ಮಂಗಳೂರು(ದಕ್ಷಿಣ ಕನ್ನಡ): ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶಿಸಲು ವಿಶೇಷ ತರಬೇತಿ ಬೇಕು. ತರಬೇತಿ ಇಲ್ಲದೆಯೇ ಯಕ್ಷಗಾನ ಪ್ರದರ್ಶಿಸುವುದು ಅಸಾಧ್ಯ. ಅಂಥದ್ದರಲ್ಲಿ ಮಂಗಳೂರಿನ ವಿಶೇಷಚೇತನರು ಯಕ್ಷಗಾನ ಪ್ರದರ್ಶನಕ್ಕೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.
ಶಕ್ತಿನಗರದಲ್ಲಿರುವ ಸಾನಿಧ್ಯ ವಿಶೇಷ ಮಕ್ಕಳ ಶಾಲೆ ಮತ್ತು ತರಬೇತಿ ಸಂಸ್ಥೆಯಲ್ಲಿರುವ ವಿಶೇಷಚೇತನರು ವಿಶೇಷ ಪ್ರತಿಭೆ ಹೊಂದಿದ್ದಾರೆ. ಇಲ್ಲಿರುವ ಮಕ್ಕಳು ಬುದ್ಧಿಮಾಂದ್ಯತೆಗೆ ಒಳಗಾಗಿದ್ದರೂ ಇಲ್ಲಿ ಸಿಗುವ ತರಬೇತಿಯಿಂದ ಚುರುಕಾಗಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ್ದು, ಯಕ್ಷಗಾನ ಪ್ರದರ್ಶನದಲ್ಲಿಯೂ ತಾವು ಕಮ್ಮಿ ಇಲ್ಲ ಎಂದು ನಿರೂಪಿಸಿದ್ದಾರೆ.
ಶಾಲೆಯ ಸುಮಾರು 15 ಮಂದಿ ವಿಶೇಷಚೇತನರು ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಕಳೆದ 12 ವರ್ಷಗಳಿಂದ ಯಕ್ಷಗಾನ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಈಗಾಗಲೇ 11 ಪ್ರದರ್ಶನ ನೀಡಿದ್ದಾರೆ. ಗುರು ದಕ್ಷಿಣೆ, ದೇವಿ ಮಹಾತ್ಮೆ, ಭಕ್ತ ಪ್ರಹ್ಲಾದ, ಜಾಂಬವತಿ ಕಲ್ಯಾಣ, ಭಸ್ಮಾಸುರ ಮೋಹಿನಿ, ಲಂಕಾ ದಹನ, ಶ್ರೀಕೃಷ್ಣ ಜನ್ಮ ಕಂಸ ವಧೆ, ಶ್ವೇತ ಕುಮಾರ ಚರಿತ್ರೆ, ಜಟಾಯು ಮೋಕ್ಷ, ಮಹಿಷಿ ಮೋಕ್ಷ, ನಾಗಸ್ತ್ರ ಕುಂಭಕರ್ಣ ಕಾಳಗ ಪ್ರಸಂಗಗಳನ್ನು ಈಗಾಗಲೇ ವೇದಿಕೆಯಲ್ಲಿ ಪ್ರದರ್ಶಿಸಿದ್ದಾರೆ. ಪ್ರತಿವರ್ಷ ಸಾನಿಧ್ಯ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ವಿಶೇಷಚೇತನರು ನಡೆಸುವ ಯಕ್ಷಗಾನ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರುತ್ತದೆ.
ಈ ಯಕ್ಷಗಾನದಲ್ಲಿ ಮಾತುಗಾರಿಕೆ, ಭಾಗವತಿಕೆಯನ್ನು ನುರಿತ ಕಲಾವಿದರಿಂದ ಮೊದಲೇ ರೆಕಾರ್ಡಿಂಗ್ ಮಾಡಲಾಗಿರುತ್ತದೆ. ರೆಕಾರ್ಡಿಂಗ್ ಮಾತುಗಾರಿಕೆ, ಭಾಗವತಿಕೆಗೆ ತಕ್ಕಂತೆ ವಿಶೇಷಚೇತನರು ಕುಣಿದು ತೋರಿಸುತ್ತಾರೆ. ಸನ್ನಿವೇಶಕ್ಕೆ ತಕ್ಕಂತೆ ಮುಖದ ಭಾವ ಬದಲಿಸುತ್ತಾರೆ.

ಡಾ.ದಿವಾಕರ ಆಚಾರ್ಯ ಪೊಳಲಿ ಅವರು ಪ್ರಸಂಗಕರ್ತರಾಗಿದ್ದು, ವಿಶೇಷಚೇತನರಿಗೆ ಯಕ್ಷಗಾನ ಪ್ರದರ್ಶನದ ನಿರ್ದೇಶನವನ್ನು ಶರತ್ ಕುಮಾರ್ ಕದ್ರಿ ಮಾಡಿದರೆ, ಸಹ ನಿರ್ದೇಶನವನ್ನು ಸುಚೇತ್ ಕುಮಾರ್, ದೀಕ್ಷಿತ್ ಮೊಗ್ರೊಡಿ ನೀಡಿ ತರಬೇತಿ ನೀಡಿದ್ದಾರೆ. ಇವರಿಗೆ ಶಾಲಾ ಶಿಕ್ಷಕಿ ಅಕ್ಷತಾ ನಿತ್ಯ ತರಬೇತಿ ನೀಡಿದ್ದಾರೆ.
ಈಗಾಗಲೇ ಹನ್ನೊಂದು ಪ್ರಸಂಗದಲ್ಲಿ ಯಕ್ಷಗಾನ ಪ್ರಸಂಗ ಮಾಡಿರುವ ವಿಶೇಷಚೇತನರು ವಿಧಾನಸೌಧದೊಳಗೆ, ಸುತ್ತೂರು ಮಠದಲ್ಲಿಯೂ ಯಕ್ಷಗಾನ ಪ್ರದರ್ಶಿಸಿದ್ದಾರೆ. ಕೇವಲ 3 ತಿಂಗಳಲ್ಲಿ ಕಲಿತು ಯಕ್ಷಗಾನ ಪ್ರದರ್ಶಿಸಿರುವುದು ವಿಶೇಷ.

ಸಾನಿಧ್ಯ ಸಂಸ್ಥೆಯ ಸಂಸ್ಥಾಪಕರಾದ ವಸಂತ ಕುಮಾರ್ ಶೆಟ್ಟಿ ಮಾತನಾಡಿ, "ಬಹಳಷ್ಟು ವರ್ಷಗಳಿಂದ ವಿಶೇಷಚೇತನರಿಂದ ಯಕ್ಷಗಾನ ಪ್ರದರ್ಶನ ಮಾಡಿಸಬೇಕೆಂಬ ಕನಸಿತ್ತು. ಶರತ್ ಕುಮಾರ್ ಪ್ರಯತ್ನದಿಂದ ಪ್ರದರ್ಶನ ಮಾಡಲು ಸಾಧ್ಯವಾಯಿತು. 2020 ಹೊರತುಪಡಿಸಿ 11 ಬಾರಿ ಪ್ರತಿವರ್ಷ ವಿಶೇಷಚೇತನರು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ತಾವೂ ಏನು ಬೇಕಾದರೂ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ" ಎಂದು ಹೇಳಿದರು.
ಈ ಕುರಿತು ಯಕ್ಷಗಾನ ತರಬೇತಿ ನೀಡಿದ ಶಿಕ್ಷಕಿ ಅಕ್ಷತಾ ಮಾತನಾಡಿ, "ವಿಶೇಷಚೇತನರಿಗೆ ಯಕ್ಷಗಾನ ಕಲಿಸುವುದು ಅಷ್ಟು ಸುಲಭವಲ್ಲ. ಯಕ್ಷಗಾನಕ್ಕೆ ಅದರದೇ ಶೈಲಿ, ಹಾವಭಾವ ಇದೆ. ಇದನ್ನು ವಿಶೇಷ ಚೇತನರು ಮಾಡಲು ಶಕ್ತರಾಗಿದ್ದಾರೆ. ಅವರಿಗೆ ಕೊಟ್ಟ ತರಬೇತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಯಕ್ಷಗಾನ ಪ್ರದರ್ಶನ ನೀಡುತ್ತಾರೆ" ಎಂದರು.
ಇದನ್ನೂ ಓದಿ: ಶಾಲಾ ರಂಗೋತ್ಸವದಲ್ಲಿ ಭೂತಾರಾಧನೆಗೆ ಅವಕಾಶ: ಕರಾವಳಿಯಲ್ಲಿ ಆಕ್ರೋಶ - SCHOOL RANGOTSAVA CONTROVERSY