ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ-2025ರಲ್ಲಿ 50 ಕೋಟಿಗೂ ಹೆಚ್ಚು ಜನರು ಭಾಗಿಯಾಗಿ ಪವಿತ್ರ ಸ್ನಾನ ಮಾಡಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ವಿವಿಧ ಕ್ಷೇತ್ರಗಳ ಗಣ್ಯರು, ವಿದೇಶಿಗಳು ಕೂಡಾ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಸಿನಿ ಸೆಲೆಬ್ರಿಟಿಗಳೂ ಇದರಿಂದ ಹೊರತಲ್ಲ.
ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ವೈಷ್ಣವಿ ಗೌಡ ಮಹಾ ಕುಂಭಮೇಳದಲ್ಲಿ ಭಾಗಿಯಾಗಿ, ಪವಿತ್ರ ಸ್ನಾನ ಮಾಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಜನ್ಮದಿನ ಆಚರಿಸಿಕೊಂಡಿರುವ ನಟಿ, ಇಂದು ಮಹಾ ಕುಂಭಮೇಳದ ಪೋಸ್ಟ್ ಹಂಚಿಕೊಂಡು ಧನ್ಯ ಎಂಬರ್ಥದ ಕ್ಯಾಪ್ಷನ್ ಕೊಟ್ಟಿದ್ದಾರೆ.
''ಮಹಾ ಕುಂಭಮೇಳ (ಕೈ ಜೋಡಿಸಿರುವ ಇಮೋಜಿಯೊಂದಿಗೆ), ನನ್ನ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿಕೊಂಡಿದ್ದಕ್ಕೆ ಕೃತಜ್ಞಳಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು. ನಿಮ್ಮ ಶುಭ ಹಾರೈಕೆಗಳು ನಿಜವಾಗಿಯೂ ನನ್ನ ಜನ್ಮದಿನವನ್ನು ವಿಶೇಷವಾಗಿಸಿದೆ.'' - ನಟಿ ವೈಷ್ಣವಿ ಗೌಡ.
ಇದೇ ಫೆಬ್ರವರಿ 20ರಂದು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ತಮ್ಮ 33ನೇ ಜನ್ಮದಿನ ಆಚರಿಸಿಕೊಂಡರು. ಆ ಸಂದರ್ಭವೇ ನಟಿ ಪ್ರಯಾಗ್ರಾಜ್ ಪ್ರವಾಸ ಕೈಗೊಂಡಿದ್ದರು. ಆದ್ರೆ ಫೋಟೋಗಳನ್ನು ಕೊಂಚ ತಡವಾಗಿ ಹಂಚಿಕೊಂಡಿದ್ದಾರೆ.
ಮೊದಲ ಫೋಟೋದಲ್ಲಿ ನದಿಯಲ್ಲಿ ಮಿಂದೆದ್ದಿರುವ ಫೋಟೋ ಇದ್ದರೆ, ಮತ್ತೊಂದರಲ್ಲಿ ನಟಿಯ ಹಣೆಯಲ್ಲಿ ಅರಿಶಿಣ ಕುಂಕುಮವನ್ನು ಕಾಣಬಹುದು. ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು, ಎರಡರಲ್ಲೂ ನಗುಮೊಗದಲ್ಲಿ ಚೆಲುವನ್ನು ಪ್ರದರ್ಶಿಸಿದ್ದಾರೆ. ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಇದನ್ನೂ ಓದಿ: 'ಎನ್ಟಿಆರ್ನೀಲ್' ಸಿನಿಮಾದ ಬಂಡವಾಳ ಇಷ್ಟೊಂದಾ! ಮೊದಲ ದೃಶ್ಯಕ್ಕೇ 3,000 ಕಲಾವಿದರು
ನಟ ಅಕ್ಷಯ್ ಕುಮಾರ್ ಪವಿತ್ರ ಸ್ನಾನ, ವ್ಯವಸ್ಥೆಗೆ ಮೆಚ್ಚುಗೆ: ಇಂದು ಬಾಲಿವುಡ್ ಖಿಲಾಡಿ ಖ್ಯಾತಿಯ ನಟ ಅಕ್ಷಯ್ ಕುಮಾರ್ ಕೂಡಾ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. "ಮಹಾ ಕುಂಭಮೇಳದಲ್ಲಿ ಭಾಗವಹಿಸುವವರಿಗಾಗಿ ಅತ್ಯುತ್ತಮ ವ್ಯವಸ್ಥೆ ಮಾಡಲಾಗಿದೆ. ಸೌಲಭ್ಯಗಳು ಉತ್ತಮವಾಗಿವೆ. ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗಿದೆ. ಹಾಗಾಗಿ, ನಾನು ಸಿಎಂ ಯೋಗಿ ಅವರಿಗೆ ಧನ್ಯವಾದ ತಿಳಸುತ್ತೇನೆ" ಎಂದು ತಿಳಿಸಿದರು. ಜೊತೆಗೆ, ಭಕ್ತರ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ಎಲ್ಲಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗೂ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ವಿಡಿಯೋ: ಮಹಾ ಕುಂಭಮೇಳದಲ್ಲಿ ಕತ್ರಿನಾ ಕೈಫ್, ಅಕ್ಷಯ್ ಕುಮಾರ್; ಸಿಎಂ ಯೋಗಿಗೆ ಧನ್ಯವಾದ
ನಟಿ ಕತ್ರಿನಾ ಕೈಫ್ ಪವಿತ್ರ ಸ್ನಾನ: ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರೂ ಕೂಡಾ ಇಂದು ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ್ ಸರಸ್ವತಿ ಅವರನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆದಿದ್ದಾರೆ. ಮಹಾ ಕುಂಭಮೇಳದ ಭಾಗವಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ, "ಇಲ್ಲಿಗೆ ಬಂದಿದ್ದು ನನ್ನ ಅದೃಷ್ಟ. ಕೃತಜ್ಞಳಾಗಿದ್ದೇನೆ" ಎಂದು ತಿಳಿಸಿದರು.
ಸೆಲೆಬ್ರಿಟಿಗಳ ಮಹಾ ಕುಂಭಮೇಳ ಪ್ರಯಾಣದ ಫೋಟೋ ವಿಡಿಯೋಗಳು ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿದೆ.