ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ರಾಜ್ಯದ ಸಂಪತ್ತನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಚುನಾವಣೆಗೆ ಮಾತ್ರ ಉಪಯೋಗಿಸಿಕೊಳ್ಳುತ್ತಿದೆ. ಸ್ಥಳೀಯ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೂ ದಿನಾಂಕ ಘೋಷಣೆ ಆಗುತ್ತೆ, ಅದಕ್ಕಿಂತ ಮುಂಚಿತವಾಗಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತಾರೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ದೇವನಹಳ್ಳಿಯ ಖಾಸಗಿ ರೆಸಾರ್ಟ್ನಲ್ಲಿ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಪಕ್ಷ ಬಲವರ್ಧನೆ ಹಾಗೂ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಸಕರು, ಮಾಜಿ ಶಾಸಕರು ಸೇರಿದಂತೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಮುಖಂಡರುಗಳ ಜೊತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಸಭೆ ನಡೆಸಿದರು.
ಬೆಳಗಾವಿ ಪ್ರಕರಣ ಕನ್ನಡಿಗರ ತಲೆ ತಗ್ಗಿಸುವಂತೆ ಮಾಡಿದೆ: ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಡೆದ ಪ್ರಕರಣ ಕನ್ನಡಿಗರ ತಲೆ ತಗ್ಗಿಸುವಂತೆ ಮಾಡಿದೆ. ಕನ್ನಡದಲ್ಲಿ ಮಾತಾಡಿ ಎಂದು ಹೇಳಿದ ಕಂಡಕ್ಟರ್ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದು ಯಾರಿಗೂ ಒಳ್ಳೆಯದಲ್ಲ. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಇಬ್ಬರು ಸಾರಿಗೆ ಸಚಿವರು ಜತೆ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಬೆಲೆ ಏರಿಕೆ ನಿರಂತರವಾಗಿ ನಡೆಯುತ್ತಿದೆ. ಪ್ರತಿನಿತ್ಯ ಉಪಯೋಗ ಮಾಡುವ ಸಾಮಗ್ರಿಗಳ ಬೆಲೆ ಏರಿಕೆ ಮಾಡ್ತಿದೆ. ಹಾಲಿನ ದರ ಲೀಟರ್ಗೆ ಐದು ರೂಪಾಯಿ ಏರಿಕೆ ಮಾಡಬೇಕು ಎಂದು ಚರ್ಚೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗೆ ಕನಿಷ್ಠ 50 ಸಾವಿರ ಕೋಟಿ ಬೇಕು. ಅದಕ್ಕೆ ಕಾಂಗ್ರೆಸ್ ಕೊಟ್ಟಿರುವ ಮಾತು ಉಳಿಸಿಕೊಳ್ಳಲಾಗದೆ ಮತ್ತೆ ನಮ್ಮ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಕೋಲಾರ ಸಂಸದ ಎಂ.ಮಲ್ಲೇಶ್ ಬಾಬು, ಶಿಡ್ಲಘಟ್ಟ ಶಾಸಕ ರವಿಕುಮಾರ್, ಸಮೃದ್ಧಿ ಮಂಜುನಾಥ್ , ಜೆ.ಕೆ.ವೆಂಕಟಶಿವ ರೆಡ್ಡಿ ಸೇರಿದಂತೆ ಮೂರು ಜಿಲ್ಲೆಯ ಮುಖಂಡರು ಹಾಗೂ ಪದಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ: 2028ರ ಚುನಾವಣೆಗೆ ಸಜ್ಜಾಗುವಂತೆ ಪರಾಜಿತ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ: ಡಿಕೆಶಿ