ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ನ ವಿಜೇತ, ನಟ-ನಿರ್ದೇಶಕ ರೂಪೇಶ್ ಶೆಟ್ಟಿ ಸಾರಥ್ಯದ 'ಜೈ' ಶೀರ್ಷಿಕೆಯ ತುಳು ಸಿನಿಮಾದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಮಂಗಳೂರಿಗೆ ಬಂದು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ತಮ್ಮ ಭಾಗದ ಶೂಟಿಂಗ್ ಮುಗಿಸಿ ಮುಂಬೈಗೆ ವಾಪಸ್ಸಾಗಿರುವ ಪಾಪ್ಯುಲರ್ ಸ್ಟಾರ್ ಬಗ್ಗೆ ರೂಪೇಶ್ ಶೆಟ್ಟಿ ಗುಣಗಾನ ಮಾಡಿದ್ದಾರೆ.
ಹೌದು, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸುನೀಲ್ ಶೆಟ್ಟಿ ಅವರನ್ನೊಳಗೊಂಡ ವಿಡಿಯೋ ಹಂಚಿಕೊಂಡ ರೂಪೇಶ್ ಶೆಟ್ಟಿ, ''ಕಳೆದ ಒಂದು ವಾರ ನನ್ನ ಸಿನಿಮಾ ಜೀವನದ ಒಂದು ಅದ್ಭುತ ಅನುಭವವನ್ನು ಕಟ್ಟಿ ಕೊಟ್ಟ ವಾರವಾಗಿತ್ತು. ನನಗೆ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಸುನೀಲ್ ಶೆಟ್ಟಿ ಸರ್ ಅವರ ಗುಣದಿಂದ ನಿಜವಾಗಿಯೂ ಸೂಪರ್ ಸ್ಟಾರ್. ಥ್ಯಾಂಕ್ ಯೂ ಸೋ ಮಚ್ ಅಣ್ಣಾ. ನೀವು ನಿಜವಾದ ಹೀರೋ'' ಎಂದು ಬರೆದುಕೊಂಡಿದ್ದಾರೆ.
ಮಂಗಳೂರಿಗೆ ಬಾಲಿವುಡ್ ನಟನ ಎಂಟ್ರಿ, ಶೂಟಿಂಗ್ನಲ್ಲಿ ಭಾಗಿಯಾಗಿರೋ ಕ್ಷಣಗಳನ್ನು ರೂಪೇಶ್ ಶೆಟ್ಟಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕಾಣಬಹುದು. ಈ ಪೋಸ್ಟ್ಗೆ ಮೆಚ್ಚುಗೆ, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಲೇ ಇದೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ತುಳು ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ಸಿದ್ಧವಾಗುತ್ತಿದೆ ಜೈ' ಎಂದು ತಿಳಿಸಿದ್ದಾರೆ. ರೂಪೇಶ್ ಅಣ್ಣಾ ನಾವು ಸದಾ ನಿಮ್ಮ ಜೊತೆ ಇದ್ದೇವೆ ಎಂದು ಅಭಿಮಾನಿಯೋರ್ವರು ತಮ್ಮ ಸಾಥ್ ನೀಡಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, ಜೈ ತುಳು ಚಿತ್ರ ಮಂಗಳೂರಿನ ಹೆಮ್ಮೆ ಎಂದು ತಿಳಿಸಿದ್ದಾರೆ. ಬ್ಲಾಕ್ಬಸ್ಟರ್ ಸಿನಿಮಾ ರೆಡಿ ಎಂದು ಅಭಿಮಾನಿಯೋರ್ವರು ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಡೆಯಲಾಗದ ಸ್ಥಿತಿಯಲ್ಲಿ ರಶ್ಮಿಕಾ ಮಂದಣ್ಣ: ಕುಟುಂತ್ತಾ ಏರ್ಪೋರ್ಟ್ಗೆ ಬಂದ ನಟಿ, ವೀಲ್ ಚೇರ್ನಲ್ಲಿ ಕುಳಿತ ವಿಡಿಯೋ ವೈರಲ್
ಮಂಗಳೂರಿಗೆ ತಲುಪಿದಾಗ ತುಳು ಭಾಷೆಯಲ್ಲೇ ಮಾತನಾಡಿದ್ದ ಸುನೀಲ್ ಶೆಟ್ಟಿ, ''ತುಳು ಚಿತ್ರರಂಗದಲ್ಲಿ ಪ್ರಗತಿ ಕಾಣುತ್ತಿದೆ. ಇದು ನನ್ನ ಚೊಚ್ಚಲ ಚಿತ್ರ. ಜೈ ಸಿನಿಮಾ ಸಬ್ಕೆಕ್ಟ್ ಬಗ್ಗೆ ರೂಪೇಶ್ ಶೆಟ್ಟಿ ಅವರು ನನ್ನಲ್ಲಿ ತಿಳಿಸಿದಾಗ ಈ ಚಿತ್ರದಲ್ಲಿ ನಟಿಸಬೇಕು ಎಂದನಿಸಿತು. ತುಳು ಸಿನಿಮಾದಲ್ಲಿ ನಟಿಸುತ್ತಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ಇದು ನನ್ನ ಚೊಚ್ಚಲ ತುಳು ಚಿತ್ರ'' ಎಂದು ತಿಳಿಸಿದರು.
ಇದನ್ನೂ ಓದಿ: ವಾರ್ ಸೀಕ್ವೆನ್ಸ್ ಶೂಟಿಂಗ್ ತಯಾರಿಯಲ್ಲಿ 'ಕಾಂತಾರ ಚಾಪ್ಟರ್ 1' ಚಿತ್ರತಂಡ
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟ, ಮುಂಬೈನಲ್ಲಿ ಬೆಳೆದರೂ, ಹುಟ್ಟೂರು ತುಳುನಾಡು. ತುಳುನಾಡಿನ ಬಗ್ಗೆ ಹೆಮ್ಮೆಯಿದೆ. ಜೈ ಚಿತ್ರದಲ್ಲಿ ಗೆಸ್ಟ್ ರೋಲ್ ನಿರ್ವಹಿಸುತ್ತಿದ್ದೇನೆ. ಮುಂದೊಂದು ದಿನ ಪೂರ್ಣ ಪ್ರಮಾಣದ ತುಳು ಸಿನಿಮಾ ಮಾಡುವ ಆಸೆಯಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.