ನವದೆಹಲಿ: ಭಾರತದಲ್ಲಿ ಚಿನ್ನದ ಬೆಲೆ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತು. ಫೆಬ್ರವರಿ 4ರ ದರಗಳಿಗೆ ಹೋಲಿಸಿದರೆ ಬುಧವಾರ 1,322 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಪ್ರತಿ ಗ್ರಾಂಗೆ 8432 ರೂಪಾಯಿಗಳಿಗೆ ತಲುಪಿದೆ. ಅಂದರೆ 24 ಕ್ಯಾರಟ್ ನ ಪ್ರತಿ ತೊಲಾ ಬಂಗಾರಕ್ಕೆ 84320 ರೂಗೆ ತಲುಪಿದೆ. ವರದಿಯ ಪ್ರಕಾರ ಆಯಾಯ ಕೇಂದ್ರ ಬ್ಯಾಂಕ್ ಗಳು ಹೆಚ್ಚಿನ ಬಂಗಾರ ಸಂಗ್ರಹಕ್ಕೆ ಮುಂದಾಗಿರುವುದು ಮತ್ತು ಹೂಡಿಕೆದಾರರ ಬಲವಾದ ಆಸಕ್ತಿಯಿಂದ ಬೆಲೆಗಳು ಹೊಸ ಎತ್ತರಕ್ಕೆ ಏರಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ವಿಶ್ವ ಗೋಲ್ಡ್ ಕೌನ್ಸಿಲ್ (WGC) ಗೋಲ್ಡ್ ಡಿಮ್ಯಾಂಡ್ ಟ್ರೆಂಡ್‌ಗಳ ಮೇಲಿನ ತನ್ನ ಇತ್ತೀಚಿನ ವರದಿಯಲ್ಲಿ, ಬಲವಾದ ಮತ್ತು ನಿರಂತರವಾದ ಕೇಂದ್ರೀಯ ಬ್ಯಾಂಕ್ ಗಳ ಖರೀದಿ ಮತ್ತು ಹೂಡಿಕೆಯ ಬೆಳವಣಿಗೆಯು ಜಾಗತಿಕ ಚಿನ್ನದ ಬೇಡಿಕೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಆಗುವಂತೆ ಮಾಡಿದೆ. 2024 ರಲ್ಲಿ ದಾಖಲೆಯ 4974 ಟನ್‌ಗಳಿಗೆ ಏರಿಕೆ ಕಂಡಿದೆ. ಇದರ ಒಟ್ಟು ಮೌಲ್ಯವು 382 ಶತಕೋಟಿ ಡಾಲರ್ ಗೆ ತಲುಪಿದೆ.
ಅಧಿಕೃತ ವರದಿಗಳ ಪ್ರಕಾರ ಸತತ ಮೂರನೇ ವರ್ಷವೂ ಕೇಂದ್ರ ಬ್ಯಾಂಕ್ ಗಳು 1000 ಟನ್ ಬಂಗಾರ ಖರೀದಿ ಮಾಡಿವೆ. ನಾಲ್ಕನೇ ತ್ರೈ ಮಾಸಿಕದಲ್ಲಿ ಕೇಂದ್ರ ಬ್ಯಾಂಕ್ ಗಳಿಂದ ಚಿನ್ನದ ಖರೀದಿಯು ಗಮನಾರ್ಹವಾಗಿ ಏರಿಕೆ ಕಂಡಿದೆ.
ಗೋಲ್ಡ್ ಇಟಿಎಫ್ ಗಳಿಗೆ ಇನ್ನಿಲ್ಲದ ಬೇಡಿಕೆ: 2024 ರ ದ್ವಿತೀಯಾರ್ಧದಲ್ಲಿ ಚಿನ್ನದ ವಿನಿಮಯ ಟ್ರೇಡೆಡ್ ಫಂಡ್‌ಗಳ (ಇಟಿಎಫ್‌ಗಳು) ಬೇಡಿಕೆಯಲ್ಲಿನ ಪುನರುಜ್ಜೀವನದಿಂದ ನಾಲ್ಕು ವರ್ಷಗಳ ಗರಿಷ್ಠ ಅಂದರೆ 1180 ಟನ್‌ಗಳಿಗೆ ಏರಿಕೆ ಆಗಿದೆ ಎಂದು WGC ಉಲ್ಲೇಖಿಸಿದೆ. ಹೆಚ್ಚುತ್ತಿರುವ ಬೆಲೆಗಳು ಜಗತ್ತಿನಾದ್ಯಂತ ಆಭರಣ ವಲಯದಲ್ಲಿ ಬೇಡಿಕೆ ಕಡಿಮೆಗೊಳಿಸಿದರೆ, ಭಾರತದ ಚಿನ್ನದ ಬೇಡಿಕೆಯು 2024 ರಲ್ಲಿ ಸ್ಥಿತಿಸ್ಥಾಪಕತ್ವ ಹೊಂದಿದೆ. 2023 ಕ್ಕೆ ಹೋಲಿಸಿದರೆ ಕೇವಲ ಶೇ 2 ರಷ್ಟು ಕಡಿಮೆಯಾಗಿದೆ. ಆದರೆ ಚೀನಾ ಶೇ24 ಕುಸಿತ ಕಂಡಿದೆ.
ಭಾರತದ ಜನ 2024 ರಲ್ಲಿ ಎಷ್ಟು ಟನ್ ಬಂಗಾರ ಕೊಂಡಿದ್ದಾರೆ ಗೊತ್ತಾ?: ಇತ್ತೀಚಿನ ವರದಿಗಳ ಪ್ರಕಾರ 2024 ರಲ್ಲಿ ಭಾರತವು ಚೀನಾವನ್ನು ಮೀರಿಸಿ ಚಿನ್ನದ ಆಭರಣಗಳನ್ನು ಖರೀದಿಸುವ ಮೂಲಕ ವಿಶ್ವದ ಅತಿದೊಡ್ಡ ಗ್ರಾಹಕನಾಗಿ ಹೊರ ಹೊಮ್ಮಿರುವುದನ್ನು ತೋರಿಸಿದೆ. ಭಾರತದಲ್ಲಿ ಆಭರಣ ಬಳಕೆ 563.4 ಟನ್‌ಗಳಷ್ಟಿದ್ದರೆ, ಚೀನಾದಲ್ಲಿ ಈ ಪ್ರಮಾಣ 511.4 ಟನ್‌ಗಳಷ್ಟಿತ್ತು.
ತಜ್ಞರು ಹೇಳುವುದೇನು?: ಚಿನ್ನ ಮತ್ತೆ ಮುನ್ನಲೆಗೆ ಬಂದಿದೆ. 2024 ರಲ್ಲಿ ಶೇ 40ರಷ್ಟು ಬೆಲೆ ಏರಿಕೆ ದಾಖಲಿಸುವ ಮೂಲಕ ಚಿನ್ನ ದಾಖಲೆ ಬರೆದಿದೆ. ಕೇಂದ್ರ ಬ್ಯಾಂಕ್ ಗಳಿಂದ ಚಿನ್ನದ ಖರೀದಿಯು ಬೇಡಿಕೆಯ ತೀವ್ರತೆ ತೋರಿಸುತ್ತಿದೆ ಎಂದು WG ಮಾರುಕಟ್ಟೆಯ ಹಿರಿಯ ವಿಶ್ಲೇಷಕ ಲೂಯಿಸ್ ಸ್ಟ್ರೀಟ್ ಅಭಿಪ್ರಾಯಪಟ್ಟಿದ್ದಾರೆ.
2025 ರಲ್ಲಿ ಏನಾಗಬಹುದು?: 2025ರಲ್ಲೂ ಕೇಂದ್ರೀಯ ಬ್ಯಾಂಕ್ ಗಳು ಖರೀದಿಯನ್ನು ಮುಂದುವರಿಸುವ ಮೂಲಕ ಡ್ರೈವಿಂಗ್ ಸೀಟ್ ನಲ್ಲೇ ಮುಂದುವರೆಯುವ ಸಾಧ್ಯತೆಗಳಿವೆ. ಚಿನ್ನದ ಇಟಿಎಫ್ ಹೂಡಿಕೆದಾರರ ಪ್ರಮಾಣದಲ್ಲಿ ಈ ಬಾರಿಯೂ ಇನ್ನಷ್ಟು ಏರಿಕೆ ಕಂಡು ಬರಬಹುದು.
ಆಭರಣ ಚಿನ್ನ ಖರೀದಿ ಮೇಲೆ ಹೊಡೆತ ಸಾಧ್ಯತೆ: ಮತ್ತೊಂದೆಡೆ, ಚಿನ್ನಾಭರಣಗಳ ಖರೀದಿ ದುರ್ಬಲಗಿಳ್ಳುತ್ತಾ ಸಾಗುವ ಸಾಧ್ಯತೆಗಳಿವೆ. ಹೆಚ್ಚುತ್ತಿರುವ ಚಿನ್ನದ ಬೆಲೆಯಿಂದಾಗಿ ಆಭರಣ ಖರೀದಿ ಮೇಲೆ ಪರಿಣಾಮ ಬೀರಬಹುದು. ಈ ಮೃದುವಾದ ಆರ್ಥಿಕ ಬೆಳವಣಿಗೆಯು ಗ್ರಾಹಕರ ಖರ್ಚಿನ ಶಕ್ತಿಯನ್ನು ಕಡಿಮೆ ಮಾಡುವುದಂತೂ ಸತ್ಯ. ಭೌಗೋಳಿಕ ರಾಜಕೀಯ ಮತ್ತು ಸ್ಥೂಲ ಆರ್ಥಿಕ ಅನಿಶ್ಚಿತತೆಯು ಈ ವರ್ಷ ಪ್ರಚಲಿತ ವಿಷಯಗಳಾಗುವ ಸಾಧ್ಯತೆಗಳಿವೆ. ಸಂಪತ್ತಿನ ಅಂಗಡಿಯಾಗಿ ಚಿನ್ನವು ಮಿಂಚಲಿದೆ. ಅಪಾಯದ ವಿರುದ್ಧ ರಕ್ಷಣೆ ನೀಡುತ್ತದೆ ಎಂದು ಲೂಯಿಸ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ದೇಶಾದ್ಯಂತ ಚಿನ್ನದ ದರ ಹೀಗಿತ್ತು: ದೆಹಲಿಯಲ್ಲಿ ಬುಧವಾರ 24ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 85,383 ರೂ.ಗಳಾಗಿದ್ದರೆ, ಚೆನ್ನೈನಲ್ಲಿ 10 ಗ್ರಾಂಗೆ 85,231 ರೂ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ಕ್ರಮವಾಗಿ 85,237 ಮತ್ತು 85,235 ರೂ.ಗಳಾಗಿತ್ತು.
ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಂ ಆಭರಣ ಬಂಗಾರಕ್ಕೆ 80,200 ರೂ ದರ ಇತ್ತು.
ಇದನ್ನು ಓದಿ: ಗೃಹ ಬಳಕೆ ವೆಚ್ಚ ಸಮೀಕ್ಷೆ: ಕರ್ನಾಟಕದ ಗ್ರಾಮೀಣ ಭಾಗ, ಜಾರ್ಖಂಡ್‌ನ ನಗರಗಳ ಚಿತ್ರಣ ವಿಭಿನ್ನ