ನವದೆಹಲಿ: ತಪ್ಪು ಮಾಹಿತಿ ನೀಡುವ ಜಾಹೀರಾತುಗಳ ಬಗ್ಗೆ ನಾಗರಿಕರು ನೇರವಾಗಿ ದೂರುಗಳನ್ನು ಸಲ್ಲಿಸಲು ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ- 1954 ಅನ್ನು ಪ್ರಮುಖವಾಗಿ ಬಳಸಿಕೊಳ್ಳಬೇಕಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.
ಈ ಕಾಯ್ದೆಯು ಅತ್ಯಂತ ಮಹತ್ವದ್ದಾಗಿದೆ. ಅದರ ನಿಬಂಧನೆಗಳನ್ನು ಪಾಲಿಸುವುದು ಅತ್ಯಗತ್ಯ. ಈ ಕಾಯ್ದೆಯ ಅನುಸಾರ ತಪ್ಪುದಾರಿಗೊಳಿಸುವ ಜಾಹೀರಾತುಗಳ ಬಗ್ಗೆ ದೂರುಗಳನ್ನು ಸಲ್ಲಿಸಲು ಬಯಸುವ ನಾಗರಿಕರಿಗಾಗಿ ವಿಶೇಷ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಹೇಳಿತು. ಈ ಕುರಿತಾಗಿ ಮಾರ್ಚ್ 7 ರಂದು ನಡೆಯುವ ಮುಂದಿನ ವಿಚಾರಣೆಯಲ್ಲಿ ಈ ಅಂಶವನ್ನು ಆದ್ಯತೆಯ ಮೇರೆಗೆ ಪರಿಗಣಿಸುವುದಾಗಿ ಇದೇ ವೇಳೆ ತಿಳಿಸಿತು.
ಪ್ರಕರಣವೇನು?: ಜಾರ್ಖಂಡ್, ಕರ್ನಾಟಕ, ಕೇರಳ, ಪಂಜಾಬ್, ಮಧ್ಯಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ-1945 ನಿಯಮ 170ರ ಅನುಸಾರ, ತಪ್ಪು ಮಾಹಿತಿಯುಳ್ಳ ಜಾಹೀರಾತುಗಳ ಮೇಲೆ ಕ್ರಮ ಜರುಗಿಸಿಲ್ಲ ಎಂಬ ಅರ್ಜಿಯು ಪೀಠಕ್ಕೆ ಸಲ್ಲಿಸಲಾಗಿದೆ.
ಸೋಮವಾರದ ವಿಚಾರಣೆಯ ವೇಳೆ, ಕರ್ನಾಟಕದಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳ 25 ಪ್ರಕರಣಗಳಲ್ಲಿ ವಸ್ತುವಿನ ವಿವರಗಳ ಕೊರತೆಯಿಂದಾಗಿ ಯಾವುದೇ ಕಾನೂನು ಕ್ರಮ ಜರುಗಿಸಲಾಗಿಲ್ಲ ಎಂದು ಪೀಠದ ಗಮನಕ್ಕೆ ತರಲಾಯಿತು.
ಇದಕ್ಕೆ ಬೇಸರಿಸಿದ ಪೀಠವು, ಇದು ಕರ್ನಾಟಕ ರಾಜ್ಯವು ನೀಡಿದ ನೆಪವಾಗಿದೆ. ರಾಜ್ಯವು ಪೊಲೀಸ್ ಇಲಾಖೆ, ಸೈಬರ್ ಸೆಲ್ ಅನ್ನು ಹೊಂದಿದೆ. ಇಂತಹ ಜಾಹೀರಾತುಗಳ ಮೂಲಗಳನ್ನು ಕಂಡುಹಿಡಿಯುವುದು ಅವರಿಗೆ ತುಂಬಾ ಸುಲಭ. ಆದರೆ, ಇದನ್ನು ಮಾಡಲು ಇಚ್ಛಾಶಕ್ತಿ ಹೊಂದಿರಬೇಕು" ಎಂದಿತು. ಜೊತೆಗೆ, ತಪ್ಪಿತಸ್ಥರನ್ನು ಪತ್ತೆಹಚ್ಚಲು ಮತ್ತು ನ್ಯಾಯಾಲಯಕ್ಕೆ ಈ ಕುರಿತ ವರದಿ ಸಲ್ಲಿಸಲು ಕರ್ನಾಟಕ ಸರ್ಕಾರಕ್ಕೆ ಒಂದು ತಿಂಗಳ ಗುಡುವು ನೀಡಿತು.
ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿ ನ್ಯಾಯಾಲಯಕ್ಕೆ ಸಹಾಯ ಮಾಡುತ್ತಿರುವ ಹಿರಿಯ ವಕೀಲ ಶಾದನ್ ಫರಾಸತ್ ಅವರು, ಕೇರಳಕ್ಕೆ ರಾಜ್ಯದಲ್ಲಿ ನಿಯಮಗಳನ್ನು ಸರಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಗಳಿಗೆ ಸಮನ್ಸ್: ಇನ್ನೂ, ಪ್ರಕರಣದ ಕುರಿತು ಫೆಬ್ರವರಿ 10 ರಂದು ನಡೆದಿದ್ದ ವಿಚಾರಣೆಯಲ್ಲಿ ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಿಗಳ ತಪ್ಪು ಜಾಹೀರಾತುಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ದೆಹಲಿ, ಆಂಧ್ರಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವಾರು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.
ದಾರಿತಪ್ಪಿಸುವ ಜಾಹೀರಾತುಗಳನ್ನು ನಿರ್ಬಂಧಿಸಲು, ಸಂಬಂಧಿತ ಜಾಹೀರಾತು ಬಿಡುಗಡೆ ಮಾಡುವ ಮೊದಲು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮಗಳು- 1994 ರ ಪ್ರಕಾರ ಜಾಹೀರಾತುದಾರರಿಂದ ಸ್ವಯಂ ಘೋಷಣೆಯನ್ನು ಪಡೆಯಬೇಕೆಂದು ಕೋರ್ಟ್ ನಿರ್ದೇಶಿಸಿತ್ತು.
ಇದನ್ನೂ ಓದಿ: ಪಿಂ-ಕಿಸಾನ್ 19ನೇ ಕಂತು ಬಿಡುಗಡೆ: 9.8 ಕೋಟಿ ರೈತರ ಖಾತೆಗಳಿಗೆ 22 ಸಾವಿರ ಕೋಟಿ ರೂ. ಜಮೆ