Your Phone is Real or Fake : ಫೋನ್ ಖರೀದಿದಾರರು ಹೆಚ್ಚಾಗಿ ಬ್ರ್ಯಾಂಡ್ ನೋಡಿಯೇ ನಿರ್ಧಾರಕ್ಕೆ ಬಂದಿರುತ್ತಾರೆ. ಜತೆಗೆ ಇದು ಎಷ್ಟು ಜಿಬಿ ಇದೆ, ಏನೆಲ್ಲ ಹೊಸ ಫೀಚರ್ಸ್ ಗಳಿವೆ ಎಂಬುದನ್ನು ಗಮನಿಸುತ್ತಾರೆ. ಅಂತಿಮವಾಗಿ ಬೆಲೆ ಎಷ್ಟು ಎಂಬುದರ ಆಧಾರದ ಮೇಲೆಯೇ ಪರ್ಚೇಜ್ ಮಾಡುತ್ತಾರೆ. ಆದರೆ ನೀವು ಖರೀದಿಸುವ ಫೋನ್, ಅಸಲಿಯೋ ಇಲ್ಲ ನಕಲಿಯೋ ಅನ್ನೋದನ್ನು ಬಹುತೇಕರು ನೋಡುವುದೇ ಇಲ್ಲ ಎನಿಸುತ್ತದೆ. ವಿಶೇಷ ಎಂದರೆ ನಾವು ಕೊಂಡ ಮೊಬೈಲ್ ಅಸಲಿಯೋ ಅಥವಾ ನಕಲಿ ಎಂಬುದನ್ನ ಹೇಗೆ ನೋಡುವುದು ಎಂಬುದು ನಿಜವಾಗಿ ನಮಗೆ ತಿಳಿದಿಲ್ಲ. ಹಾಗಾದರೆ ಅದನ್ನು ಪತ್ತೆ ಹಚ್ಚುವುದು ಹೇಗೆ? ಈಗ ನಾವ್ ಹೇಳ್ತಿದ್ದೇವೆ. ಅದನ್ನು ಗಮನವಿಟ್ಟು ಓದಿ.
ವಂಚನೆಯ ಕರೆಗಳು/ಸಂದೇಶಗಳನ್ನು ಇತ್ತೀಚೆಗೆ ಬಳಕೆದಾರರು ಸ್ವೀಕರಿಸುತ್ತಲೇ ಇರುತ್ತಾರೆ. ಈ ಕಾಟಗಳ ನಡುವೆ, ನಾವು ಬಳಸುತ್ತಿರುವ ಮೊಬೈಲ್ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದೆಯಾ? ಹೌದು ಅಂತಾದರೆ, ಅದನ್ನು ತಿಳಿಯಲು ಟೆಲಿಕಾಂ ಇಲಾಖೆಯ ಸಂಚಾರ ಸಾಥಿ ಎಂಬ ಮೊಬೈಲ್ ಆ್ಯಪ್ ಗೆ ಭೇಟಿ ನೀಡಿ. 2023 ರಲ್ಲಿಯೇ ಕೇಂದ್ರ ಟೆಲಿಕಾಂ ಇಲಾಖೆಯಿಂದ ಸಂಚಾರ ಸಾಥಿ (Sanchar Saathi) ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಈ ಮೊಬೈಲ್ ಆ್ಯಪ್ ಮೂಲಕ ವಂಚನೆಗಳನ್ನು ಪತ್ತೆ ಹಚ್ಚಬಹುದಾಗಿದೆ. ಈ ಅಪ್ಲಿಕೇಶನ್ Android ಮತ್ತು iOS ಹೀಗೆ ಎರಡರಲ್ಲೂ ಲಭ್ಯವಿದೆ. ನಿಮ್ಮ ಫೋನ್ ಅಸಲಿಯೋ? ಅಥವಾ ನಕಲಿಯೋ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಅದನ್ನೀಗ ತಿಳಿದುಕೊಳ್ಳೋಣ
ಅಸಲಿಯೋ ನಕಲಿಯೋ ಎಂಬುದನ್ನು ಪತ್ತೆ ಹಚ್ಚಲು ಕೆಳಗಿನ ಮಾಹಿತಿಗಳನ್ನು ತಿಳಿದುಕೊಳ್ಳಿ
- ಮೊದಲು ನಿಮ್ಮ ಮೊಬೈಲ್ ನ ಪ್ಲೇ ಸ್ಟೋರ್‌ನಿಂದ ಸಂಚಾರ್ ಸಾಥಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
- ಅಪ್ಲಿಕೇಶನ್ ತೆರೆದ ನಂತರ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
- ಅದರ ನಂತರ ಸಿಟಿಜನ್ ಸೆಂಟ್ರಿಕ್ ಸೇವೆಗಳಲ್ಲಿ ನಿಮ್ಮ ಮೊಬೈಲ್ ಹ್ಯಾಂಡ್‌ಸೆಟ್‌ನ ನೈಜತೆ ತಿಳಿಯಲು ಆಯ್ಕೆಯನ್ನು ಕ್ಲಿಕ್ ಮಾಡಿ.
- ಅಲ್ಲಿ ನೀವು ನಿಮ್ಮ ಫೋನ್‌ನ 15 ಅಂಕಿಗಳ IMEI ಸಂಖ್ಯೆಯನ್ನು ನಮೂದಿಸಬೇಕು.
- ಆ ಬಳಿಕ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಫೋನ್‌ನ IMEI ಗೆ ಸಂಬಂಧಿಸಿದ ವಿವರಗಳನ್ನು ನೀವು ನೋಡಬಹುದು.
- IMEI ಸಂಖ್ಯೆ, ಫೋನ್ ಬ್ರ್ಯಾಂಡ್ ಹೆಸರು, ಯಾವ ಮಾದರಿ ಮೊಬೈಲ್, ತಯಾರಕರು ಯಾರು, ಸಾಧನದ ಪ್ರಕಾರದಂತಹ ವಿವರಗಳನ್ನು ಈ ಆ್ಯಪ್ ನಿಮಗೆ ತೋರಿಸುತ್ತದೆ.
- ನಿಮ್ಮ IMEI ಸಂಖ್ಯೆಯು ಮಾನ್ಯವಾಗಿದೆ ಎಂದು ಇದರಲ್ಲಿ ನಿಮಗೆ ಕಾಣಿಸಿಕೊಂಡರೆ, ನಿಮ್ಮ ಫೋನ್ ಅಸಲಿಯಾಗಿದೆ ಎಂದು ಅರ್ಥ. ಅದು ಅಸಲಿ ಆಗಿದ್ದರೆ ಮೇಲಿನ ಎಲ್ಲಾ ವಿವರಗಳು ಗೋಚರಿಸುತ್ತವೆ.
- ಅದೇ IMEI ಅಮಾನ್ಯವಾಗಿದ್ದರೆ, ಅದನ್ನು ನೀವು ಸುಲಭವಾಗಿ ನಕಲಿ ಫೋನ್ ಎಂದು ಗುರುತಿಸಬೇಕು.
IMEI ಸಂಖ್ಯೆಯನ್ನು ತಿಳಿಯುವುದು ಹೇಗೆ? :
- ನಿಮ್ಮ ಫೋನ್‌ನ IMEI ಸಂಖ್ಯೆಯನ್ನು ಕಂಡುಹಿಡಿಯಲು ಕೆಲವು ವಿಧಾನಗಳಿವೆ.
- IMEI ಸಂಖ್ಯೆಗಳು ನಿಮ್ಮ ಫೋನ್ ಬಾಕ್ಸ್‌ನಲ್ಲಿರುತ್ತವೆ . ನೀವು ಅವುಗಳ ಮೂಲಕ ಹುಡುಕಬಹುದು.
- ಅಥವಾ ನಿಮ್ಮ ಫೋನ್‌ನಲ್ಲಿ ಡಯಲ್ ಪ್ಯಾಡ್ ಓಪನ್ ಮಾಡಿ ಮತ್ತು *#06# ಅನ್ನು ನಮೂದಿಸಿ ಡಯಲ್ ಮಾಡಿ, ನಿಮ್ಮ IMEI ಸಂಖ್ಯೆ ಮೊಬೈಲ್ ಪರದೆ ಮೇಲೆ ಪ್ರದರ್ಶಿತವಾಗುತ್ತದೆ.
- ಅಥವಾ ನೀವು ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆದು ಫೋನ್ ಕುರಿತು ಕ್ಲಿಕ್ ಮಾಡಿದರೆ, ಫೋನ್‌ಗೆ ಸಂಬಂಧಿಸಿದ ವಿವರಗಳು ಗೋಚರಿಸುತ್ತವೆ.
- ಅದರಲ್ಲಿ IMEI ನಂಬರ್ ಗಮನಿಸಿ ಸರ್ಚ್ ಮಾಡಿದರೆ ಸಾಕು.
ಇದನ್ನು ಓದಿ: ಸೂರ್ಯನ ಬೆಳಕಿನಿಂದಲೇ ಚಾರ್ಜ್ ಆಗುತ್ತೆ 'ಪೇಟಿಎಂ ಸೌಂಡ್ಬಾಕ್ಸ್': ಸಣ್ಣ ವ್ಯಾಪಾರಿಗಳಿಗೆ ಬಹಳ ಉಪಯುಕ್ತ