ಹೈದರಾಬಾದ್: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪುಲಿಚೆರ್ಲಾ ಮಂಡಲದ ಮಂಗಳಂಪೇಟೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮಾಜಿ ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ನಡೆಸಿದ ಭೂಕಬಳಿಕೆ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಜನವರಿ 29ರಂದು 'ಈನಾಡು' ದಿನಪತ್ರಿಕೆ ಪೆದ್ದಿರೆಡ್ಡಿಯವರ ಅಕ್ರಮ ಸಾಮ್ರಾಜ್ಯದ ರಹಸ್ಯವನ್ನು ಸಾಕ್ಷ್ಯಾಧಾರಗಳ ಸಮೇತ ಹೊರಗೆಡವಿತ್ತು.
ಆ ವೇಳೆ ಪತ್ರಿಕಾಗೋಷ್ಠಿ ನಡೆಸಿದ ಪೆದ್ದಿರೆಡ್ಡಿ, ಆ ಎಲ್ಲಾ ಭೂಮಿಯನ್ನು ತಮ್ಮ ಕಠಿಣ ಪರಿಶ್ರಮ ಮತ್ತು ಬೆವರಿನ ಮೂಲಕ ಸಂಪಾದಿಸಿದ್ದು ಎಂದು ಹೇಳುವ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದ ವಿಜಿಲೆನ್ಸ್ ಅಧಿಕಾರಿಗಳು, ಪೆದ್ದಿರೆಡ್ಡಿ ಅವರು ದೊಡ್ಡ ಪ್ರಮಾಣದಲ್ಲಿ ಅರಣ್ಯ ಭೂಮಿಯನ್ನು ಅತಿಕ್ರಮಿಸಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
![ಗೂಗಲ್ ಮ್ಯಾಪ್ನಲ್ಲಿ ಒತ್ತುವರಿ ಪ್ರದೇಶ ಚಿತ್ರಣ](https://etvbharatimages.akamaized.net/etvbharat/prod-images/11-02-2025/23521574_don61.jpg)
ಸರ್ವೆ ಸಂಖ್ಯೆ 295 ಮತ್ತು 296ರಲ್ಲಿ ಕೇವಲ 23.69 ಎಕರೆ ಪಟ್ಟಾ ಭೂಮಿ ಇದ್ದರೂ, ಅದರ ಪಕ್ಕದಲ್ಲೇ ಇದ್ದ ಅರಣ್ಯ ಭೂಮಿಯನ್ನು ಅತಿಕ್ರಮಿಸಲಾಗಿದೆ. ಈ ಮೂಲಕ 104 ಎಕರೆ ಪ್ರದೇಶವನ್ನು ಕೃಷಿ ಭೂಮಿಯನ್ನಾಗಿ ಮಾರ್ಪಡಿಸಿ, ಅದರ ಸುತ್ತಲೂ ಬೇಲಿ ಹಾಕಲಾಗಿದೆ ಎಂದು ವಿಜಿಲೆನ್ಸ್ ಬಹಿರಂಗಪಡಿಸಿದೆ.
ಪೆದ್ದಿರೆಡ್ಡಿ, ಅವರ ಪುತ್ರ ಸಂಸದ ಮಿಥುನ್ ರೆಡ್ಡಿ ಮತ್ತು ಇತರ ಕುಟುಂಬ ಸದಸ್ಯರ ಹೆಸರಿನಲ್ಲಿ 77.54 ಎಕರೆ ಭೂಮಿಯನ್ನು ವೆಬ್‌ಲ್ಯಾಂಡ್ ಆಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ರಾಜಕೀಯ ಪ್ರಭಾವ ಮತ್ತು ಅಧಿಕಾರ ಬಲ ಬಳಸಿಕೊಂಡು ಅರಣ್ಯ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡು, ಪೆದ್ದಿರೆಡ್ಡಿ ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ ಎಂದು ವಿಜೆಲೆನ್ಸ್ ತೀರ್ಮಾನಿಸಿತ್ತು. ಇತ್ತೀಚೆಗೆ ಅದು, ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಸರ್ಕಾರದ ಅನುದಾನದಿಂದಲೇ ಕೃಷಿ ಭೂಮಿಗೆ ಸಂಪರ್ಕಿಸಲು ರಸ್ತೆ ನಿರ್ಮಿಸಿಕೊಳ್ಳಲಾಗಿದೆ ಎಂದು ಉಲ್ಲೇಖಿಸಿದೆ.
![ಮಂಗಲಂಪೇಟೆ ಕಂದಾಯ ಗ್ರಾಮ ನಕ್ಷೆಯ ಪ್ರಕಾರ](https://etvbharatimages.akamaized.net/etvbharat/prod-images/11-02-2025/23521574_don5.jpg)
ಪೆದ್ದಿರೆಡ್ಡಿ ಅಕ್ರಮಗಳ ಬಗ್ಗೆ ವಿಜಿಲೆನ್ಸ್ ಇಲಾಖೆ ನೀಡಿದ 7 ಪುರಾವೆಗಳು:
1. ಭೂ ಸಮೀಕ್ಷೆಯ ವರದಿ ಪ್ರಕಾರ
ಪೆದ್ದಿರೆಡ್ಡಿ ಮತ್ತು ಅವರ ಪುತ್ರ ಮಿಥುನ್ ರೆಡ್ಡಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಮಂಗಳಂಪೇಟೆ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ ಸರ್ವೆ ಸಂಖ್ಯೆ 295 ಮತ್ತು 296 ರಲ್ಲಿ 75.74 ಎಕರೆ ಭೂಮಿಯನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, 1905 ರಿಂದ 1920 ರ ನಡುವೆ ನಡೆಸಿದ ಭೂ ಸಮೀಕ್ಷೆಯ ಪ್ರಕಾರ, ಈ ಗ್ರಾಮದ ಸರ್ವೆ ಸಂಖ್ಯೆ 295 ರಲ್ಲಿ ಕೇವಲ 17.69 ಎಕರೆ, 296 ರಲ್ಲಿ 6 ಎಕರೆ ಸೇರಿ ಒಟ್ಟು 23.69 ಎಕರೆಯಷ್ಟು ಮಾತ್ರ ಪಟ್ಟಾ ಭೂಮಿ ಇದೆ. ಅದು ಸಮತಟ್ಟಾದ ಭೂಮಿ ಎಂಬ ದಾಖಲೆ ಇದೆ.
![ಕಂದಾಯ ಇಲಾಖೆ ವೆಬ್‌ಲ್ಯಾಂಡ್ ಪೋರ್ಟಲ್](https://etvbharatimages.akamaized.net/etvbharat/prod-images/11-02-2025/23521574_don3.jpg)
2. ಪಾಕಾಲ ಉಪ ನೋಂದಣಿ ಕಚೇರಿಯಲ್ಲಿನ ದಾಖಲೆಗಳು
- ಸರ್ವೆ ಸಂಖ್ಯೆ 295 ಮತ್ತು 296 ರಲ್ಲಿ 23.69 ಎಕರೆ ಜಮೀನಿದ್ದರೆ, ಪೆದ್ದಿರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರು 45.80 ಎಕರೆ ಜಮೀನು ಇರುವುದಾಗಿ ನೋಂದಾಯಿಸಿದ ನೋಂದಣಿ ಮಾರಾಟ (ಸೇಲ್ಡೀಡ್ಗಳು) ಪತ್ರಗಳಿವೆ. ಆ ಎರಡು ಸರ್ವೆ ಸಂಖ್ಯೆಗಳನ್ನು ಇಬ್ಬಾಗಿಸಿ ಹೆಚ್ಚಿನ ಭೂಮಿಯನ್ನು ನೋಂದಾಯಿಸಿಕೊಂಡಿದ್ದಾರೆ.
- ಪೆದ್ದಿರೆಡ್ಡಿ ಲಕ್ಷ್ಮಿರೆಡ್ಡಿ ಅವರು ದೇಸಿರೆಡ್ಡಿ ಮಂಗಮ್ಮ ಅವರಿಂದ ಸರ್ವೆ ಸಂಖ್ಯೆ 295/1A ನಲ್ಲಿನ 15 ಎಕರೆ ಭೂಮಿಯನ್ನು ಖರೀದಿಸಿದಂತೆ ಡಿಸೆಂಬರ್ 29, 2000ನೇ ಇಸ್ವಿಯಲ್ಲಿ ನೋಂದಣಿ ಮಾಡಿಸಿದ್ದಾರೆ.
- ಪೆದ್ದಿರೆಡ್ಡಿ ಇಂದಿರಮ್ಮ ಅವರು ದೇಸಿರೆಡ್ಡಿ ಶ್ರೀರಾಮುಲು ರೆಡ್ಡಿ ಅವರಿಂದ 295/1B ನಲ್ಲಿ 10.80 ಎಕರೆ ಭೂಮಿಯನ್ನು 2009ರ ಡಿಸೆಂಬರ್ 29 ರಂದು ಖರೀದಿಸಿದ್ದಾಗಿ ನೋಂದಾಯಿಸಲಾಗಿದೆ.
- ಪೆದ್ದಿರೆಡ್ಡಿ ಮಿಥುನ್ ರೆಡ್ಡಿ ಅವರು ದೇಸಿರೆಡ್ಡಿ ಚೆಂಗಾರೆಡ್ಡಿ ಅವರಿಂದ 295/1C ನಲ್ಲಿನ 10 ಎಕರೆ ಭೂಮಿಯನ್ನು 2001ರ ಜನವರಿ 1 ರಂದು ಖರೀದಿಸಿದ್ದಾಗಿ ನೋಂದಾಯಿಸಲಾಗಿದೆ.
- ಪೆದ್ದಿರೆಡ್ಡಿ ಇಂದಿರಮ್ಮ ಅವರು ದೇಸಿರೆಡ್ಡಿ ಸರ್ವೇಶ್ವರ ರೆಡ್ಡಿ ಅವರಿಂದ 295/1D ಯಲ್ಲಿ 0.89 ಎಕರೆಗಳನ್ನು ಖರೀದಿಸಿದ್ದಾಗಿ 2001ರ ಜನವರಿ 1 ರಂದು ಮಾರಾಟ ಪತ್ರ ನೀಡಲಾಗಿದೆ.
- ಸರ್ವೆ ಸಂಖ್ಯೆ 295 ರಲ್ಲಿ 17.69 ಎಕರೆ ಭೂಮಿ ಇದ್ದರೆ, ಪೆದ್ದಿರೆಡ್ಡಿ ಮತ್ತು ಅವರ ಕುಟುಂಬವು 36.69 ಎಕರೆ ಭೂಮಿಯನ್ನು ಇತರರಿಂದ ಖರೀದಿಸಿದ್ದಾಗಿ ತೋರಿಸಿ ನೋಂದಾಯಿಸಿಕೊಂಡಿದ್ದಾರೆ. ಅಂದರೆ ಆ ಸರ್ವೆ ನಂಬರ್‌ನಲ್ಲಿದ್ದ ಜಾಗಕ್ಕಿಂತ ಹೆಚ್ಚುವರಿಯಾಗಿ 19 ಎಕರೆ ನೋಂದಣಿಯಾಗಿದೆ.
- ಸರ್ವೆ ಸಂಖ್ಯೆ 296 ರಲ್ಲಿ ಕೇವಲ 6 ಎಕರೆ ಭೂಮಿ ಇದ್ದರೂ, ಪೆದ್ದಿರೆಡ್ಡಿ ಇಂದಿರಮ್ಮ ಅವರು 296/1 ರಲ್ಲಿ ದೇಸಿರೆಡ್ಡಿ ಸರ್ವೇಶ್ವರ ರೆಡ್ಡಿ ಅವರಿಂದ 9.11 ಎಕರೆ ಭೂಮಿಯನ್ನು ಜನವರಿ 1, 2001 ರಂದು ಖರೀದಿಸಿದ್ದಾರೆ ಎಂದು ನೋಂದಾಯಿಸಲಾಗಿದೆ. ಅವರು ಅಲ್ಲಿದ್ದ ಜಮೀನಿನ ಜೊತೆಗೆ 3.11 ಎಕರೆಗಳನ್ನು ಹೆಚ್ಚುವರಿಯಾಗಿ ನೋಂದಾಯಿಸಿದ್ದಾರೆ.
3. ಕಂದಾಯ ಇಲಾಖೆ ವೆಬ್‌ಲ್ಯಾಂಡ್ ಪೋರ್ಟಲ್
![ಗ್ರಾಮ ಪಂಚಾಯತ್ ಮೇಲೆ ಒತ್ತಡ ಹೇರಿ](https://etvbharatimages.akamaized.net/etvbharat/prod-images/11-02-2025/23521574_don7.jpg)
- ಸರ್ವೆ ಸಂಖ್ಯೆ 295 ಮತ್ತು 296 ರಲ್ಲಿ 23.69 ಎಕರೆಗಳಿದ್ದರೆ, ಹೊಸ ದಾಖಲೆಯಲ್ಲಿ ಒಟ್ಟು 45.80 ಎಕರೆ ಜಮೀನಿದೆ ಎಂದು ನಮೂದಿಸಲಾಗಿದೆ. ಅಂದರೆ, ಪೆದ್ದಿರೆಡ್ಡಿ ಮತ್ತು ಅವರ ಕುಟುಂಬವು ತಮ್ಮ ರಾಜಕೀಯ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು ಅಲ್ಲಿ ಒಟ್ಟು 77.54 ಎಕರೆಗಳಿದೆ ಎಂದು ದಾಖಲೆಗಳಲ್ಲಿ ತಿದ್ದಿದ್ದಾರೆ.
- ಪೆದ್ದಿರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ 77.54 ಎಕರೆ ನೋಂದಣಿ ಮಾಡಿಸಲಾಗಿದೆ. ಅಂದರೆ, ಅವರು ಇದ್ದ ಆಸ್ತಿಗಿಂತ 53.85 ಎಕರೆ ಭೂಮಿಯನ್ನು ಹೆಚ್ಚುವರಿಯಾಗಿ ತಮ್ಮ ಹೆಸರಿಗೆ ನೋಂದಾಯಿಸಿಕೊಂಡು ಭೂ ಅತಿಕ್ರಮಣ ಮಾಡಿದ್ದಾರೆ.
4. 10-1 ಅಡಂಗಲ್ ಅರಣ್ಯ ದಾಖಲೆ
- ಇದರ ಪ್ರಕಾರ, ಪೆದ್ದಿರೆಡ್ಡಿ ಮತ್ತು ಅವರ ಕುಟುಂಬದವರ ವಶದಲ್ಲಿ 77.54 ಎಕರೆ ಇರುವುದು ಪತ್ತೆಯಾಗಿದೆ. ಅದರಲ್ಲಿ 40.91 ಎಕರೆ ಖರೀದಿಸಿದ್ದರೆ, ಉಳಿದ ಭೂಮಿಯು ಪಿತ್ರಾರ್ಜಿತ, ವಾರಸುದಾರ ಮತ್ತು ಮಾಲೀಕತ್ವದ ವರ್ಗಗಳಲ್ಲಿ ತೋರಿಸಲಾಗಿದೆ. ಆದರೆ, ನೋಂದಣಿ ದಾಖಲೆಗಳ ಪ್ರಕಾರ, 45.80 ಎಕರೆ ಖರೀದಿಸಲಾಗಿದೆ ಎಂದಿದೆ. ಇನ್ನು, ಅಡಂಗಲ್ನ 10-1 ಪ್ರದೇಶದಲ್ಲಿ 40.6 ಎಕರೆಗಳಷ್ಟು ಖರೀದಿಸಲಾಗಿದೆ ಎಂದು ತೋರಿಸುತ್ತದೆ. ಉಳಿದ ಭೂಮಿ ಪಿತ್ರಾರ್ಜಿತವಾಗಿ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
5. ಮಂಗಲಂಪೇಟೆ ಕಂದಾಯ ಗ್ರಾಮ ನಕ್ಷೆಯ ಪ್ರಕಾರ
![ಪಾಕಾಲ ಉಪ ನೋಂದಣಿ ಕಚೇರಿಯಲ್ಲಿನ ದಾಖಲೆಗಳು](https://etvbharatimages.akamaized.net/etvbharat/prod-images/11-02-2025/23521574_don2.jpg)
- ಸರ್ವೆ ಸಂಖ್ಯೆ 295 ಮತ್ತು 296 ರಲ್ಲಿರುವ ಭೂಮಿ ಮಂಗಳಂಪೇಟೆ ಗ್ರಾಮದಿಂದ ಸುಮಾರು 3 ಕಿಲೋಮೀಟರ್ ದೂರ ಆಗ್ನೇಯ ಭಾಗದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿದೆ. ಆ ಎರಡು ಸರ್ವೆ ನಂಬರ್‌ಗಳಲ್ಲಿರುವ ಭೂಮಿ ಬೇರೆ ಬೇರೆ ಸ್ಥಳಗಳಲ್ಲಿದೆ. ಅದರ ಸುತ್ತಲೂ ಸಂರಕ್ಷಿತ ಅರಣ್ಯ ಪ್ರದೇಶವಿದ್ದರೆ, ಮಧ್ಯದಲ್ಲಿ ಆ ಜಮೀನಿದೆ.
6. ಗೂಗಲ್ ಅರ್ಥ್ ನಕ್ಷೆಗಳು ಮತ್ತು ಅಧಿಕಾರಿಗಳ ಕ್ಷೇತ್ರ ಭೇಟಿ
- ಗೂಗಲ್ ಅರ್ಥ್ ನಕ್ಷೆಗಳು ಮತ್ತು ಅಧಿಕಾರಿಗಳ ಕ್ಷೇತ್ರ ಭೇಟಿ ಪ್ರಕಾರ, 295 ಮತ್ತು 296 ಸರ್ವೆ ಸಂಖ್ಯೆಗಳಲ್ಲಿ 23.65 ಎಕರೆಗಳನ್ನು ಆವರಿಸಿಕೊಂಡಿವೆ. ಆದರೆ, ಪೆದ್ದಿರೆಡ್ಡಿ ಒಟ್ಟು 104 ಎಕರೆ ಜಾಗಕ್ಕೆ ಕಬ್ಬಿಣದ ತಂತಿಬೇಲಿ ಹಾಕಿಸಿದ್ದಾರೆ. ಅರಣ್ಯ ಅಧಿಕಾರಿಗಳು ಮತ್ತು ಪಂಚಾಯತ್ ಸರ್ವೇಯರ್ ಜೊತೆಗೆ ವಿಜಿಲೆನ್ಸ್ ದಳವು ಇಡೀ ಪ್ರದೇಶವನ್ನು ಪರಿಶೀಲಿಸಿತು. ಗೂಗಲ್ ಅರ್ಥ್‌ನಲ್ಲಿನ ಕೋಆರ್ಡಿನೇಟ್ಸ್ ಮೂಲಕ ನೋಡಿದಾಗ, ಅದು ಒಟ್ಟು 104 ಎಕರೆಗಳನ್ನು ಒಳಗೊಂಡಿದೆ.
- 10-1 ಅಡಂಗಲ್ ಪ್ರಕಾರ, 86.65 ಎಕರೆಯಷ್ಟು ತೋರಿಸಲಾಗಿದೆ. ಅಂದರೆ ಆ ಸರ್ವೆ ನಂಬರ್‌ಗಳಲ್ಲಿ ದಾಖಲಾಗಿರುವ ಭೂಮಿ ಕೇವಲ 23.69 ಎಕರೆ. 10-1 ಅಡಂಗಲ್‌ನಲ್ಲಿ ಹೆಚ್ಚುವರಿಯಾಗಿ 62.96 ಎಕರೆಗಳಷ್ಟು ಹೆಚ್ಚುವರಿಯಾಗಿ ಸೇರಿಸಲಾಗಿದೆ.
- ಫೇರ್ ಅಡಂಗಲ್ ಪ್ರಕಾರ, ಎರಡು ಸರ್ವೆ ನಂಬರ್‌ಗಳಲ್ಲಿನ ಒಟ್ಟು ಭೂ ವಿಸ್ತೀರ್ಣ ಕೇವಲ 23.69 ಎಕರೆ. ಆದರೆ, ಖರೀದಿ ದಾಖಲೆಗಳಲ್ಲಿ ಇದು 45.80 ಎಕರೆಗಳಷ್ಟಿದೆ. 10-1 ಅಡಂಗಲ್ ಲೆಕ್ಕಾಚಾರದ ಪ್ರಕಾರ, ಇದು 86.65 ಎಕರೆಗಳು. ಬೇಲಿಯಿಂದ ಸುತ್ತುವರಿದ ಭೂಮಿಯ ಒಟ್ಟು ವಿಸ್ತೀರ್ಣ 104 ಎಕರೆ. ಅಂದರೆ ಸರ್ವೆ ಸಂಖ್ಯೆಗಳಲ್ಲಿರುವ ಒಟ್ಟು ಭೂಮಿಗೆ ಹೋಲಿಸಿದರೆ 86.65 ಎಕರೆ ಅರಣ್ಯ ಭೂಮಿಯನ್ನು ಆಕ್ರಮಿಸಲಾಗಿದೆ.
- ಅಲ್ಲಿಗೆ ಹೋಗಿ ವೀಕ್ಷಿಸಿದರೆ, ಅತಿಕ್ರಮಣವಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಸರ್ಕಾರಿ ಮತ್ತು ಅರಣ್ಯ ಭೂಮಿಯನ್ನು ರಕ್ಷಿಸಬೇಕಾದ ಕಂದಾಯ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳಿಗೆ ಈ ಅವ್ಯವಹಾರದ ಬಗ್ಗೆ ತಿಳಿದಿದೆ ಎಂದು ವಿಜಿಲೆನ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
7. ಗ್ರಾಮ ಪಂಚಾಯತ್ ಮೇಲೆ ಒತ್ತಡ ಹೇರಿ
![10-1 ಅಡಂಗಲ್ ಅರಣ್ಯ ದಾಖಲೆ](https://etvbharatimages.akamaized.net/etvbharat/prod-images/11-02-2025/23521574_don4.jpg)
- ಆಗಸ್ಟ್ 18, 2022 ರಂದು ಹೊರಡಿಸಲಾದ ಗೆಜೆಟ್ 1195 ಅನ್ನು ನೋಡಿದರೆ, ಪೆದ್ದಿರೆಡ್ಡಿ ಅವರು ಅರಣ್ಯ ಭೂಮಿಯಲ್ಲಿ ಡಾಂಬರ್ ರಸ್ತೆಯನ್ನು ನಿರ್ಮಿಸಿದ್ದು ಸ್ಪಷ್ಟವಾಗುತ್ತದೆ.
- ಪೆದ್ದಿರೆಡ್ಡಿ ತಮ್ಮ ರಾಜಕೀಯ ಪ್ರಭಾವ ಬಳಸಿ, ಮಂಗಳಂಪೇಟೆ-ಕೊತ್ತಪೇಟೆ ಬಳಿಯ ಗಂಗಮ್ಮಗುಡಿಯಿಂದ ಎಲುಕಾಡುನಿಪೆಂಟ ಎಸ್‌ಟಿ ಕಾಲೋನಿವರೆಗೆ 5 ಕಿಲೋಮೀಟರ್ ರಸ್ತೆ ನಿರ್ಮಿಸಲು ನಾನುವರಿಪಲ್ಲೆ ಪಂಚಾಯತ್‌ನಿಂದ ಒಪ್ಪಿಗೆ ಪಡೆದಿದ್ದಾರೆ. ಆದರೆ, ತಮ್ಮ ಖಾಸಗಿ ಪ್ರದೇಶಕ್ಕೆ ಸಂಪರ್ಕ ಕಲ್ಪಿಸಲು ಸರ್ಕಾರಿ ಅನುದಾನದಲ್ಲಿ ಟಾರ್ ರೋಡ್ ನಿರ್ಮಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಪೆದ್ದಿರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು: ಅರಣ್ಯ ಮತ್ತು ಕಂದಾಯ ಭೂಮಿಯನ್ನು ಅತಿಕ್ರಮಣ ಮಾಡಿರುವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ವಿಜಿಲೆನ್ಸ್ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕ್ರಿಮಿನಲ್ ನಂಬಿಕೆ ದ್ರೋಹದಡಿ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬೇಕೆಂದು ಅದು ಸೂಚಿಸಿದೆ.
![ಗೂಗಲ್ ಅರ್ಥ್ ನಕ್ಷೆಗಳು ಮತ್ತು ಅಧಿಕಾರಿಗಳ ಕ್ಷೇತ್ರ ಭೇಟಿ](https://etvbharatimages.akamaized.net/etvbharat/prod-images/11-02-2025/23521574_don6.jpg)
ಪೆದ್ದಿರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರು ಎಷ್ಟು ಕಂದಾಯ ಮತ್ತು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿದ್ದಾರೆ ಎಂಬುದನ್ನು ನಿರ್ಧರಿಸಲು ಕಂದಾಯ ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ಜಂಟಿ ಸಮೀಕ್ಷೆ ನಡೆಸಬೇಕೆಂದು ವರದಿಯಲ್ಲಿ ಸೂಚಿಸಲಾಗಿದೆ. ಪೆದ್ದಿರೆಡ್ಡಿ ಕುಟುಂಬವು ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡುವಾಗ ಇದಕ್ಕೆ ಸಹಕರಿಸಿದ ಕಂದಾಯ ಮತ್ತು ಅರಣ್ಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅದು ಹೇಳಿದೆ. ಜೊತೆಗೆ, ಅತಿಕ್ರಮಿಸಿದ ಭೂಮಿಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಸೂಚಿಸಿದೆ.
ಇದನ್ನೂ ಓದಿ: ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಇಲ್ಲ ಎಂದ ಟಿಎಂಸಿ: ಕಾಂಗ್ರೆಸ್ ಪ್ರತಿಕ್ರಿಯೆ ಹೀಗಿದೆ