ಕಣ್ಣೂರು (ಕೇರಳ): ಕಾಡಾನೆ ದಾಳಿಗೆ ಆದಿವಾಸಿ ಸಮುದಾಯದ ದಂಪತಿ ಬಲಿಯಾದ ಘಟನೆ ಕಣ್ಣೂರು ಜಿಲ್ಲೆಯ ಆರಳಂ ಫಾರ್ಮ್ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. 13ನೇ ಬ್ಲಾಕ್ ನಿವಾಸಿಗಳಾದ ವೆಲ್ಲಿ ಮತ್ತು ಲೀಲಾ ಮೃತ ದಂಪತಿ.
ಆರಳಂ ಆದಿವಾಸಿ ಪುನರ್ವಸತಿ ಪ್ರದೇಶದಲ್ಲಿ ಗೋಡಂಬಿ ಸಂಗ್ರಹಿಸಲು ತೆರಳಿದ್ದ ವೇಳೆ ಕಾಡಾನೆ ದಾಳಿ ಮಾಡಿ ದಂಪತಿಯನ್ನು ತುಳಿದು ಕೊಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಂಪತಿ ಶವಗಳನ್ನು ಪರಿಯಾರಂನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.
ದಾಳಿ ನಡೆದ 13 ನೇ ಬ್ಲಾಕ್ ವಿಶೇಷವಾಗಿ ಓಡಚಲ್ ಪ್ರದೇಶದಲ್ಲಿ ಆಗಾಗ ಕಾಡಾನೆಗಳು ದಾಳಿ ಮಾಡುತ್ತಲೇ ಇರುತ್ತವೆ. ಕಳೆದ ಆರು ವರ್ಷಗಳಲ್ಲಿ ಆರಳಂ ಫಾರ್ಮ್ ಪ್ರದೇಶದಲ್ಲಿ ಸುಮಾರು 11 ಜನರು ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಸಾರ್ವಜನಿಕರಿಂದ ಆಕ್ರೋಶ: ಕಾಡಾನೆ ದಾಳಿಯನ್ನು ಖಂಡಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ದಂಪತಿಯ ಶವ ರವಾನಿಸಲು ಅರಣ್ಯ ಇಲಾಖೆಯ ಸಿಬ್ಬಂದಿಗೆ ಅವಕಾಶ ನೀಡದೇ ಕೆಲಕಾಲ ಪ್ರತಿಭಟನೆ ನಡೆಸಿ, ಸೂಕ್ತ ಕ್ರಮಕ್ಕೆ ಜನರು ಆಗ್ರಹಿಸಿದರು.
"ಆನೆ ದಾಳಿ ಭಯದಿಂದ ರಾತ್ರಿಯಿಡೀ ನಾವು ನಿದ್ದೆ ಮಾಡಿಲ್ಲ. ಆದಿವಾಸಿ ಜನಾಂಗದವರಿಗೆ ಯಾವುದೇ ರಕ್ಷಣೆ ಇಲ್ಲ. ನಾವು ಹೇಗೆ ಬದುಕಬೇಕು? ಆನೆಗಳಿಗೆ ನಮ್ಮನ್ನು ಗೋಡೆಯಂತೆ ಬಳಸಲಾಗುತ್ತಿದೆಯೇ?" ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು. ಸರ್ಕಾರ ಸೂಕ್ತ ಭರವಸೆ ನೀಡುವವರೆಗೆ ಶವ ತೆಗೆದುಕೊಂಡು ಹೋಗಲು ಬಿಡಲ್ಲ ಎಂದು ಸಮುದಾಯದವರು ಪಟ್ಟು ಹಿಡಿದಿದ್ದರು.
ಬಿಜೆಪಿಯಿಂದ ಬಂದ್ಗೆ ಕರೆ : ಆನೆ ದಾಳಿ ಖಂಡಿಸಿ ಬಿಜೆಪಿ ಇಂದು ಆರಳಂ ಪಂಚಾಯತ್ ವ್ಯಾಪ್ತಿಯಲ್ಲಿ ಬಂದ್ಗೆ ಕರೆ ನೀಡಿ, ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಒತ್ತಾಯಿಸಿದೆ.
ಅರಣ್ಯ ಸಚಿವ ಎ ಕೆ ಸಸೀಂದ್ರನ್ ಸಂತಾಪ: ದಂಪತಿ ಸಾವು ದುಃಖಕರ ಎಂದು ಕೇರಳ ಅರಣ್ಯ ಇಲಾಖೆ ಸಚಿವ ಎ ಕೆ ಸಸೀಂದ್ರನ್ ಸಂತಾಪ ಸೂಚಿಸಿದ್ದಾರೆ. ಆರಳಂ ಫಾರ್ಮ್‌ನಲ್ಲಿ ಆನೆ ತಡೆಗೋಡೆಯ ನಿರ್ಮಾಣದಲ್ಲಿ ವಿಳಂಬವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಪ್ರಕರಣ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾಡುಪ್ರಾಣಿಗಳ ದಾಳಿಯ ಸಮಸ್ಯೆಗೆ ಶಾಶ್ವತ ಪರಿಹಾರದ ಬಗ್ಗೆ ಚರ್ಚಿಸಲು ಇಂದು ಕಣ್ಣೂರಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು. ಸ್ಥಳೀಯ ನಿವಾಸಿಗಳ ಸುರಕ್ಷತಾ ಕಾಳಜಿಯನ್ನು ಪರಿಹರಿಸಲು ವಯನಾಡಿನಲ್ಲಿ ನಡೆಸಿದಂತೆಯೇ ಕ್ರಿಯಾ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಯೋಜಿಸುತ್ತಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಹಾಸನ: ಜಾನುವಾರು ಹುಡುಕಲು ಹೋದ ಮಹಿಳೆ ಕಾಡಾನೆ ದಾಳಿಗೆ ಬಲಿ
ಇದನ್ನೂ ಓದಿ: ಬಂಡೀಪುರದಲ್ಲಿ ಕಾಡಾನೆ ಜೊತೆ ಫೋಟೋ ಕ್ಲಿಕ್ಕಿಸಿದ್ದ ವ್ಯಕ್ತಿಗೆ 25 ಸಾವಿರ ರೂ. ದಂಡ