ಹಾಸನ : ರೀಲ್ಸ್ ಮಾಡಲು ಬೆಟ್ಟದ ತುದಿಯಲ್ಲಿ ನಿಂತ ಯುವಕ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಗಾಯಗೊಂಡ ಘಟನೆ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ನಡೆದಿದೆ. ರಾಕಿದ್ (18) ನೂರು ಅಡಿಗೂ ಹೆಚ್ಚು ಆಳದ ಪ್ರಪಾತಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡ ಯುವಕ.
ಶನಿವಾರಸಂತೆಯಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸಕಲೇಶಪುರದ ಗವಿಬೆಟ್ಟಕ್ಕೆ ಬಂದಿದ್ದ ರಾಕಿದ್, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದ ವೇಳೆ ಜಾರಿ ಬಿದ್ದ ಪರಿಣಾಮ ಆತನ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಮತ್ತು ಯಸಳೂರು ಠಾಣೆ ಪೊಲೀಸರ ಸಹಾಯದಿಂದ ರಾಕಿದ್ ನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಅಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ವೈದ್ಯರ ಸಲಹೆ ಮೇರೆಗೆ ಹಾಸನದ ಹಿಮ್ಸ್ಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಸಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಹಾವೇರಿ: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು