ಬೆಂಗಳೂರು: ಬಿಸಿಲು, ಮಳೆ, ಚಳಿಯೆನ್ನದೇ ಸದಾ ಕಾರ್ಯ ನಿರ್ವಹಿಸುವ ರಾಜ್ಯ ತುರ್ತು ಹಾಗೂ ಅಗ್ನಿಶಾಮಕ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ವಿವಿಧ ಅಗ್ನಿ ಅವಘಡಗಳ ರಕ್ಷಣಾ ಕಾರ್ಯಾಚರಣೆಯಲ್ಲಿ 4,050 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ರಕ್ಷಿಸಿದ್ದು, 973 ಕೋಟಿ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿ ನಷ್ಟವಾಗಿದೆ.
ಅಗ್ನಿ ದುರಂತಗಳಲ್ಲಿ ಸಿಲುಕಿದ್ದ 1,016 ಜನರ ಅಮೂಲ್ಯ ಜೀವ ಉಳಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದ 169 ಜನರು ಮೃತರಾದರೆ, 772 ಮಂದಿ ಗಾಯಗೊಂಡಿದ್ದಾರೆ. ಕಟ್ಟಡ ಕುಸಿತ, ವಿಷಕಾರಿ ಅನಿಲ ಸೋರಿಕೆ, ನೀರಿನಲ್ಲಿ ಮುಳುಗುವುದು ಸೇರಿದಂತೆ ಮಾನವನಿರ್ಮಿತ ಹಾಗೂ ಪ್ರಾಕೃತಿಕ ವಿಕೋಪದಂತಹ ರಕ್ಷಣಾ ಕಾರ್ಯಾಚರಣೆಯಲ್ಲಿ 9,165 ಜನರನ್ನು ರಕ್ಷಿಸಿದರೆ, 4,010 ಮಂದಿ ಪ್ರಾಣ ಕಳೆದುಕೊಂಡಿದ್ಧಾರೆ ಎಂದು ಇಲಾಖೆಯ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

219 ಅಗ್ನಿಶಾಮಕ ಠಾಣೆ: ಬೇಸಿಗೆ ಮಾತ್ರವಲ್ಲದೆ, ವರ್ಷದ ಎಲ್ಲಾ ದಿನಗಳು ಅಗ್ನಿಶಾಮಕ ಸಿಬ್ಬಂದಿಗೆ ಒಂದೇ ತರಹವಾಗಿದ್ದು, ತುರ್ತು ಕರೆ ಬಂದರೆ ಯುದ್ದದ ರೀತಿ ಸನ್ನದ್ದಗೊಂಡು ತ್ವರಿಗತಿಯಲ್ಲಿ ತೆರಳಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ರಾಜ್ಯದಲ್ಲಿ ಬಿಸಿಲಿನ ತಾಪ ದಿನೇ ದಿನೇ ಅಧಿಕವಾಗುತ್ತಿದ್ದು, ನಿರಂತರವಾಗಿ ಕಾಡ್ಗಿಚ್ಚು ಸೇರಿ ಇನ್ನಿತರ ಅಗ್ನಿ ದುರಂತಗಳು ಸಂಭವಿಸುತ್ತಿವೆ. ಕಾರ್ಯಾಚರಣೆಗೆ ತೊಡಕಾಗದಂತೆ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಅಗ್ನಿನಂದಕ ವಾಹನ ಸ್ಥಿತಿಗತಿ, ಉಪಕರಣಗಳ ಬಳಕೆ ತಪಾಸಣೆ, ಮುಖ್ಯವಾಗಿ ನೀರಿನ ಲಭ್ಯತೆ ಬಗ್ಗೆ ಎರಡು ಬಾರಿ ಪರಿಶೀಲಿಸುತ್ತಿದ್ದಾರೆ. ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಬೋಟಿಂಗ್, ನೀರಿನ ಪಂಪ್, ಅಗತ್ಯ ಸಲಕರಣೆ ಸೇರಿದಂತೆ ಇನ್ನಿತರ ಉಪಕರಣಗಳನ್ನು ಸಿದ್ದವಾಗಿಸಿಕೊಂಡು ಸಂಭವಿಸುವ ಅನಾಹುತ ಹೆಚ್ಚಾಗದಂತೆ ತಡೆದಿದ್ದಾರೆ. ರಾಜ್ಯದಲ್ಲಿಒಟ್ಟು 219 ಅಗ್ನಿಶಾಮಕ ಠಾಣೆಗಳಿದ್ದು, ಅಗತ್ಯ ಅನುಗುಣವಾಗಿ ಅಗ್ನಿಶಾಮಕವಾಹನ ಸೇರಿದಂತೆ ಇನ್ನಿತರ ರಕ್ಷಣಾ ವಾಹನಗಳಿಂದ ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತಿದೆ ಎಂದು ಅಗ್ನಿಶಾಮಕ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಮರಾಜನಗರ, ಮೈಸೂರು, ಕೊಡಗು, ಶಿವಮೊಗ್ಗ,ಬೆಳಗಾವಿ ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡರೆ ಉತ್ತರ ಕರ್ನಾಟಕ ಹಾಗೂ ಬಯಲುಸೀಮೆ ಜಿಲ್ಲೆಗಳ ಒಣ ಪ್ರದೇಶದಲ್ಲಿ ಬಿಸಿಲ ಧಗೆಗೆ ಹೊತ್ತಿ ಉರಿಯುವ ಬೆಂಕಿ, ಕೈಗಾರಿಕಾ ಹಾಗೂ ವಸತಿ ಪ್ರದೇಶಗಳಲ್ಲಿ ನಡೆಯುವ ಶಾರ್ಟ್ ಸರ್ಕ್ಯೂಟ್, ಸಿಲಿಂಡರ್ ಸ್ಫೋಟ ಸೇರಿದಂತೆ ಮಾನವ ನಿರ್ಲಕ್ಷ್ಯದ ಕಾರಣಗಳಿಗಾಗಿ ಅಗ್ನಿ ಅವಘಡಗಳು ಹೆಚ್ಚಾಗಿ ಸಂಭವಿಸಿವೆ.
ಕಳೆದ ಮೂರು ವರ್ಷಗಳಲ್ಲಿ 69,624 ಅಗ್ನಿ ಕರೆಗಳು ಬಂದಿವೆ. ತ್ವರಿಗತಿಯಲ್ಲಿ ಬೆಂಕಿ ನಂದಿಸಿದರೂ 2022ರಲ್ಲಿ 238 ಕೋಟಿ ರೂ., 2023ರಲ್ಲಿ 404 ಕೋಟಿ ರೂ. ಹಾಗೂ 2024ರಲ್ಲಿ 330 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಬೆಂಕಿಯಲ್ಲಿ ಕರಕಲಾಗಿದೆ. ಅದೇ ರೀತಿ 2022ರಲ್ಲಿ 787 ಕೋಟಿ ರೂ., 2023ರಲ್ಲಿ 1752 ಕೋಟಿ ರೂ., ಹಾಗೂ ಕಳೆದ ವರ್ಷ 1,500 ಕೋಟಿ ರೂ.ಗಿಂತ ಹೆಚ್ಚು ಆಸ್ತಿಯನ್ನು ರಕ್ಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
1,016 ಜನರ ಪ್ರಾಣ ರಕ್ಷಣೆ: ನೈಸರ್ಗಿಕ ವಿಕೋಪ ಹಾಗೂ ಮಾನವ ನಿರ್ಲಕ್ಷ್ಯ ಕಾರಣದಿಂದಾಗಿ ಸಂಭವಿಸುವ ಅನಾಹುತ ಸಂದರ್ಭಗಳಲ್ಲಿ ಆತ್ಯಾಧುನಿಕ ಉಪಕರಣ ಹಾಗೂ ತಂತ್ರಜ್ಞಾನ ಬಳಸಿಕೊಂಡು ಮೂರು ವರ್ಷದಲ್ಲಿ ಸಾವಿರಾರು ಮಂದಿಯ ಪ್ರಾಣ ರಕ್ಷಿಸಲಾಗಿದೆ. ಕಾರ್ಯಾಚರಣೆಯಲ್ಲಿ 1,016 ಜನರ ಪ್ರಾಣ ಉಳಿಸಿದರೆ, 169 ಮಂದಿ ಸಾವನ್ನಪ್ಪಿದ್ದಾರೆ. 722 ಮಂದಿ ಬೆಂಕಿಯಲ್ಲಿ ಸಿಲುಕಿ ಗಂಭೀರ ಗಾಯಗೊಂಡಿದ್ಧಾರೆ. ಬೆಂಕಿ ದುರಂತ ಹೊರತುಪಡಿಸಿದರೆ ಇನ್ನುಳಿದ ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ 9,165 ಮಂದಿ ರಕ್ಷಣೆ ಮಾಡಲಾಗಿದೆ. 4,010 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕೈಗೊಂಡರೂ ಮರದ ಕೊಂಬೆ, ತಂತಿ, ಗಾಳಿಪಟ ಹಾಗೂ ಕಂದಕಕ್ಕೆ ಬಿದ್ದು ಒದ್ದಾಡುತ್ತಿದ್ದ 395 ಹಾಗೂ ವಿವಿಧ ಪ್ರಾಣಿ-ಪಕ್ಷಿಗಳು ಮೃತಪಟ್ಟಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.
''ಬೇಸಿಗೆ ಹಿನ್ನೆಲೆಯಲ್ಲಿ ಅಗ್ನಿ ಅವಘಡ ವರದಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು, ಕೈಗಾರಿಕಾ ಹಾಗೂ ವಸತಿ ಪ್ರದೇಶಗಳಲ್ಲಿ ಜನರ ಅಜಾಗರೂಕತೆ ಕಾರಣದಿಂದಾಗಿ ಬೆಂಕಿ ಕರೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಏರ್ ಶೋ, ಇನ್ವೆಸ್ ಕರ್ನಾಟಕ ಹಾಗೂ ಟಿ.ನರಸೀಪುರದಲ್ಲಿ ನಡೆದ ಕುಂಭಮೇಳಕ್ಕೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಗ್ನಿಶಾಮಕ ವಾಹನಗಳನ್ನ ಹೆಚ್ಚಾಗಿ ಇರುವಂತೆ ನೋಡಿಕೊಳ್ಳಲಾಗಿತ್ತು'' ಎಂದು ರಾಜ್ಯ ಅಗ್ನಿಶಾಮಕ ಇಲಾಖೆ ನಿರ್ದೇಶಕ ಟಿ.ಎನ್.ಶಿವಶಂಕರ್ ತಿಳಿಸಿದರು.
ಇದನ್ನೂ ಓದಿ: 15 ವರ್ಷ ಮೇಲ್ಪಟ್ಟ 463 ಹಳೆಯ ಅಗ್ನಿಶಾಮಕ ವಾಹನಗಳು ಗುಜರಿಗೆ: 6 ತಿಂಗಳಲ್ಲಿ ರಸ್ತೆಗಿಳಿಯಲಿವೆ 184 ಹೊಸ ವಾಹನಗಳು
''ಒಂದು ವೇಳೆ ಸರಣಿ ಅಗ್ನಿ ಅವಘಡಗಳು ಸಂಭವಿಸಿದರೂ ಅಕ್ಕಪಕ್ಕದ ಅಗ್ನಿಶಾಮಕ ಠಾಣೆಗಳು ಅಥವಾ ಆಯಾ ಭಾಗದ ಮತ್ತೊಂದು ಠಾಣೆಗಳಿಂದ ಜಲವಾಹನಗಳನ್ನು ಕಳುಹಿಸಿ ನಿರ್ವಹಿಸಲಾಗುತ್ತಿದೆ. ನೀರಿನ ಕೊರತೆಯಾದರೆ ಸ್ಥಳೀಯ ಕೈಗಾರಿಕೆ, ಅಪಾರ್ಟ್ಮೆಂಟ್ಗಳ ಅಂಡರ್ ಗ್ರೌಂಡ್ ವಾಟರ್ ಟ್ಯಾಂಕರ್ ಗಳಿಂದ ನೀರನ್ನು ತುಂಬಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತೇವೆ. ಅಲ್ಲದೆ, ಮುಂದಿನ ಆರು ತಿಂಗಳಲ್ಲಿ 184 ಅಗ್ನಿಶಾಮಕ ವಾಹನಗಳು ಬರಲಿದ್ದು, ಕಾರ್ಯಾಚರಣೆಗೆ ಇನ್ನಷ್ಟು ನೆರವಾಗಲಿದೆ'' ಎನ್ನುತ್ತಾರೆ ಟಿ.ಎನ್.ಶಿವಶಂಕರ್.
2022ರಿಂದ 2024ರವರೆಗೆ ರಾಜ್ಯದಲ್ಲಿ ನಡೆದ ಅಗ್ನಿ ದುರಂತ ಹಾಗೂ ರಕ್ಷಣಾ ಕಾರ್ಯಾಚರಣೆ ವಿವರ:
ವರ್ಷ | ಕರೆಗಳು | ಆಸ್ತಿ ನಷ್ಟ (ರೂ.ಗಳಲ್ಲಿ) | ಆಸ್ತಿ ರಕ್ಷಣೆ (ರೂ.ಗಳಲ್ಲಿ) |
2022 | 17,074 | 238,94,49,453 | 787,17,01113 |
2023 | 28,718 | 404,4,570,564 | 1762,870,5,473 |
2024 | 23,832 | 330,26,68,798 | 1500,87,93,374 |
ಒಟ್ಟು | 973,66,88,815 | 4050,091,99,960 |
ಮೂರು ವರ್ಷಗಳಲ್ಲಿ ಅಗ್ನಿ ದುರಂತದಲ್ಲಿ ರಕ್ಷಿಸಲಾದ ಸಾವನ್ನಪ್ಪಿದ ಹಾಗೂ ಗಾಯಾಳುಗೊಂಡವರ ವಿವರ:
ವರ್ಷ | ರಕ್ಷಣೆ | ಮೃತಪಟ್ಟವರು | ಗಾಯಾಳುಗಳು |
2022 | 772 | 45 | 300 |
2023 | 123 | 76 | 221 |
2024 | 121 | 48 | 201 |
ಒಟ್ಟು | 1,016 | 169 | 722 |
ನೈಸರ್ಗಿಕ ವಿಕೋಪ ಸೇರಿದಂತೆ ಇನ್ನಿತರ ತುರ್ತು ರಕ್ಷಣಾ ಕಾರ್ಯಾಚರಣೆ ವಿವರ:
ವರ್ಷ | ಕರೆ | ರಕ್ಷಣೆ | ಮೃತರಾದವರು |
2022 | 3,464 | 3,643 | 1,414 |
2023 | 2,991 | 1,544 | 1,344 |
2024 | 3,316 | 3,978 | 1,252 |
ಒಟ್ಟು | 9,771 | 9,165 | 4,010 |
ಇದನ್ನೂ ಓದಿ: ಬೆಂಗಳೂರು ಮೆಟ್ರೋ: ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲಿನ ಸುರಕ್ಷತಾ ತಪಾಸಣೆ