ಉತ್ತರಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಇಂದು ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯರಾದ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ತ್ರಿವೇಣಿ ಸಂಗಮದಲ್ಲಿ ನಡೆದ ಪವಿತ್ರ ಆಚರಣೆಯಲ್ಲಿ ಭಾಗಿಯಾಗಿದ್ದರು. ಸೂಪರ್ ಸ್ಟಾರ್ಸ್ ಪವಿತ್ರ ಸ್ನಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2019ರ ಕೊನೆಯ ಕುಂಭಮೇಳದ ನಂತರದ ಸುಧಾರಣೆಗಳನ್ನು ಎತ್ತಿಹಿಡಿದ ಬಾಲಿವುಡ್ ಖಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ್, ಸ್ಥಳದಲ್ಲಿನ ಸುಸಂಘಟಿತ ವ್ಯವಸ್ಥೆಗೆ ಕೃತಜ್ಞತೆ ವ್ಯಕ್ತಪಡಿಸಿದರು. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದ ಬಳಿಕ, ಅಕ್ಷಯ್ ತಮ್ಮ ಮೆಚ್ಚುಗೆ ತಿಳಿಸಿದರು. "ಇಲ್ಲಿ ಇಷ್ಟು ಉತ್ತಮ ವ್ಯವಸ್ಥೆಗಳನ್ನು ಮಾಡಿದ್ದಕ್ಕಾಗಿ ನಾನು ಸಿಎಂ ಯೋಗಿಜಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಸೌಲಭ್ಯಗಳು ಅತ್ಯುತ್ತಮವಾಗಿವೆ ಮತ್ತು ಎಲ್ಲವನ್ನೂ ತುಂಬಾ ಚೆನ್ನಾಗಿ ನಿರ್ವಹಿಸಲಾಗಿದೆ" ಎಂದು ತಿಳಿಸಿದರು.
ಇದೇ ವೇಳೆ ತಮ್ಮ ಹಿಂದಿನ ಅನುಭವ, 2019ರ ಕುಂಭಮೇಳವನ್ನು ನೆನಪಿಸಿಕೊಂಡರು. "2019ರಲ್ಲಿ ಕುಂಭ ನಡೆದಾಗ ಜನರು ತಮ್ಮದೇ ಆದ ವಸ್ತುಗಳನ್ನು (bundle of belongings) ತರುತ್ತಿದ್ದರು ಎಂಬುದಿನ್ನೂ ನನಗೆ ನೆನಪಿದೆ. ಆದ್ರೀಗ ಅಂಬಾನಿ, ಅದಾನಿ ಮತ್ತು ಪ್ರಸಿದ್ಧ ಕಲಾವಿದರಂತಹ ಅನೇಕ ಪ್ರಭಾವಿ ವ್ಯಕ್ತಿಗಳು ಬರುತ್ತಿದ್ದಾರೆ. ವ್ಯವಸ್ಥೆಗಳು ಎಷ್ಟು ಚೆನ್ನಾಗಿವೆ ಎಂಬುದನ್ನು ಇದು ತೋರಿಸುತ್ತದೆ" ಎಂದರು.
"ಇಲ್ಲಿ ಎಲ್ಲರನ್ನೂ ಉತ್ತಮವಾಗಿ ನೋಡಿಕೊಳ್ಳುತ್ತಿರುವುದಕ್ಕಾಗಿ ಎಲ್ಲಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಎಲ್ಲಾ ಭಕ್ತರ ಸುರಕ್ಷತೆ ಮತ್ತು ಸೌಕರ್ಯವನ್ನು ನೋಡಿಕೊಂಡಿದ್ದಾರೆ" ಎಂದು ತಿಳಿಸಿದರು.
ಮತ್ತೊಂದೆಡೆ ಬಹುಬೇಡಿಕೆಯ ನಟಿ ಕತ್ರಿನಾ ಕೈಫ್, ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ್ ಸರಸ್ವತಿ ಅವರನ್ನು ಭೇಟಿಯಾಗಿ, ಆಶೀರ್ವಾದ ಪಡೆದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕತ್ರಿನಾ, ಮಹಾಕುಂಭಮೇಳದ ಭಾಗವಾಗಿರುವುದಕ್ಕೆ ತಮ್ಮ ಉತ್ಸಾಹ, ಜೊತೆಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಎನ್ಟಿಆರ್ನೀಲ್' ಸಿನಿಮಾದ ಬಂಡವಾಳ ಇಷ್ಟೊಂದಾ! ಮೊದಲ ದೃಶ್ಯಕ್ಕೇ 3,000 ಕಲಾವಿದರು
"ಈ ಬಾರಿ ಇಲ್ಲಿಗೆ ಬರಲು ಸಾಧ್ಯವಾಗಿದ್ದು ನನ್ನ ಅದೃಷ್ಟ. ನಿಜಕ್ಕೂ ಸಂತೋಷ ಮತ್ತು ಕೃತಜ್ಞತಾ ಭಾವವಿದೆ. ನಾನು ಸ್ವಾಮಿ ಚಿದಾನಂದ್ ಸರಸ್ವತಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡೆ. ಇಲ್ಲಿಂದ ನನ್ನ ಅನುಭವವನ್ನು ಪ್ರಾರಂಭಿಸುತ್ತಿದ್ದೇನೆ. ನನಗೆ ಎಲ್ಲದರ ಶಕ್ತಿ, ಸೌಂದರ್ಯ ಮತ್ತು ಮಹತ್ವ ಇಷ್ಟ. ಇಲ್ಲಿ ಇಡೀ ದಿನ ಕಳೆಯಲು ನಾನು ಎದುರು ನೋಡುತ್ತಿದ್ದೇನೆ" ಎಂದು ತಿಳಿಸಿದರು.
ಫೆಬ್ರವರಿ 13ರಂದು, ಕತ್ರಿನಾ ಅವರ ಪತಿ-ನಟ ವಿಕ್ಕಿ ಕೌಶಲ್ ತಮ್ಮ ಛಾವಾ ಚಿತ್ರ ಬಿಡುಗಡೆಗೂ ಮುನ್ನ ಮಹಾ ಕುಂಭಮೇಕ್ಕೆ ಭೇಟಿ ನೀಡಿದ್ದರು. ಪವಿತ್ರ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಈ ಮಹಾ ಕುಂಭಮೇಳವು ಭಕ್ತರು ಮತ್ತು ಸೆಲೆಬ್ರಿಟಿಗಳನ್ನು ಆಕರ್ಷಿಸುತ್ತಲೇ ಇದೆ.