ತಿರುವನಂತಪುರಂ(ಕೇರಳ): ಸಹೋದರ, ಅಜ್ಜಿ, ಪ್ರಿಯತಮೆ ಸೇರಿದಂತೆ ಐವರನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಭೀಕರ ಘಟನೆ ಕೇರಳದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ತಾಯಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯ ರಾಜಧಾನಿ ತಿರುವನಂತಪುರಂ ಬಳಿಯ ವೆಂಜರಮೂಡು ಪ್ರದೇಶದಲ್ಲಿ ಈ ಹತ್ಯಾಕಾಂಡ ನಡೆದಿದೆ. ಇಲ್ಲಿನ ಮೂರು ಮನೆಗಳಲ್ಲಿ ವಾಸಿಸುತ್ತಿದ್ದ ಕುಟುಂಬಸ್ಥರನ್ನು ಅಫಾನ್ ಎಂಬಾತ ಹತ್ಯೆ ಮಾಡಿ, ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
23 ವರ್ಷದ ಆರೋಪಿ ಅಫಾನ್ ತನ್ನ 13 ವರ್ಷದ ಸಹೋದರ, 80 ವರ್ಷದ ಅಜ್ಜಿ ಮತ್ತು ಆತನ ಪ್ರಿಯತಮೆ ಎಂದು ಹೇಳಲಾದ ಯುವತಿ ಮತ್ತು ಇನ್ನಿಬ್ಬರು ಸಂಬಂಧಿಕರನ್ನು ಕೊಂದಿದ್ದಾನೆ. ಜೊತೆಗೆ ಆತನ ತಾಯಿಯ ಮೇಲೂ ದಾಳಿ ಮಾಡಿದ್ದಾನೆ. ಆಕೆಯ ಸ್ಥಿತಿ ಗಂಭೀರವಾಗಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕೊಂದು ಪೊಲೀಸರಿಗೆ ಶರಣಾದ: ಐವರನ್ನು ಸಾಮೂಹಿಕವಾಗಿ ಹತ್ಯಾಕಾಂಡ ನಡೆಸಿದ ಬಳಿಕ ಹಂತಕ ಅಫಾನ್ ವೆಂಜರಮೂಡು ಪೊಲೀಸ್ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸ್ಥಳ ಪರಿಶೀಲನೆ ಬಳಿಕ ಐವರು ಶವವಾಗಿ ಸಿಕ್ಕಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿ ಶರಣಾಗುವ ಮೊದಲು ವಿಷ ಸೇವಿಸಿರುವುದಾಗಿ ಹೇಳಿಕೊಂಡಿದ್ದ, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಘಾತಕಾರಿ ಘಟನೆಗೆ ಕಾರಣ ಏನೆಂಬುದು ಸದ್ಯಕ್ಕೆ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮೂವರು ಬಾಲಕಿಯರ ಮೇಲೆ 18 ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ!