ರಾಮನಗರ: ಕರ್ನಾಟಕ ರಾಜ್ಯ ರೈತ ಸಂಘವು ರಾಮನಗರದ ಜಿಲ್ಲಾಧಿಕಾರಿಗಳು ಸಂವಿಧಾನ ಬಾಹಿರವಾಗಿ ಆದೇಶಿಸಿದ್ದ ಶಾಶ್ವತ ನಿಷೇದಾಜ್ಞೆ ವಿರೋಧಿಸಿ ಜನವರಿ 6ನೇ ತಾರೀಖಿನಂದು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಕೈ ಬಿಡುವಂತೆ ಕೋರಲು ಕರೆದಿದ್ದ ಶಾಂತಿ ಸೌಹಾರ್ದ ಸಭೆಯಲ್ಲಿನ ಮನವಿಯನ್ನು ರೈತ ಸಂಘದ ನಾಯಕರು ತಿರಸ್ಕರಿಸಿದ್ದರಿಂದ ಸಭೆ ವಿಫಲಗೊಂಡಿದೆ.
ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು. ರಾಮನಗರಕ್ಕೆ ನೂತನವಾಗಿ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಯಶವಂತ್ ಗುರುಕಾರ್ ಅವರು ಪ್ರತಿಭಟನೆಗಳಿಂದ ಇಲಾಖೆಯ ನೌಕರರಿಗೆ ಕೆಲಸ ನಿರ್ವಹಿಸಲು ಅಡ್ಡಿಯಾಗುತ್ತಿದೆ ಎಂಬ ನೆಪವೊಡ್ಡಿ, ಶಾಶ್ವತ ನಿಷೇದಾಜ್ಞೆ ಘೋಷಿಸಿ ಆದೇಶಿಸಿದ್ದರು. ಈ ಆದೇಶ ವಿರೋಧಿಸಿ ರೈತ ಸಂಘವು ಕೆಲವು ತಿಂಗಳ ಹಿಂದೆ ಪ್ರತಿಭಟನೆ ಹಮ್ಮಿಕೊಂಡರೂ ಆದೇಶ ತೆರವಿಗೆ ಜಿಲ್ಲಾಧಿಕಾರಿ ಒಪ್ಪದ ಕಾರಣ ಮುಂದುವರೆದಿತ್ತು.
ರೈತ ಸಂಘವು ಕನ್ನಡಪರ, ದಲಿತಪರ, ಜನಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡ ಕಾರಣ, ರಾಮನಗರ ಪೊಲೀಸ್ ವರಿಷ್ಠಾಧಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ , ಉಪವಿಭಾಗಾಧಿಕಾರಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಸೌಹಾರ್ದ ಸಭೆ ನಡೆಸಿ ಪ್ರತಿಭಟನೆ ಹಿಂತೆಗೆದುಕೊಂಡು ರೈತ ಸಂಘದ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಸಭೆ ಸೇರಿ ಚರ್ಚಿಸುವಂತೆ ಮನವಿ ಮಾಡಿದರು.
ನಾಳೆ ಬಾ ಎಂಬ ಕೂಗು ಮಾರಿಯಂತೆ ಕೆಲಸ - ಆರೋಪ: ಈ ಮನವಿಯನ್ನು ತಿರಸ್ಕರಿಸಿ ಮಾತನಾಡಿದ ರಾಜ್ಯ ರೈತ ಸಂಘದ ವಿಭಾಗೀಯ ಅಧ್ಯಕ್ಷರಾದ ಮಲ್ಲಯ್ಯ, "ಜಿಲ್ಲಾಧಿಕಾರಿಗಳು ಜಿಲ್ಲೆಯ ಮೊದಲ ಕೂಲಿಯಾಗಿದ್ದಾರೆ. ಕಂದಾಯ ಇಲಾಖೆಯು ರೈತರಿಗೆ ಸಂಬಂಧಿಸಿದ್ದಾಗಿದ್ದು, ಇಲಾಖೆಯಲ್ಲಿ ಯಾವ ಅರ್ಜಿಗಳೂ ವಿಲೇವಾರಿಯಾಗದೇ ರೈತರು ಹೈರಾಣಾಗಿದ್ದಾರೆ. ಅಧಿಕಾರಿಗಳು ನಾಳೆ ಬಾ ಎಂಬ ಕೂಗು ಮಾರಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಶೋಷಣೆಗಳನ್ನು ಪ್ರಶ್ನಿಸುವಬಾರದು ಎಂಬುದು ಸರ್ವಾಧಿಕಾರ ಮನಸ್ಥಿತಿ. ಇಡೀ ಜಿಲ್ಲೆಯ ಕೇಂದ್ರಸ್ಥಾನ ಜಿಲ್ಲಾಧಿಕಾರಿ ಆಡಳಿತ ಸೌಧವಾಗಿದ್ದು, ಜಿಲ್ಲೆಯ ಅನ್ಯಾಯಗಳನ್ನು ಇಲ್ಲಿಯೇ ಪ್ರಶ್ನಿಸಿ, ಪ್ರತಿಭಟಿಸಿ ನ್ಯಾಯ ಪಡೆದುಕೊಳ್ಳಲು ನಮಗೆ ಸಂವಿಧಾನ ಬದ್ದ ಹಕ್ಕಿದೆ. ಅದನ್ನು ನಾವು ಮರುಸ್ಥಾಪಿಸುತ್ತೇವೆ" ಎಂದರು.
ರಾಜ್ಯದಲ್ಲಿ ಎಲ್ಲೂ ಇಲ್ಲದ ನಿಷೇಧಾಜ್ಞೆ ಇಲ್ಲಿ ಏಕೆ?: ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, "ಜಿಲ್ಲಾಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗಿಂತ ಪರಮೋಚ್ಛ ಅಧಿಕಾರ ಹೊಂದಿದ್ದಾರೆಯೇ?. ಇಡೀ ರಾಜ್ಯದ ಯಾವ ಜಿಲ್ಲೆಯಲ್ಲಿ ಕೂಡ ಇಲ್ಲದ ನಿಷೇದಾಜ್ಞೆ ಇಲ್ಲಿ ಹೇರಲು ಕಾರಣವೇನು?. ಎಲ್ಲೆಡೆ ಸಂಘಟನೆಗಳ ಹೋರಾಟ ಸಾಮಾನ್ಯ ಸಂಗತಿ. ಆದರೆ, ಜಿಲ್ಲಾಧಿಕಾರಿ ಗಳು ಆಡಳಿತವನ್ನು ಜನರ ಬಾಗಿಲಿಗೆ ಒಯ್ದು ಜನಪರವಾಗಿ ಕರ್ತವ್ಯ ನಿರ್ವಹಿಸಿದರೆ ಹೋರಾಟ ನಡೆವುದೇ ಇಲ್ಲ. ಇಂತಹ ಕನಿಷ್ಠ ವಿವೇಚನೆಯೂ ಇಲ್ಲದ ಜಿಲ್ಲಾಧಿಕಾರಿಗಳು ತಮ್ಮನ್ನು ತಾವು ಮುಕುಟವಿಲ್ಲದ ಸಾಮ್ರಾಟ" ಎಂದು ಭಾವಿಸಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಎಲ್ಲ ಸಿರಿಧಾನ್ಯಗಳನ್ನು ಎಂಎಸ್ಪಿ ವ್ಯಾಪ್ತಿಗೆ ತನ್ನಿ; ಕೇಂದ್ರ ಸರ್ಕಾರಕ್ಕೆ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮನವಿ