Diabetes Patients Exercise: ಡಯಾಬಿಟಿಸ್ ಹಾಗೂ ಪ್ರಿಡಯಾಬಿಟಿಸ್ ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುವುದು ತುಂಬಾ ಮುಖ್ಯವಾಗಿದೆ. ಮಧುಮೇಹಿಗಳು ಇದಕ್ಕಾಗಿ ವಿಶೇಷ ಗಮನ ಹರಿಸಬೇಕಾಗುತ್ತದೆ. ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಡಬ್ಲ್ಯೂಹೆಚ್ಒ ಪ್ರಕಾರ, ವಿಶ್ವದಾದ್ಯಂತ 800 ಮಿಲಿಯನ್ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ.
ರಕ್ತದಲ್ಲಿನ ಶುಗರ್ ಲೆವಲ್ ನಿಯಂತ್ರಿಸಲು ಆಹಾರ ಹಾಗೂ ಔಷಧಿಗಳು ಪ್ರಮುಖ ಪಾತ್ರ ವಹಿಸುತ್ತದೆ. ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ಉತ್ತಮ ಫಲಾತಾಂಶ ಲಭಿಸುತ್ತದೆ. ನೀವು ಯಾವಾಗ ವ್ಯಾಯಾಮ ಮಾಡಬೇಕು ಹಾಗೂ ರಕ್ತದಲ್ಲಿನ ಶುಗರ್ ಲೆವಲ್ ನಿಯಂತ್ರಿಸಲು ಯಾವ ರೀತಿಯ ವ್ಯಾಯಾಮ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಯೋಣ.
ನಿಗದಿತ ಸಮಯದಲ್ಲಿ ಏಕೆ ವ್ಯಾಯಾಮ ಮಾಡಬೇಕು?: ಮಧುಮೇಹಿಗಳು ವ್ಯಾಯಾಮ ಮಾಡುವುದರಿಂದ ಇನ್ಸುಲಿನ್ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಶುಗರ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ನೀವು ಒಂದು ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡಿದರೆ, ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. 2023ರಲ್ಲಿ ಎನ್ಸಿಬಿಐ ಪ್ರಕಟಿಸಿದ ಅಧ್ಯಯನದಲ್ಲಿ, ಸರಿಯಾದ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬಹುದು ಎಂದು ತಿಳಿದಿದೆ.
ವ್ಯಾಯಾಮ ಮಾಡಲು ಸರಿಯಾದ ಸಮಯ ಯಾವುದು?: ತಜ್ಞರ ಪ್ರಕಾರ, ಊಟದ ನಂತರ ವಿಶೇಷವಾಗಿ ಅಂದ್ರೆ, ಉಪಹಾರ ಮತ್ತು ಮಧ್ಯಾಹ್ನದ ಊಟದ ನಂತರ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಬಹುದು. ಸಾಮಾನ್ಯವಾಗಿ ಊಟದ ನಂತರ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಈ ರೀತಿಯಾಗಿ ಊಟದ ನಂತರ ವ್ಯಾಯಾಮ ಮಾಡುವಾಗ ಸ್ನಾಯುಗಳು ರಕ್ತದಲ್ಲಿ ಮಿಶ್ರಿತ ಗ್ಲೂಕೋಸ್ ಅನ್ನು ಹೀರಿಕೊಳ್ಳುತ್ತವೆ. 2023ರ ಎನ್ಸಿಬಿಐ ಅಧ್ಯಯನದಲ್ಲಿ, ಊಟದ ನಂತರ 15 ನಿಮಿಷಗಳ ವಾಕಿಂಗ್ ಅಥವಾ ಲಘು ವ್ಯಾಯಾಮವು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಉಪಹಾರಕ್ಕೆ ಮುಂಚಿತವಾಗಿ ಬೆಳಿಗ್ಗೆ ವ್ಯಾಯಾಮ ಮಾಡುವುದರಿಂದ ಕಾಲಾನಂತರದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯವಾಗುತ್ತದೆ ಎಂಬುದು ಸ್ಪಷ್ಟವಾಗಿ ತೋರ್ಪಡಿಸಿದೆ.
ಶುಗರ್ ಲೆವಲ್ ಕಡಿಮೆ ಮಾಡಲು ಉತ್ತಮ ವ್ಯಾಯಾಮಗಳು:
ಒಂದು ದಿನ ಹೆಚ್ಚು ಮತ್ತು ಕಠಿಣ ವ್ಯಾಯಾಮ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುವುದಿಲ್ಲ. ಇದಕ್ಕಾಗಿ ಪ್ರತಿದಿನ ಕೆಲವು ಸುಲಭ ವ್ಯಾಯಾಮಗಳನ್ನು ಮಾಡುವ ಮೂಲಕ ನಿಮ್ಮ ರಕ್ತದಲ್ಲಿನ ಶುಗರ್ ಲೆವಲ್ನ್ನು ನಿಯಂತ್ರಿಸಬಹುದು.

ವಾಕಿಂಗ್: ಊಟದ ನಂತರ 15 ರಿಂದ 30 ನಿಮಿಷಗಳ ಕಾಲ ವಾಕಿಂಗ್ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಊಟದ ನಂತರ ವಾಕಿಂಗ್ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯನ್ನು ನಿಯಂತ್ರಿಸಬಹುದು.
ಯೋಗ: ಅಧೋಮುಖ ಸ್ವನಾಸನ, ಭುಜಂಗಾಸನ (ನಾಗರ ಭಂಗಿ), ಬಾಲಾಸನ (ಮಕ್ಕಳ ಭಂಗಿ) ನಂತಹ ಸರಳ ಯೋಗ ಭಂಗಿಗಳು ರಕ್ತ ಪರಿಚಲನೆ ಸುಧಾರಿಸುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ತೂಕ ಎತ್ತುವ ವ್ಯಾಯಾಮ: ತೂಕ ಎತ್ತುವಂತಹ ವ್ಯಾಯಾಮ ಮಾಡುವುದರಿಂದ ಇದು ಸ್ನಾಯುಗಳನ್ನು ಬಲಪಡಿಸಲು ಹಾಗೂ ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಒಂದು ಮಾರ್ಗವಾಗಿದೆ. ವಾರಕ್ಕೆ ಎರಡರಿಂದ ಮೂರು ಬಾರಿ ಕಡಿಮೆ ತೂಕ ಎತ್ತುವುದು ಅಥವಾ ಜಿಮ್‌ಗೆ ಹೋಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳವಾಗುವುದನ್ನು ತಡೆಯಬಹುದು.

ಸೈಕ್ಲಿಂಗ್: ಕ್ಯಾಲೊರಿಗಳನ್ನು ಬರ್ನ್ ಮಾಡಲು ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸೈಕ್ಲಿಂಗ್ ಉತ್ತಮ ವ್ಯಾಯಾಮವೆಂದು ಪರಿಗಣಿಸಲಾಗಿದೆ. ಜೊತೆಗೆ ನಿಯಮಿತವಾಗಿ ಸೈಕ್ಲಿಂಗ್ ಮಾಡುವುದರಿಂದ ಹೃದಯ ಹಾಗೂ ಶ್ವಾಸಕೋಶದ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಇದರೊಂದಿಗೆ ಹೃದಯ ಕಾಯಿಲೆಗಳು ಹಾಗೂ ಪಾರ್ಶ್ವವಾಯು ಅಪಾಯ ಕೂಡ ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸಿವೆ.

ಈಜು: ಈಜುವುದರಿಂದ ಇಡೀ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಇದರಿಂದಾಗಿ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವು ಸ್ಥಿರವಾಗಿರುತ್ತದೆ. ಜೊತೆಗೆ ಹೃದಯ, ಶ್ವಾಸಕೋಶ ಹಾಗೂ ರಕ್ತ ಪರಿಚಲನಾ ವ್ಯವಸ್ಥೆ ಒಳ್ಳೆಯದು. ರಕ್ತದೊತ್ತಡ ಹಾಗೂ ಹೃದಯ ಬಡಿತ ನೇರವಾಗಿ ಕಡಿಮೆ ಮಾಡುತ್ತದೆ. ಇದು ಹೃದಯದ ಶಕ್ತಿಯನ್ನು ಹೆಚ್ಚಿಸುತ್ತದೆ. ಹೃದಯದ ಆರೋಗ್ಯಕ್ಕೆ ಈಜು ಅತ್ಯತ್ತಮವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
- https://pmc.ncbi.nlm.nih.gov/articles/PMC10598774/#:~:text=Disturbances%20in%20circadian%20rhythm%20not,development%20by%20regulating%20circadian%20rhythm.
- https://pmc.ncbi.nlm.nih.gov/articles/PMC10182965/
- https://pmc.ncbi.nlm.nih.gov/articles/PMC10036272/#Sec16
ಓದುಗರಿಗೆ ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.