತಿಸುವ ಕಾರ್ಯ ಸಕ್ರಿಯವಾಗಿ ನಡೆದಿದೆ. ಬೆಂಗಳೂರಿನ ಜಾಗತಿಕ ಸಂಪರ್ಕ ಮತ್ತು ಆರ್ಥಿಕ ಸಾಮರ್ಥ್ಯವನ್ನು ಇದು ಇನ್ನಷ್ಟು ಉತ್ತೇಜಿಸಲಿದೆ. ರಾಜ್ಯದ 320 ಕಿ.ಮೀ ಉದ್ದದ ಕರಾವಳಿ ಪ್ರದೇಶವು ಅನೇಕ ಬಂದರುಗಳನ್ನು ಹೊಂದಿದ್ದು, ಕಡಲತೀರದ ವ್ಯಾಪಾರ, ಮೀನುಗಾರಿಕೆ ಮತ್ತು ಕರಾವಳಿ ತೀರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ.
15 ಸಾವಿರಕ್ಕೂ ಹೆಚ್ಚು ಸ್ಟಾರ್ಟ್‍ಅಪ್ ಹಾಗೂ 40ಕ್ಕೂ ಹೆಚ್ಚು ಯೂನಿಕಾರ್ನ್ ಹೊಂದಿರುವ ಕರ್ನಾಟಕ ಭಾರತದ ಅತಿದೊಡ್ಡ ಸ್ಟಾರ್ಟ್ ಅಪ್ ಹಬ್ ಮತ್ತು ಜಾಗತಿಕವಾಗಿ ಮೊದಲ ಐದರಲ್ಲಿ ಗುರುತಿಸಿಕೊಂಡಿದೆ. ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರಮುಖ ಕೇಂದ್ರವಾಗಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಳ್ಳುತ್ತಿರುವ ಕರ್ನಾಟಕ ಇಂಟೆಲ್, ಟಿಎಸ್‍ಎಂಸಿ ಮತ್ತು ಮೈಕ್ರಾನ್ ಸಂಸ್ಥೆಗಳಿಂದ ಪ್ರಮುಖ ಹೂಡಿಕೆಗಳನ್ನು ಹೊಂದಿದೆ ಎಂದು ತಿಳಿಸಿದರು.
ಭಾರತದ ಎಲೆಕ್ಟ್ರಾನಿಕ್ ಉತ್ಪನ್ನಗಳ ರಫ್ತಿನಲ್ಲಿ ಶೇ.60 ರಷ್ಟನ್ನು ಪೂರೈಸುವ ಮೂಲಕ ಕರ್ನಾಟಕ ನೆಕ್ಸ್ಟ್ ಜೆನ್ ಚಿಪ್ಸ್ ಹಾಗೂ ಸಾಧನಗಳ ಜಾಗತಿಕ ಪೂರೈಕೆದಾರ ಎನಿಸಿದೆ. ಇನ್‍ಫೋಸಿಸ್, ವಿಪ್ರೋ, ಟಿಸಿಎಸ್, ಗೂಗಲ್, ಅಮೆಜಾನ್ ಮತ್ತು ಆಪಲ್ ನಂತಹ ಪ್ರಮುಖ ಟೆಕ್ ಕಂಪನಿಗಳಿಗೆ ನೆಲೆಯಾಗಿರುವ ಕರ್ನಾಟಕ ಭಾರತದ ಸಾಫ್ಟ್ ವೇರ್ ರಫ್ತಿಗೆ ಶೇ. 40 ರಷ್ಟು ಕೊಡುಗೆ ನೀಡುತ್ತಿದೆ. ಡಿಜಿಟಲ್ ಅರ್ಥಿಕತೆಯನ್ನು ಭವಿಷ್ಯಕ್ಕೆ ಸೂಕ್ತವಾಗುವ ರೀತಿಯಲ್ಲಿ ಅಣಿಮಾಡಲು ಕರ್ನಾಟಕವು ಎಐ ಆಡಳಿತ, ಬ್ಲಾಕ್ ಚೈನ್ ಅಳವಡಿಕೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಗಳಲ್ಲಿ ಹೂಡಿಕೆ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಟೆಸ್ಲಾ, ಓಲಾ ಎಲೆಕ್ಟ್ರಿಕ್, ಏಥರ್ ಎನರ್ಜಿ ಮತ್ತು ಮಹಿಂದ್ರಾ ಎಲೆಕ್ಟ್ರಿಕ್ ಹೂಡಿಕೆ ಮಾಡುವ ಮೂಲಕ ಕರ್ನಾಟಕ, ಭಾರತದ ಇವಿ ರಾಜಧಾನಿಯಾಗಿ ಹೊರಹೊಮ್ಮಿದೆ. ಶೇ. 65 ಕ್ಕೂ ಹೆಚ್ಚು ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನೆ ರಾಜ್ಯದಲ್ಲಿ ಆಗುತ್ತಿದ್ದು, ಕರ್ನಾಟಕ ಭಾರತದ ಅತಿ ದೊಡ್ಡ ಏರೋಸ್ಪೇಸ್ ಕೇಂದ್ರವೂ ಆಗಿದೆ ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನ ಕೈಯಲ್ಲಿ ಭಾರತದ ಭವಿಷ್ಯ, ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಮುಖ ರಾಜ್ಯ: ರಾಜನಾಥ್ ಸಿಂಗ್
ಇದನ್ನೂ ಓದಿ: ಬೆರಳತುದಿಯಲ್ಲಿ 30 ಇಲಾಖೆಗಳ 150 ಸೇವೆಗಳು ಲಭ್ಯ: ಏಕಗವಾಕ್ಷಿ ಪೋರ್ಟಲ್ಗೆ ಸಿಎಂ ಚಾಲನೆ