ನ್ಯೂಯಾರ್ಕ್, ಅಮೆರಿಕ: 199 ಪ್ರಯಾಣಿಕರು ಮತ್ತು 15 ಸಿಬ್ಬಂದಿಗಳೊಂದಿಗೆ ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಅಮೆರಿಕನ್ ಏರ್ಲೈನ್ಸ್ ವಿಮಾನ ಶಂಕಿತ ಬಾಂಬ್ ಬೆದರಿಕೆಯಿಂದ ರೋಮ್‌ಗೆ ತಿರುಗಿರುವ ಘಟನೆ ನಡೆದಿದೆ. ಅಲ್ಲಿ ತಪಾಸಣೆಯ ಬಳಿಕ ನಿರ್ಗಮನಕ್ಕೆ ವಿಮಾನವನ್ನು ತೆರವುಗೊಳಿಸಲಾಯಿತು.
ಸಿಬ್ಬಂದಿ ಭದ್ರತಾ ಸಮಸ್ಯೆಯ ವರದಿ ನೀಡಿದ ಬಳಿಕ ಅಮೆರಿಕನ್ ಏರ್ಲೈನ್ಸ್ ವಿಮಾನ AA292 ಅನ್ನು ರೋಮ್‌ಗೆ ಕಳುಹಿಸಲಾಯಿತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಮಾಧ್ಯಮ ಸಂಸ್ಥೆಗೆ ತಿಳಿಸಿದೆ.
ಬೋಯಿಂಗ್ 787-9 ವಿಮಾನ ರೋಮ್‌ನ ಲಿಯೊನಾರ್ಡೊ ಡಾ ವಿನ್ಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 5:30ರ ಸುಮಾರಿಗೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಶಂಕಿತ ಬಾಂಬ್ ಬೆದರಿಕೆಗೆ ಸಂಬಂಧಪಟ್ಟಂತೆ ಭದ್ರತಾ ತಪಾಸಣೆಗಾಗಿ ಅಮೆರಿಕನ್ ಏರ್‌ಲೈನ್ಸ್‌ನಿಂದ ವಿನಂತಿ ಬಂದ ಬಳಿಕ ವಿಮಾನವನ್ನು ತಕ್ಷಣವೇ ಸುರಕ್ಷಿತತೆಗಾಗಿ ಇಟಲಿಗೆ ತಿರುಗಿಸಲಾಗಿದೆ ಎಂದು ಇಟಾಲಿಯನ್ ಸುದ್ದಿ ಸಂಸ್ಥೆ ಹೇಳಿದೆ. ಅಮೆರಿಕನ್ ಏರ್‌ಲೈನ್ಸ್ ಫ್ಲೈಟ್ 292 ಅನ್ನು ಸಂಭವನೀಯ ಭದ್ರತಾ ಕಾಳಜಿಯಿಂದಾಗಿ ರೋಮ್‌ಗೆ ತೆರಳುವಂತೆ ನಿರ್ದೇಶನ ನೀಡಲಾಯಿತು ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸಲಾಗಿದ್ದು, ವಿಮಾನವು ರೋಮ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಯಿತು ಎಂದು ಏರ್‌ಲೈನ್ ಹೇಳಿದೆ. ಅಲ್ಲಿನ ಅಧಿಕಾರಿಗಳು ಮರು - ನಿರ್ಗಮಿಸುವ ಸಲುವಾಗಿ ವಿಮಾನವನ್ನು ಪರಿಶೀಲಿಸಿ, ತೆರವುಗೊಳಿಸಿದರು. ಸುರಕ್ಷತೆ ಮತ್ತು ಭದ್ರತೆಯು ನಮ್ಮ ಪ್ರಮುಖ ಆದ್ಯತೆಗಳಾಗಿವೆ ಮತ್ತು ಅನಾನುಕೂಲತೆಗಾಗಿ ನಾವು ನಮ್ಮ ಪ್ರಯಾಣಿಕರಿಗೆ ಕ್ಷಮೆಯಾಚಿಸುತ್ತೇವೆ ಎಂದು ಏರ್‌ಲೈನ್ ಹೇಳಿದೆ.
ಇನ್ನು ದೆಹಲಿ ವಿಮಾನ ನಿಲ್ದಾಣದ ಪ್ರೋಟೋಕಾಲ್ ಪ್ರಕಾರ, ದೆಹಲಿಯಲ್ಲಿ ಲ್ಯಾಂಡ್ ಆಗುವ ಮೊದಲು ವಿಮಾನದ ತಪಾಸಣೆಯ ಅಗತ್ಯವಿದೆ ಎಂದು ಏರ್ಲೈನ್ಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಲ್ಯಾಂಡಿಂಗ್ ವೇಳೆ ರನ್ವೇಯಲ್ಲಿ ಜಾರಿ ಪಲ್ಟಿಯಾದ ವಿಮಾನ; ಮಗು ಸೇರಿ 18 ಮಂದಿಗೆ ಗಂಭೀರ ಗಾಯ