ಪಾಟ್ನಾ(ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್) 19ನೇ ಕಂತನ್ನು ಕೋಟ್ಯಂತರ ರೈತರ ಖಾತೆಗಳಿಗೆ ಬಿಹಾರದ ಭಾಗಲ್ಪುರ ಜಿಲ್ಲೆಯಿಂದ ವರ್ಗಾಯಿಸಿದರು. ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ 2.41 ಕೋಟಿ ಮಹಿಳಾ ರೈತರು ಸೇರಿದಂತೆ 9.8 ಕೋಟಿ ರೈತರ ಖಾತೆಗಳಿಗೆ ಇಂದು 22,000 ಕೋಟಿ ರೂ. ಜಮೆ ಆಗಿದೆ.
ಪಿಎಂ-ಕಿಸಾನ್‌ನ ಈ ಹಿಂದಿನ 18 ನೇ ಕಂತನ್ನು ಪ್ರಧಾನಿಯವರು ಅಕ್ಟೋಬರ್ 2024 ರಲ್ಲಿ ಮಹಾರಾಷ್ಟ್ರದ ವಾಶಿಮ್ನಿಂದ ವಿತರಿಸಿದ್ದರು. ಆಗ ದೇಶಾದ್ಯಂತದ 9.4 ಕೋಟಿ ರೈತರ ಖಾತೆಗಳಿಗೆ ಸುಮಾರು 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವರ್ಗಾವಣೆ ಮಾಡಲಾಗಿತ್ತು.
ಫೆಬ್ರವರಿ 2025 ರಲ್ಲಿ ಪ್ರಾರಂಭವಾದಾಗಿನಿಂದ ಈ ಯೋಜನೆಯಡಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು 18 ಕಂತುಗಳಲ್ಲಿ 3.46 ಲಕ್ಷ ಕೋಟಿ ರೂ.ಗಳನ್ನು ವಿತರಿಸಿದೆ.
ಇದಕ್ಕೂ ಮುನ್ನ, ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪಿಎಂ ಮೋದಿ, ರೈತರ ಕಲ್ಯಾಣದ ಬಗ್ಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದರು ಮತ್ತು ಅನ್ನದಾತರ ಬಗ್ಗೆ ಸರ್ಕಾರ ಹೆಮ್ಮೆಪಡುತ್ತದೆ ಎಂದು ಹೇಳಿದ್ದರು.
ಪಿಎಂ-ಕಿಸಾನ್ ಯೋಜನೆಯ 6 ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕೋಟ್ಯಂತರ ಜನರ ಅಗತ್ಯಗಳನ್ನು ಪೂರೈಸುವ ಯೋಜನೆಯ ಯಶಸ್ಸಿನ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. ಇಲ್ಲಿಯವರೆಗೆ ಸುಮಾರು 3.5 ಲಕ್ಷ ಕೋಟಿ ರೂ.ಗಳು ರೈತರ ಖಾತೆಗಳಿಗೆ ತಲುಪಿರುವುದಕ್ಕೆ ಅವರು ತೃಪ್ತಿ ವ್ಯಕ್ತಪಡಿಸಿದರು.
"ಪಿಎಂ-ಕಿಸಾನ್ 6 ವರ್ಷಗಳನ್ನು ಪೂರ್ಣಗೊಳಿಸಿದ ಈ ಸಂದರ್ಭದಲ್ಲಿ ದೇಶಾದ್ಯಂತದ ನಮ್ಮ ರೈತ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ಇಲ್ಲಿಯವರೆಗೆ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳು ಅವರ ಖಾತೆಗಳಿಗೆ ಜಮೆ ಆಗಿರುವುದು ನನಗೆ ಬಹಳ ತೃಪ್ತಿ ಮತ್ತು ಹೆಮ್ಮೆಯ ವಿಷಯವಾಗಿದೆ. ನಮ್ಮ ಪ್ರಯತ್ನವು ನಮ್ಮ ಅನ್ನದಾತರಿಗೆ ಗೌರವ, ಸಮೃದ್ಧಿ ಮತ್ತು ಹೊಸ ಶಕ್ತಿಯನ್ನು ನೀಡುತ್ತಿದೆ" ಎಂದು ಪ್ರಧಾನಿ ಈ ಹಿಂದೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಕಟಾಸ್ ರಾಜ್ ದೇವರ ದರ್ಶನಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ 154 ಹಿಂದೂ ಯಾತ್ರಾರ್ಥಿಗಳು - KATAS RAJ TEMPLE