ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್ ಸಹೋದರಿ ಸೋಗಿನಲ್ಲಿ ಮಹಿಳೆಗೆ 3.25 ಕೋಟಿ ರೂ. ವಂಚನೆ ಸಂಬಂಧ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ ಐಶ್ವರ್ಯಗೌಡ ದಂಪತಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಜಾಮೀನು ಆದೇಶ ದೊರೆಯುತ್ತಿದ್ದಂತೆ ಐಶ್ವರ್ಯಗೌಡ ದಂಪತಿ ಪರ ವಕೀಲರು ಕೋರಮಂಗಲದ ಎನ್ಜಿವಿ ಬಡಾವಣೆಯಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮನೆಗೆ ತೆರಳಿ ಜಾಮೀನು ಪ್ರತಿ ಆದೇಶ ತೋರಿಸಿದರೆ ಆರೋಪಿಗಳು ಬಿಡುಗಡೆಯಾಗಲಿದ್ದಾರೆ.
ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ಲಿಖಿತ ರೂಪದಲ್ಲಿ ನೋಟಿಸ್ ಜಾರಿ ಮಾಡಿಲ್ಲ. ಈ ಪ್ರಕರಣದಲ್ಲಿ ಪೊಲೀಸರು ಬಂಧನ ಪ್ರಕ್ರಿಯೆಯನ್ನು ಕ್ರಮಬದ್ಧವಾಗಿ ಮಾಡಿಲ್ಲ. ಹೀಗಾಗಿ ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡುವಂತೆ ಆರೋಪಿಗಳ ಪರ ವಕೀಲ ಸುನೀಲ್ ರೆಡ್ಡಿ ಮನವಿ ಮಾಡಿದ್ದರು. ಮನವಿ ಆಲಿಸಿದ ಹೈಕೋರ್ಟ್, ಆರೋಪಿಗಳಿಗೆ ವಿಚಾರಣೆ ನೋಟಿಸ್ ನೀಡದಿರುವುದನ್ನು ಆಕ್ಷೇಪಿಸಿ ಜಾಮೀನು ಮಾನ್ಯ ಮಾಡಿತು.
ವಾರಾಹಿ ಜ್ಯುವೆಲ್ಲರಿ ಮಾಲೀಕರಿಗೆ ಚಿನ್ನಾಭರಣ ವಂಚನೆ ಪ್ರಕರಣದಲ್ಲಿಯೂ ಐಶ್ವರ್ಯಗೌಡ ದಂಪತಿಗಳಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಬಂಧನಕ್ಕೆ ಕಾರಣಗಳನ್ನು ಲಿಖಿತ ರೂಪದಲ್ಲಿ ಪೊಲೀಸರು ನೀಡಿಲ್ಲ ಎಂಬ ಅಂಶದ ಮೇಲೆ ಜಾಮೀನು ಅರ್ಜಿಯನ್ನ ನ್ಯಾಯಾಲಯ ಎತ್ತಿ ಹಿಡಿದಿತ್ತು.
ಉನ್ನತ ಮಟ್ಟದ ತನಿಖೆಯಾಗಬೇಕು: ಆರೋಪಿಗಳಿಗೆ ಜಾಮೀನು ದೊರೆಯುತ್ತಿದ್ದಂತೆ ಪ್ರಕರಣ ದೂರುದಾರರಾಗಿರುವ ಶಿಲ್ಪಾಗೌಡ ಪ್ರತಿಕ್ರಿಯಿಸಿ, "ಐಶ್ವರ್ಯಗೌಡ ವಿರುದ್ಧ ವಂಚನೆ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಬೇಕು. ನನಗೊಬ್ಬಳಿಗೆ ಮಾತ್ರವಲ್ಲದೇ ಹಲವರಿಗೆ ವಂಚಿಸಿದ್ದಾಳೆ. ಪ್ರಕರಣದಲ್ಲಿ ನನಗೆ ಪೊಲೀಸರು ನ್ಯಾಯ ಒದಗಿಸಿಬೇಕು ಎಂದು" ಒತ್ತಾಯಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಡಿ.ಕೆ.ಸುರೇಶ್ ಸಹೋದರಿ ಸೋಗಿನಲ್ಲಿ ಚಿನ್ನ ವ್ಯಾಪಾರ, ಚಿಟ್ ಫಂಡ್ಸ್ ಹಾಗೂ ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿಕೊಂಡಿದ್ದೇನೆ, ತಮ್ಮ ವ್ಯವಹಾರದಲ್ಲಿ ಹಣ ಹೂಡಿದರೆ ಹೆಚ್ಚು ಹಣ ಸಂಪಾದಿಸಬಹುದು. ಅಲ್ಲದೇ, ತಮ್ಮ ಬಳಿ ಚಿನ್ನ ಖರೀದಿಸಿದರೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನೀಡುವುದಾಗಿ ಐಶ್ವರ್ಯಗೌಡ ಆಮಿಷವೊಡ್ಡಿದ್ದಳು. ಇದನ್ನು ನಂಬಿ 2022ರಿಂದ 2024ರವರೆಗೆ ಹಂತ ಹಂತವಾಗಿ 3.25 ಕೋಟಿಯನ್ನು ಪತಿ ಹರೀಶ್ ಸೇರಿ ಇತರರ ಬ್ಯಾಂಕ್ ಖಾತೆಗಳಿಗೆ ಐಶ್ವರ್ಯಗೌಡ ವರ್ಗಾಯಿಸಿಕೊಂಡಿದ್ದಳು ಎಂದು ಶಿಲ್ಪಾಗೌಡ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.
2023ರ ಜೂನ್ನಲ್ಲಿ ವ್ಯವಹಾರಕ್ಕೆ ತುರ್ತು ಹಣ ಬೇಕು ಎಂದು 430 ಗ್ರಾಂ ಚಿನ್ನ ಪಡೆದುಕೊಂಡಿದ್ದಳು. ಕೆಲ ದಿನ ಬಳಿಕ ಅನುಮಾನ ಬಂದು ತಾನು ನೀಡಿದ ಹಣ ಹಾಗೂ ಆಭರಣ ವಾಪಸ್ ನೀಡುವಂತೆ ಕೇಳಿದಾಗ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಳು. ತನಗೆ ರಾಜಕಾರಣಿಗಳ ಬೆಂಬಲವಿದ್ದು ನಿನಗೆ ಒಂದು ಗತಿ ಕಾಣಿಸುತ್ತೇನೆ. ನಿನ್ನ ಚಾರಿತ್ರ್ಯದ ಬಗ್ಗೆ ಇಲ್ಲಸಲ್ಲದ ಸುದ್ದಿ ಹಬ್ಬಿಸಿ ಮರ್ಯಾದೆ ಕಳೆಯುವಂತೆ ಮಾಡುತ್ತೇನೆ ಎಂದು ಐಶ್ವರ್ಯ ಬೆದರಿಕೆ ಹಾಕಿದ್ದಳು ಎಂದು ಶಿಲ್ಪಾ ದೂರಿನಲ್ಲಿ ವಿವರಿಸಿದ್ದರು.
ಇದನ್ನೂ ಓದಿ: ದರ್ಶನ್ ಸೇರಿ ಎಲ್ಲ ಆರೋಪಿಗಳ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ