ಕೊಪ್ಪಳ: ರೈತರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ಮಹಾ ಶಿವರಾತ್ರಿ ಪ್ರಯುಕ್ತ ಕೊಪಳ ತೋಟಗಾರಿಕೆ ಇಲಾಖೆಯು ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ವಿವಿಧ ಹಣ್ಣುಗಳು, ಅಣಬೆ, ಜೇನು ಪ್ರದರ್ಶನ ಮತ್ತು ಮಾರಾಟ ಮೇಳ ಭಾನುವಾರ ಆರಂಭವಾಗಿದ್ದು, ಫೆ.27ರವರೆಗೆ ನಡೆಯಲಿದೆ.
ಹಣ್ಣು ಮತ್ತು ಜೇನು ಮೇಳದ ವಿಶೇಷತೆ: ಈ ವರ್ಷದ ಮಹಾಶಿವರಾತ್ರಿ ಪ್ರಯುಕ್ತ ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯ ಹಣ್ಣು ಬೆಳೆಗಾರರಿಗೆ ಹಾಗೂ ಎಲ್ಲ ಹಣ್ಣುಗಳನ್ನು ಸವಿಯುವ ಗ್ರಾಹಕರಿಗೆ 8ನೇ ವರ್ಷದ ಹಣ್ಣು ಮತ್ತು ಜೇನು ಮೇಳವನ್ನು 5 ದಿನಗಳ ಕಾಲ ತೋಟಗಾರಿಕೆ ಇಲಾಖೆಯಿಂದ ಏರ್ಪಡಿಸಲಾಗಿದೆ. ಫೆಬ್ರವರಿ 27ರ ವರೆಗೆ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಬಾಳೆ, ಪಪ್ಪಾಯ, ಹಲಸು, ಅಣಬೆ ಮತ್ತು ಜೇನು ಮೇಳವು ನಡೆಯಲಿದೆ.
ಕೊಪ್ಪಳ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಬೇಸಿಗೆ ಹಂಗಾಮಿನಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ಲಭ್ಯವಿರುವ ವಿವಿಧ ಬಗೆಯ ಹತ್ತಾರು ಹಣ್ಣುಗಳ ವಿವಿಧ ತಳಿಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಈ ಮಹಾಮೇಳ ಆಯೋಜಿಸಲಾಗಿದೆ.
ಜಗತ್ತಿನ ಅತ್ಯಂತ ದುಬಾರಿ ದ್ರಾಕ್ಷಿ ಪ್ರದರ್ಶನ: ಈ ಮೇಳದಲ್ಲಿ ಮುಖ್ಯ ಆಕರ್ಷಣೆ ಜಪಾನಿನಲ್ಲಿ ಬೆಳೆಯುವ ಜಗತ್ತಿನ ಅತ್ಯಂತ ದುಬಾರಿ ದ್ರಾಕ್ಷಿ ಹಣ್ಣು. ಪ್ರತಿ ಕೆಜಿಗೆ 8 ಲಕ್ಷ ರೂ. ಮೌಲ್ಯದ ರೂಬಿ ರೋಮನ್‌ದ್ರಾಕ್ಷಿ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ. ಜೊತೆಗೆ ವಿವಿಧ ವಿದೇಶಿ ಹಣ್ಣಿನ ತಳಿಗಳಾದ ಅವಕಾಡೋಫ್ಲಮ್, ಪೀಚ್, ಲಿಚ್ಚಿ, ರೆಡ್‌ಗ್ಲೋಬ್, ಕಿವಿ ಫ್ರೂಟ್, ರಾಮಭೂತಾನ, ಮ್ಯಾಂಗೋಸ್ಟೀನ್, ಜಪಾನ ಮ್ಯಾಂಗೂ, ಐಸ್‌ಗಾವಾ, ಅಮೆರಿಕನ್ ಆಪಲ್, ಗ್ರೀನ್ ಆಪಲ್, ವಿದೇಶಿ ಪ್ಯಾಷನ್ ಫ್ರೂಟ್, ವೈನ್‌ಗ್ರೇಪ್ ಮತ್ತು ಇತ್ಯಾದಿ. ಸ್ವದೇಶಿ ಹಾಗೂ ಜಿಲ್ಲೆಯ ರೈತರು ಬೆಳೆದ ಪ್ಪಪಾಯ, ದ್ರಾಕ್ಷಿ, ಕಲ್ಲಂಗಡಿ, ಪೇರಲ, ಅಂಜೂರ, ಹಲಸು, ಬಾಳೆ, ಸಪೋಟ, ಅಣಬೆ, ಜೇನು ಅಲ್ಲದೇ ಅದಕ್ಕೆ ಪೂರಕವಾದ ಜೇನಿನ ಉಪ ಉತ್ಪನ್ನಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳು ಪ್ರದರ್ಶನದಲ್ಲಿ ಇಡಲಾಗಿದೆ.
ಈ ಎಲ್ಲ ಹಣ್ಣುಗಳನ್ನು ಹಾಗೂ ಈ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಜ್ಯೂಸ್, ಜಾಮ್, ಜೆಲ್ಲಿ, ಪುಡಿ, ಸೂಪ ಇತ್ಯಾಧಿಗಳನ್ನು ಗ್ರಾಹಕರ ಆರೋಗ್ಯ ವೃದ್ಧಿ ದೃಷ್ಟಿಯಿಂದ ಮಾರಾಟ ಮಾಡಲಾಗುತ್ತಿದೆ. ಮೇಳದಲ್ಲಿ ರೈತರಿಗಾಗಿ ಉಚಿತವಾಗಿ ಸ್ಟಾಲ್‌ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಾಗಿ ಆಯೋಜಿಸಲಾಗಿದ್ದು, 30ಕ್ಕೂ ಹೆಚ್ಚು ಹಣ್ಣುಬೆಳೆಗಾರರು, 15 ರೈತ ಉತ್ಪಾದಕ ಕಂಪನಿಗಳಲ್ಲದೇ ಜಿಲ್ಲಾ ಹಾಪಕಾಮ್ಸ್ ಸಂಸ್ಥೆಗಳಿಗೆ ಕೂಡಾ ಸ್ಟಾಲ್‌ಗಳ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಕೊಪ್ಪಳ ನೂರಾರು ಸದಸ್ಯ ರೈತರಿಂದ ವಿವಿಧ ಹಣ್ಣುಗಳನ್ನು ಖರೀದಿಸಿ ಈ ಮೇಳದಲ್ಲಿ ಮಾರಾಟ ಮಾಡುವುದರಿಂದ ಈ ಮೇಳದಲ್ಲಿ ನೇರವಾಗಿ ಭಾಗವಹಿಸಿದ ರೈತರಿಗೂ ಅನುಕೂಲವಾಗಿ ಯೋಗ್ಯ ಬೆಲೆ ಸಿಗುವಂತಾಗಿದೆ.
ಜೇನಿನ ಸಿಹಿ ಸವಿದ ಕೊಪ್ಪಳ ಮಂದಿ: ಈ ಮೇಳದಲ್ಲಿ ವಿವಿಧ ಜೇನಿನ ತುಪ್ಪಗಳು ಹಾಗೂ ಜೇನಿನ ಪರಿಕರಗಳಾದ ಜೇನಿನ ಮೇಣದ ಲಿಪ್‌ಬಾಂಬ್, ಜೇನಿನಲ್ಲಿ ನೆನಸಿದ ಕಾಡುನೆಲ್ಲಿ ಹಾಗೂ ವಿವಿಧ ಆಯುರ್ವೇದ ಗಿಡಮೂಲಿಕೆಗಳನ್ನು ಸೇರಿಸಿ ತಯಾರಿಸಿದ ವಿವಿಧ ಬಗೆಯ ಜೇನಿನ ತುಪ್ಪಗಳು ಸಹ ಮಾರಾಟಕ್ಕೆ ಲಭ್ಯವಿದೆ. ಹಲಸಿನ ಹಣ್ಣಿನಿಂದ ತಯಾರಿಸಿದ ಹಪ್ಪಳ, ಹಲಸಿನ ಪುಡಿ, ಹಲಸಿನ ಚಿಪ್ಸ್ ಸೇರಿ ಹಲಸಿನಿಂದ ತಯಾರಿಸಿದ ಹಲವು ತಿನಿಸುಗಳು ಲಭ್ಯವಿರುತ್ತದೆ. ಹಾಗೂ ತಾಜಾ ಅಣಬೆ, ಒಣಗಿಸಿದ ಅಣಬೆ, ಅಣಬೆ ಉಪ್ಪಿನಕಾಯಿ, ಅಣಬೆ ಪುಡಿ ಹಾಗೂ ಅಣಬೆ ಬಿಸ್ಕೇಟ್‌ಗಳು, ಗೋಡಂಬಿ, ಒಣ ದ್ರಾಕ್ಷಿ ಸಹ ಮೇಳದಲ್ಲಿ ಲಭ್ಯ ಇವೆ.
ಅಲ್ಲದೇ ಎಲ್ಲ ಹಣ್ಣುಗಳಲ್ಲಿ ಲಭ್ಯವಿರುವ ಪೋಷಕಾಂಶಗಳು, ಖನಿಜಗಳು ಮತ್ತು ಅವುಗಳ ಆರೋಗ್ಯದ ಬಗ್ಗೆ ಮಹತ್ವ ತಿಳಿಸುವ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತಿದ್ದು, ಗ್ರಾಹಕರಿಗೆ ಇದು ಮಾಹಿತಿ ನೀಡಲಿದೆ. "ಎಲ್ಲಾ ಹಣ್ಣುಗಳನ್ನು ಸೇವಿಸಿ ಜೇನು ಸವಿದು ಆರೋಗ್ಯ ಭಾಗ್ಯ ಪಡೆಯಿರಿ" ಎಂಬುದೇ ಈ ಮೇಳದ ಧ್ಯೇಯವಾಗಿದೆ. ಐದು ದಿನಗಳ ಕಾಲ ನಡೆಯುವ ಹಣ್ಣು ಮತ್ತು ಜೇನು ಮೇಳದಲ್ಲಿ ಭಾಗವಹಿಸಿ, ತಾಜಾ ಹಣ್ಣುಗಳನ್ನು ರೈತರಿಂದ ಖರಿದೀಸಿ, ರೈತರನ್ನು ಪ್ರೋತ್ಸಾಹಿಸಬೇಕೆಂದು ಕೊಪ್ಪಳ ತೋಟಗಾರಿಕೆ ಇಲಾಖೆ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ: ಸಿಹಿ ಗೆಣಸು - ಶಿವರಾತ್ರಿಗೂ ಇರುವ ಸಂಬಂಧವೇನು?; ಆ ದಿನವೇ ಏಕೆ ತಿನ್ನಬೇಕು?, ಇದರ ಹಿಂದಿನ ಕಾರಣಗಳೇನು?
ಇದನ್ನೂ ಓದಿ: ಸಸ್ಯಾಧಾರಿತ ಆಹಾರ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು: ಏಕೆ ಅಂತ ಹೇಳಿದೆ ಈ ಅಧ್ಯಯನ!