ಗೋರಖ್‌ಪುರ(ಉತ್ತರ ಪ್ರದೇಶ): "ನಾವು ಒಂದೇ ಒಂದು ರೂಪಾಯಿ ಲಾಭಾಂಶವಿಲ್ಲದೇ ಬೃಹತ್ ಧಾರ್ಮಿಕ ಪುಸ್ತಕಗಳ ಸಂಸ್ಥೆಯೊಂದನ್ನು ಸ್ಥಾಪಿಸುತ್ತೇವೆ, ಅದುವೇ ಧರ್ಮ ಪ್ರಚಾರದ ಪ್ರಮುಖ ಕೇಂದ್ರವಾಗುತ್ತದೆ..." ಹೀಗೆಂದು ಹೇಳಿದ್ದರು ಪ್ರಸಿದ್ಧ 'ಗೀತಾ ಪ್ರೆಸ್'ನ ಸಂಸ್ಥಾಪಕ ಜಯದಯಾಳ್ ಗೋಯಾಂಕಾ.
ಗೋಯಾಂಕಾ ಅವರ ಮಾತಿನಂತೆ ಇಂದಿಗೂ 'ಗೀತಾ ಪ್ರೆಸ್' ಅನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಸಂಸ್ಥೆ ಇಂದಿಗೂ ಯಾರಿಂದಲೂ ಒಂದು ರೂಪಾಯಿ ಧನಸಹಾಯ ಪಡೆಯದೇ ಹಿಂದೂಗಳ ಪವಿತ್ರ ಗ್ರಂಥಗಳ ಮುದ್ರಣಗಳ ಸೇವೆಯಲ್ಲಿ ತೊಡಗಿದೆ. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಧಾರ್ಮಿಕ ಪುಸ್ತಕಗಳನ್ನು ಮುದ್ರಿಸುವ ಸಂಸ್ಥೆಗಳಲ್ಲಿ ಒಂದಾಗಿದೆ.

200 ಕೋಟಿ ರೂಪಾಯಿ ವಾರ್ಷಿಕ ವಹಿವಾಟು: ಗೀತಾ ಪ್ರೆಸ್ ಸ್ಥಾಪನೆಯಾಗಿ 100 ವರ್ಷಗಳು ಕಳೆದಿದ್ದು, ಈ ಪ್ರಕಾಶನದಿಂದ 100 ಕೋಟಿ ಧಾರ್ಮಿಕ ಪುಸ್ತಕಗಳು ಪ್ರಕಟವಾಗಿರುವುದು ಮುದ್ರಣ ಇತಿಹಾಸದಲ್ಲಿ ದಾಖಲೆ. ಇದರ ವಾರ್ಷಿಕ ವಹಿವಾಟು ಸುಮಾರು 200 ಕೋಟಿ ರೂಪಾಯಿ ಅನ್ನೋದು ಗಮನಾರ್ಹ.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸಲಹೆಗಳನ್ನು ಇಂದಿಗೂ ಅಳವಡಿಸಿಕೊಂಡು ಬರುತ್ತಿರುವ ಗೀತಾ ಪ್ರೆಸ್, ಈವರೆಗೂ ಯಾವುದೇ ಆರ್ಥಿಕ ಬಿಕ್ಕಟ್ಟು ಎದುರಿಸಿಲ್ಲ ಅನ್ನೋದು ಮತ್ತೊಂದು ಗಮನಿಸಬೇಕಾದ ಸಂಗತಿ. ಇಲ್ಲಿ ಕೆಲಸ ಮಾಡುವ ನೌಕರರೆಲ್ಲರೂ ಪ್ರೀತಿಯಿಂದ ಕಾಣುತ್ತಿರುವುದರಿಂದ ಈ ಸಂಸ್ಥೆಯನ್ನು ಧಾರ್ಮಿಕ ಸಾಹಿತ್ಯದ ದೇವಾಲಯ ಎಂದೇ ಕರೆಯುತ್ತಾರೆ.

ಧಾರ್ಮಿಕ ಪುಸ್ತಕ ಮುದ್ರಿಸುವ ಕೇಂದ್ರ: ಗೀತಾ ಮುದ್ರಣಾಲಯವು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕಗಳನ್ನು ಮುದ್ರಿಸುವ ಪ್ರಸಿದ್ಧ ಹಾಗೂ ಪ್ರಮುಖ ಕೇಂದ್ರವಾಗಿದೆ. ಕೋಲ್ಕತ್ತಾದಲ್ಲಿ ಅದರ ಸ್ಥಾಪನೆಗೆ ಬೇಕಾದ ಆರಂಭದ ರೂಪುರೇಷೆಗಳನ್ನು ಹೆಣೆಯಲಾಯಿತಾದರೂ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಅಧಿಕೃತವಾಗಿ ಆರಂಭಗೊಂಡಿತು. ಭಗವದ್ಗೀತೆಯನ್ನು ಮುದ್ರಿಸಲು ಒಂದು ಮುದ್ರಣಾಲಯವನ್ನು ಸ್ಥಾಪಿಸುವ ಆಲೋಚನೆಯೊಂದಿಗೆ ಸ್ಥಾಪಕ ಜಯದಯಾಳ್ ಗೋಯಾಂಕಾ ಆಗ ಮುಂದೆ ಬಂದರು. ಅದರಂತೆ 1921ರಲ್ಲಿ ಅವರು ಕೋಲ್ಕತ್ತಾದಲ್ಲಿ ಗೋವಿಂದ ಭವನ ಟ್ರಸ್ಟ್ ಅನ್ನು ಸ್ಥಾಪಿಸಿ ಇದರ ಮೂಲಕ ಪುಸ್ತಕಗಳನ್ನು ಪ್ರಕಟವಾಗಲು ಪ್ರಾರಂಭಿಸಿದರು. ಚೆನ್ನಾಗಿಯೇ ನಡೆಯುತ್ತಿತ್ತು. ಆಗಾಗ ಸತ್ಸಂಗ ನೀಡುತ್ತಿದ್ದ ಜಯದಯಾಳ್ ಅವರನ್ನು ಕಾಣಲು ಗೋರಖ್‌ಪುರದ ಹನುಮಾನ್ ಪ್ರಸಾದ್ ಪೊದ್ದಾರ್ ಮತ್ತು ಘನಶ್ಯಾಮ್ ದಾಸ್ ಜಲನ್ ಕೂಡ ಒಂದು ಆಗಮಿಸಿದ್ದರು. ಈ ವೇಳೆ ಗೀತೆಗಳನ್ನು ಯಾವುದೇ ದೋಷಗಳಿಲ್ಲದೆ ಮುದ್ರಿಸುವ ವಿಷಯ ಪ್ರಸ್ತಾಪಿಸಿದಾಗ ಹುಟ್ಟಿಕೊಂಡಿದ್ದೇ ಈ 'ಗೀತಾ ಪ್ರೆಸ್'! ಏಪ್ರಿಲ್ 23, 1923 ರಂದು ಬಾಡಿಗೆ ಕಟ್ಟಡದಲ್ಲಿ ಕೇವಲ 10 ರೂ.ಗೆ ಗೀತಾ ಪ್ರೆಸ್ ಅನ್ನು ಸ್ಥಾಪಿಸಲಾಯಿತು. ಅಂದೇ ಅದರ ವಿಸ್ತರಣೆಯ ಪ್ರಕ್ರಿಯೆಯೂ ಪ್ರಾರಂಭವಾಯಿತು.

15 ಭಾಷೆಗಳಲ್ಲಿ 1,800 ಬಗೆಯ ಪುಸ್ತಕ ಮುದ್ರಣ: ಸದ್ಯ ಗೀತಾ ಪ್ರೆಸ್ ಆಧುನಿಕ ಯಂತ್ರಗಳನ್ನು ಹೊಂದಿದ್ದು, 15 ಭಾಷೆಗಳಲ್ಲಿ 1,800 ಬಗೆಯ ಪುಸ್ತಕಗಳನ್ನು ಮುದ್ರಿಸುತ್ತಿರುವುದು ಗಮನಾರ್ಹ. ಈ ಮುದ್ರಣಾಲಯವು 2 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, 550 ಉದ್ಯೋಗಿಗಳನ್ನು ಹೊಂದಿದೆ. ಈ ತಂಡವು ಪ್ರೂಫ್ ರೀಡಿಂಗ್‌ನಿಂದ ಮುದ್ರಣದವರೆಗೆ, ಆಡಳಿತದಿಂದ ಪರಿಚಲನೆಯವರೆಗೆ, ಬೈಂಡಿಂಗ್‌ನಿಂದ ವಿದ್ಯುತ್ ಪೂರೈಕೆಯವರೆಗೆ ಮತ್ತು ಯಂತ್ರಗಳ ನಿರ್ವಹಣೆಯವರೆಗೆ ಎಲ್ಲವನ್ನೂ ನೋಡಿಕೊಳ್ಳುತ್ತದೆ. ಪ್ರಸ್ತುತ, ಪುಸ್ತಕಗಳ ಮುದ್ರಣವನ್ನು ಜಪಾನಿನ ಯಂತ್ರಗಳನ್ನು ಬಳಸಿ ಮಾಡಲಾಗುತ್ತಿದೆ. ಅವುಗಳ ಬೆಲೆ ಇದೀಗ ಕೋಟಿ ರೂ.ಗಳಲ್ಲಿದೆ. ಒಂದು ಟ್ರಸ್ಟ್ ಮೂಲಕ ನಡೆಸಲ್ಪಡುತ್ತಿದ್ದು, ಟ್ರಸ್ಟ್‌ನಲ್ಲಿ 21 ಜನರು ಸೇರಿದ್ದಾರೆ. ಗೀತಾ ಪ್ರೆಸ್‌ನ ವಿಸ್ತರಣೆ ಮತ್ತು ಕಾರ್ಯಾಚರಣೆಗೆ ಯಾವುದೇ ಅಗತ್ಯ ಬಂದರೂ, ಟ್ರಸ್ಟ್‌ನ ಸದಸ್ಯರು ಅದನ್ನು ಪೂರೈಸುತ್ತಾರೆ.

ಜಯದಯಾಳ್ ಗೋಯಾಂಕಾ ಯಾರು?: ಗೋರಖ್‌ಪುರದ ಪೊದ್ದಾರ್ ಮತ್ತು ದಾಸ್ ಜಲನ್ ಈ ಇಬ್ಬರು ಸ್ನೇಹಿತರೊಂದಿಗೆ ಸೇರಿ ಗೀತಾ ಪ್ರೆಸ್ ಸ್ಥಾಪಿಸಿದ ಜಯದಯಾಳ್ ಗೋಯಾಂಕಾ ಅವರ ಹಿನ್ನೆಲೆ ಅಷ್ಟು ಸರಿ ಇರಲಿಲ್ಲ. 1885 ರಲ್ಲಿ ರಾಜಸ್ಥಾನದ ಚುರುವಿನಲ್ಲಿ ಜನಿಸಿದ ಜಯದಯಾಳ್, 13ನೇ ವಯಸ್ಸಿನಲ್ಲಿ ನಾಥ್ ಪಂಥದ ಸಂತ ಮಂಗಳನಾಥರ ಸಂಪರ್ಕಕ್ಕೆ ಬಂದರು. ಅವರ ತ್ಯಾಗ ಮತ್ತು ನಿರ್ಲಿಪ್ತತೆ ಜಯದಯಾಳ್ ಅವರ ಮೇಲೆ ಪ್ರಭಾವ ಬೀರಿತು. ಇದಾದ ನಂತರ, 18ನೇ ವಯಸ್ಸಿನಲ್ಲಿ, ಅವರು ವ್ಯಾಪಾರಕ್ಕಾಗಿ ಬಂಕುರಾ (ಬಂಗಾಳ) ಗೆ ಹೋದರು. ಕೆಲವು ವರ್ಷಗಳ ಕಾಲ ವ್ಯಾಪಾರ ಮಾಡಿದ ನಂತರ, ಅವರು ಎಲ್ಲವನ್ನೂ ತಮ್ಮ ಕುಟುಂಬಕ್ಕೆ ಬಿಟ್ಟುಕೊಟ್ಟು ಶ್ರೀಮದ್ ಭಗವದ್ಗೀತೆಯನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು. 22ನೇ ವಯಸ್ಸಿನಲ್ಲಿ ಸತ್ಸಂಗ ಮತ್ತು ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದರು. ಬಳಿಕ ಹಲವು ಏರಿಳಿತ ಕಂಡ ಜಯದಯಾಳ್, 1923ರಲ್ಲಿ ಗೀತಾ ಪ್ರೆಸ್ ಸ್ಥಾಪಿಸಿದರು. ಇದರ ಶಾಖೆಗಳು ಗೋರಖ್‌ಪುರ, ಕೋಲ್ಕತ್ತಾ, ಚುರು ಮತ್ತು ಸ್ವರ್ಗಾಶ್ರಮ ಋಷಿಕೇಶದಲ್ಲಿ ಕಾರ್ಯನಿರ್ವಹಿಸುತ್ತವೆ. ಇದರ 20 ಶಾಖೆಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತವೆ. ಮಹಾ ಕುಂಭ ಮೇಳದಲ್ಲೂ ಗೀತಾ ಪ್ರೆಸ್ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಮಾರಾಟ ಮಾಡಿತು ಎಂದು ಗೀತಾ ಪ್ರೆಸ್ ಟ್ರಸ್ಟಿ ದೇವಿ ದಯಾಳ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಗಮನ ಸೆಳೆಯುವ ಗ್ಯಾಲರಿ: ಗೀತಾ ಪ್ರೆಸ್ ಆವರಣದಲ್ಲಿ, ರಾಮ ಮತ್ತು ಕೃಷ್ಣನ ಲೀಲೆಗಳು, ಅವರ ಜನನ, ಮಹಾಭಾರತ ಮತ್ತು ಲಂಕಾ ವಿಜಯಕ್ಕೆ ಸಂಬಂಧಿಸಿದ ಗ್ಯಾಲರಿ ಇದ್ದು, ಎಲ್ಲರ ಗಮನ ಸೆಳೆಯುತ್ತಿವೆ. ಈ ವರ್ಣಚಿತ್ರಗಳನ್ನು ಹೂವಿನ ಬಣ್ಣಗಳಿಂದ ಮಾಡಲಾಗಿದ್ದು, ಸಂಪೂರ್ಣ ನೈಸರ್ಗಿಕವಾಗಿವೆ. ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು 1955ರಲ್ಲಿ ಇದನ್ನು ಉದ್ಘಾಟಿಸಿದ್ದು, 2022ರಲ್ಲಿ, ಶತಮಾನೋತ್ಸವದ ಉದ್ಘಾಟನೆಯ ವೇಳೆ ಆಗಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಲ್ಲಿಗೆ ಭೇಟಿ ನೀಡಿದ್ದರು. ಸಮಾರೋಪ ಸಮಾರಂಭಕ್ಕೆ ಬಂದಿದ್ದ ಪ್ರಧಾನಿ ಮೋದಿ ಕೂಡ ಇಲ್ಲಿನ ವರ್ಣಚಿತ್ರಗಳನ್ನು ನೋಡಿ ಆಕರ್ಷಿತರಾಗಿದ್ದಾರೆ. ಈ ಟ್ರಸ್ಟ್ ಗೀತಾ ಜವಳಿ ಇಲಾಖೆ ಮತ್ತು ಆಯುರ್ವೇದ ಔಷಧಿಗಳ ಕ್ಷೇತ್ರದಲ್ಲೂ ಕಾರ್ಯನಿರ್ವಹಿಸುತ್ತದೆ. ಉಚಿತ ಸಮಾಲೋಚನೆ ಮತ್ತು ಔಷಧಿಗಳ ವಿತರಣೆಯನ್ನು ಮಾಡಲಾಗುತ್ತದೆ. ಇದರಿಂದ ಗಳಿಸಿದ ಲಾಭವನ್ನು ಗೀತಾ ಪ್ರೆಸ್‌ನ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತದೆ ಎಂದು ಟ್ರಸ್ಟ್‌ನ ಮಂಡಳಿಯ ಸದಸ್ಯ ಅಜಯ್ ಪ್ರಕಾಶ್ ಅಗರ್‌ವಾಲ್ ಅವರು ಇದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಗೀತಾ 15 ಭಾಷೆಗಳಲ್ಲಿ ಪ್ರಕಟ: ಹಿಂದಿ, ಸಂಸ್ಕೃತ, ಇಂಗ್ಲಿಷ್, ತೆಲುಗು, ಬಂಗಾಳಿ, ಮರಾಠಿ, ಅಸ್ಸಾಮಿ, ತಮಿಳು, ನೇಪಾಳಿ, ಗುಜರಾತಿ, ಮಲಯಾಳಂ, ಕನ್ನಡ, ಒರಿಯಾ, ಪಂಜಾಬಿ ಮತ್ತು ಉರ್ದು ಸೇರಿದಂತೆ 15 ಭಾಷೆಗಳಲ್ಲಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಪ್ರಕಟವಾಗುತ್ತದೆ. ಸದ್ಯ ಇಂಗ್ಲಿಷ್‌ನಲ್ಲಿಯೂ ಲಭ್ಯ ಅನ್ನೋದು ಗಮನಾರ್ಹ.

ಆನ್‌ಲೈನ್‌ನಲ್ಲಿಯೂ ಪುಸ್ತಕ ಲಭ್ಯ: ಗೀತಾ ಪ್ರೆಸ್ ಆರಂಭವಾದಾಗಿನಿಂದ ಈವರೆಗೂ 100 ಕೋಟಿಗೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಪ್ರತಿ ವರ್ಷ ಮುದ್ರಣವಾಗಬೇಕಾದ ಪುಸ್ತಕಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೇಡಿಕೆಗಳು ಬಂದಷ್ಟು ಪೂರೈಕೆ ಮಾಡಲು ಆಗುತ್ತಿಲ್ಲ. ಕಳೆದ ವರ್ಷ ಮೂರು ಕೋಟಿ ಪುಸ್ತಕಗಳನ್ನು ಮುದ್ರಿಸಲಾಗಿದೆ. ಗೀತಾ ಪ್ರೆಸ್ ಪುಸ್ತಕಗಳು ಆನ್‌ಲೈನ್‌ನಲ್ಲಿಯೂ ಲಭ್ಯವಿದೆ. ಇವುಗಳನ್ನು ವೆಬ್‌ಸೈಟ್‌ನಲ್ಲಿಯೂ ಅಪ್‌ಲೋಡ್ ಮಾಡಲಾಗಿದೆ ಎನ್ನುತ್ತಾರೆ ಗೀತಾ ಪ್ರೆಸ್ ವ್ಯವಸ್ಥಾಪಕಿ ಲಾಲ್ಮಣಿ ತಿವಾರಿ ಅವರು.
ವಿದೇಶಗಳಿಗೂ ಪುಸ್ತಕಗಳ ಸರಬರಾಜು: ಮುದ್ರಣಾಲಯದ ಏಳ್ಗೆಗಾಗಿ ಜನವರಿ 20, 1924 ರಂದು, ಜಯದಯಾಳ್ ಅವರು ಸುಮಾರು 7 ಸಾವಿರ ರೂ. ಮೌಲ್ಯದ ದೊಡ್ಡ ರಾಯಲ್ ಪ್ಯಾನ್‌ಬೆಲ್ಟ್ ಯಂತ್ರವನ್ನು ಖರೀದಿಸಿದರು. ಆರಂಭಿದಲ್ಲಿ ಪ್ರೆಸ್ ಬಾಡಿಗೆ ಮನೆಯಲ್ಲಿ ನಡೆಯುತ್ತಿತ್ತು. ಅದು ತುಂಬಾ ಚಿಕ್ಕದಾಗಿತ್ತು. ಹಾಗಾಗಿ, ಜುಲೈ 12, 1926 ರಂದು ಶೇಷ್‌ಪುರದಲ್ಲಿ 10,000 ರೂ.ಗಳಿಗೆ ಕಟ್ಟಡವೊಂದುನ್ನು ಖರೀದಿಸಲಾಯಿತು. ಗೀತಾ ಮುದ್ರಣಾಲಯದ ಹೊರತಾಗಿ, ರಾಮಚರಿತ ಮಾನಸ, ಕಲ್ಯಾಣ್ ನಿಯತಕಾಲಿಕೆ ಸೇರಿದಂತೆ ಇತರ ಪುಸ್ತಕಗಳನ್ನು ಮುದ್ರಿಸಲು ಆರಂಭಿಸಲಾಯಿತು. ಕ್ರಮೇಣ ಗೀತಾ ಮುದ್ರಣಾಲಯವು ಒಂದು ದೊಡ್ಡ ಕೇಂದ್ರವಾಗಿ ಮಾರ್ಪಟ್ಟಿತು. ಸದ್ಯ ಇಲ್ಲಿಂದ ವಿದೇಶಗಳಿಗೂ ಪುಸ್ತಕಗಳನ್ನು ಸರಬರಾಜು ಮಾಡಲಾಗುತ್ತದೆ. ಧರ್ಮೋಪದೇಶಗಳನ್ನು ಆಧರಿಸಿದ ಜಯದಯಾಳ್ ಬರೆದ ಸುಮಾರು 115 ಪುಸ್ತಕಗಳಿವೆ. ಹಿಂದಿಯಲ್ಲದೆ, ಬಂಗಾಳಿ, ಒರಿಯಾ, ಕನ್ನಡ, ತಮಿಳು, ತೆಲುಗು, ಗುಜರಾತಿ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳಲ್ಲಿಯೂ ಅವರ ಪುಸ್ತಕಗಳು ಪ್ರಕಟವಾಗಿವೆ. ಕಾಲಕ್ರಮೇಣ ಜನ ಸಂಪರ್ಕದಿಂದ ದೂರ ಉಳಿದ ಜಯದಯಾಳ್ ಗೋಯಂಕಾ 1965 ರಲ್ಲಿ ಋಷಿಕೇಶದಲ್ಲಿ ನಿಧನರಾದರು ಎಂದು ಪ್ರೆಸ್ ವ್ಯವಸ್ಥಾಪಕಿ ಲಾಲ್ಮಣಿ ತಿವಾರಿ ಗೀತಾ ಪ್ರೆಸ್‌ನ ಬೆಳೆದು ಬಂದ ಹಾದಿ ವಿವರಿಸಿದರು.

ಆಯುರ್ವೇದ ಔಷಧಿಗಳ ತಯಾರಿಕೆ: ಗೀತಾ ಪ್ರೆಸ್ ಮ್ಯಾನೇಜ್‌ಮೆಂಟ್ ಹಲವು ವರ್ಷಗಳಿಂದ ಶುದ್ಧ ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿಯೂ ತೊಡಗಿಸಿಕೊಂಡಿದೆ. ಉಚಿತ ಆಯುರ್ವೇದ ಔಷಧಾಲಯವನ್ನು ನಡೆಸಲಾಗುತ್ತದೆ. ಸ್ವರ್ಗಾಶ್ರಮ ಋಷಿಕೇಶ, ಗೋರಖ್‌ಪುರ, ಚುರು, ಕೋಲ್ಕತ್ತಾ ಮತ್ತು ಸೂರತ್‌ಗಳಲ್ಲಿಯೂ ಉಚಿತ ಔಷಧ ವಿತರಣೆಯನ್ನು ಮಾಡಲಾಗುತ್ತದೆ. ಈ ಹಿಂದೆ ಈ ಔಷಧವನ್ನು ಕೋಲ್ಕತ್ತಾದಲ್ಲಿಯೂ ತಯಾರಿಸಲಾಗುತ್ತಿತ್ತು. ಆದರೆ ಈಗ ಅದನ್ನು ನಿಲ್ಲಿಸಲಾಗಿದೆ. ಗೀತಾ ಪ್ರೆಸ್ ಟ್ರಸ್ಟ್ ಋಷಿಕೇಶದಲ್ಲಿ ಗೀತಾ ಭವನ ಸ್ಥಾಪಿಸಿದೆ. ಇದು ಸಾವಿರಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿದೆ. ಇಲ್ಲಿ ಉಚಿತ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಧಾರ್ಮಿಕ ಪುಸ್ತಕಗಳ ಜೊತೆಗೆ, ಕಲ್ಯಾಣ್ ಮಾಸಿಕ ಪತ್ರಿಕೆಯನ್ನು ಸಹ ಮುದ್ರಿಸುತ್ತದೆ. ಇದನ್ನು 1926 ರಿಂದ ಪ್ರಕಟಿಸಲಾಗಿದೆ. ಇದರ ಆರಂಭಿಕ ಸಂಚಿಕೆಗಳನ್ನು ಮುಂಬೈನ ಶ್ರೀ ವೆಂಕಟೇಶ್ವರ ಮುದ್ರಾನಾಲಯದಿಂದ ಸುಮಾರು ಒಂದು ವರ್ಷದ ಕಾಲ ಮುದ್ರಿಸಲಾಯಿತು. ನಂತರ, ಅದರ ಮುದ್ರಣವು ಗೋರಖ್‌ಪುರದಿಂದ ಪ್ರಾರಂಭವಾಯಿತು. ಗೀತಾ ಪ್ರೆಸ್ ಸ್ಥಾಪನೆಗೂ ಮುಂಚೆಯೇ, ರಾಮಚರಿತ ಮಾನಸ ಸೇರಿದಂತೆ ಸನಾತನ ಧರ್ಮದ ಅನೇಕ ಪುಸ್ತಕಗಳು ಮಾರುಕಟ್ಟೆಯಲ್ಲಿದ್ದವು. ಆದರೆ, ಅವುಗಳ ಬೆಲೆಗಳು ಹೆಚ್ಚಿದ್ದವು. ಮುದ್ರಣ ಮತ್ತು ಬೈಂಡಿಂಗ್ ಕೂಡ ಅಷ್ಟು ಚೆನ್ನಾಗಿರಲಿಲ್ಲ. ಎಲ್ಲಾ ಪುಸ್ತಕಗಳು ಸಂಸ್ಕೃತದಲ್ಲಿದ್ದವು. ಮಹಾಭಾರತದ ಹಿಂದಿ ಅನುವಾದ ಮತ್ತು ಅದರ ಮೂಲ ಪ್ರತಿ ಲಭ್ಯವಿರಲಿಲ್ಲ. ಅನೇಕ ಪುರಾಣಗಳು ಹಿಂದಿಯಲ್ಲಿ ಲಭ್ಯವಿರಲಿಲ್ಲ. ಗೀತಾ ಪ್ರೆಸ್ ಈ ಎಲ್ಲಾ ಪುಸ್ತಕಗಳನ್ನು ಹಿಂದಿಗೆ ಅನುವಾದಿಸಿ ಎಲ್ಲರಿಗೂ ಅಗ್ಗದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿತು. ನೇಪಾಳದಂತಹ ಹಿಂದೂ ರಾಷ್ಟ್ರದಲ್ಲಿಯೂ ಸಹ, ಗೀತಾ ಪ್ರೆಸ್‌ನ ದೊಡ್ಡ ಕೇಂದ್ರವು ಅದರ ರಾಜಧಾನಿ ಕಠ್ಮಂಡುವಿನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಲಾಲ್ಮಣಿ ತಿವಾರಿ ಗೀತಾ ಪ್ರೆಸ್‌ನ ಸಾಧನೆ ಬಿಚ್ಚಿಟ್ಟಿದ್ದಾರೆ.

ಪ್ರತಿದಿನ 70 ಸಾವಿರಕ್ಕೂ ಹೆಚ್ಚು ಪುಸ್ತಕ ಮುದ್ರಣ: ಆರಂಭಿಕ ದಿನಗಳಲ್ಲಿ, ಗೀತಾ ಪ್ರೆಸ್‌ನಲ್ಲಿ ಮೂವರು ನುರಿತ ಜನರು ಒಂದು ಗಂಟೆಯಲ್ಲಿ 100 ಪುಟಗಳನ್ನು ಮುದ್ರಿಸಲು ಸಾಧ್ಯವಾಗಲಿಲ್ಲ. ಜನರ ಬೇಡಿಕೆ ಹೆಚ್ಚುತ್ತಲೇ ಇತ್ತು. ಕಾಲಕ್ರಮೇಣ ಅದನ್ನು ವಿಸ್ತರಿಸಬೇಕಿತ್ತು. ಈ ಪರಿಸ್ಥಿತಿಯಲ್ಲಿ, ಜಯದಯಾಳ್ ಗೋಯಾಂಕಾ ಮತ್ತು ಹನುಮಾನ್ ಪ್ರಸಾದ್ ಪೊದ್ದಾರ್ ಬರೆದ "ಗೀತಾ" ಪುಸ್ತಕವು ಹಿಂದಿ ಅನುವಾದದೊಂದಿಗೆ ಪ್ರಕಟಗೊಳ್ಳಲು ಪ್ರಾರಂಭಿಸಿತು. ರಾಮಚರಿತ ಮಾನಸ ಕೂಡ ಪ್ರಕಟವಾಗಲು ಪ್ರಾರಂಭಿಸಿತು. ಪ್ರಸ್ತುತ, ಇಲ್ಲಿ ಪ್ರತಿದಿನ 70 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಲಾಗುತ್ತದೆ. ಇಲ್ಲಿಯವರೆಗೆ 420 ಮಿಲಿಯನ್ ಗೀತೆಗಳು ಮತ್ತು 70 ಮಿಲಿಯನ್ಗೂ ಹೆಚ್ಚು ರಾಮಚರಿತ ಮಾನಸಗಳು ಪ್ರಕಟವಾಗಿವೆ. ಪ್ರತಿದಿನ ಮುದ್ರಣಕ್ಕಾಗಿ 600 ಟನ್‌ಗಳಿಗಿಂತ ಹೆಚ್ಚು ಕಾಗದವನ್ನು ಬಳಸಲಾಗುತ್ತದೆ. ಪುಸ್ತಕಗಳಿಗೆ ಇರುವ ಬೇಡಿಕೆಯನ್ನು ಪರಿಗಣಿಸಿ, ಟ್ರಸ್ಟ್ GIDA ನಲ್ಲಿ ಭೂಮಿಯನ್ನು ಹುಡುಕುತ್ತಿದೆ. ಅಲ್ಲಿ ಆಧುನಿಕ ಯಂತ್ರಗಳನ್ನು ಅಳವಡಿಸುವ ಮೂಲಕ ಪುಸ್ತಕಗಳನ್ನು ಮುದ್ರಿಸಲಾಗುವುದು ಎಂದು ಲಾಲ್ಮಣಿ ತಿಳಿಸಿದ್ದಾರೆ.

ಗೌತಮ್ ಅದಾನಿ ಬೆಂಬಲ: ಗೀತಾ ಪ್ರೆಸ್ ಪುಸ್ತಕಗಳು ಇ-ಪುಸ್ತಕ ರೂಪದಲ್ಲಿ ಲಭ್ಯವಿದ್ದು, ಇವುಗಳನ್ನು ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳಲ್ಲಿ ಸುಲಭವಾಗಿ ಓದಬಹುದು. ಉದ್ಯಮಿ ಗೌತಮ್ ಅದಾನಿ ಕೂಡ ಗೀತಾ ಪ್ರೆಸ್ ಮ್ಯಾನೇಜ್‌ಮೆಂಟ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಮಹಾಕುಂಭ ಮೇಳದಲ್ಲಿ ಭಕ್ತಿಗೀತೆಗಳ ಸಂಕಲನವಾದ ಪ್ರತಿಗಳನ್ನು ಹಂಚಿದ್ದರು. ಪ್ರಧಾನಿ ಮೋದಿ ಅವರಲ್ಲದೆ, ಸಿಎಂ ಯೋಗಿ, ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಶಂಕರಾಚಾರ್ಯ ಜ್ಯೋತಿಷ್ ಪೀಠಾಧೀಶ್ವರ ಸ್ವಾಮಿ ಅವಿಮುಕ್ತೇಶ್ವರಾನಂದ ಮಹಾರಾಜ್, ಪುರಿ ಪೀಠಾಧೀಶ್ವರ ಜಗತ್ಗುರು ಸ್ವಾಮಿ ನಿಶ್ಚಲಾನಂದ ಸರಸ್ವತಿ, ಶೃಂಗೇರಿ ಪೀಠದ ಶಂಕರಾಚಾರ್ಯ ಸ್ವಾಮಿ ಶ್ರೀ ವಿಧುಶೇಖರ ಭಾರತಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕರು ಗೀತಾ ಪ್ರೆಸ್‌ಗೆ ಭೇಟಿ ನೀಡಿದ್ದಾರೆ.