ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹಾಗೂ ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಖಂಡಿಸಿ ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿಗೆ ಇಂದು ಮಧ್ಯಾಹ್ನ 3.30ಕ್ಕೆ ಪ್ರತಿಭಟನೆ ನಡೆಸಲು ಷರತ್ತುಬದ್ದ ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ರಾಷ್ಟ್ರೀಯ ಸುರಕ್ಷಾ ಜನಾಂದೋಲನ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ನ್ಯಾಯಪೀಠ, ಮಧ್ಯಾಹ್ನ 3.30ರಿಂದ ಒಂದೂವರೆ ತಾಸು ಮಾತ್ರ ಮೈಸೂರಿನ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿತು.
ವಾದ-ಪ್ರತಿವಾದ ಆಲಿಸಿದ ಪೀಠ, ಮೈಸೂರಿನ ಫುಟ್ ಬಾಲ್ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ನೀಡಲು ಮೈಸೂರು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಅರ್ಜಿದಾರರು 1 ಲಕ್ಷ ರೂಪಾಯಿ ಬಾಂಡ್ ನೀಡಬೇಕು, ಪ್ರತಿಭಟನೆ ಶಾಂತಿಯುತವಾಗಿರಬೇಕು, ಇಡೀ ಪ್ರತಿಭಟನೆ ಸಂಪೂರ್ಣ ಚಿತ್ರೀಕರಣ ಮಾಡಬೇಕು, ಶಾಂತಿ ಭಂಗವಾಗುವಂತಹ ಪ್ರಚೋದನಕಾರಿ ಹೇಳಿಕೆ ನೀಡಬಾರದು, ಅಹಿತಕರ ಘಟನೆಯಾದರೆ ಅರ್ಜಿದಾರರೇ ಹೊಣೆಯಾಗಬೇಕು ಎಂದು ಸೂಚನೆ ನೀಡಿ ಆದೇಶಿಸಿದೆ.
ಇದಕ್ಕೂ ಮುನ್ನ, ಅರ್ಜಿದಾರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ ಶ್ಯಾಮ್, ಉದಯಗಿರಿ ಠಾಣೆಯ ಮೇಲೆ ಜಿಹಾದಿ ಮನಸ್ಥಿತಿಯವರು ಹಲ್ಲೆ ನಡೆಸಿದ್ದಾರೆ. ಪೊಲೀಸರಿಗೆ ಬೆಂಬಲ ಸೂಚಿಸುವ ದೃಷ್ಟಿಯಿಂದ ಮೈಸೂರಿನ ಗನ್ ಹೌಸ್‌ನಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ಶಾಂತಿಯುತವಾಗಿ ಮೈಸೂರು ಚಲೋ ನಡೆಸಲು ಅನುಮತಿಸುವ ಮೂಲಕ ಅರ್ಜಿದಾರರ ಮೂಲಭೂತ ಹಕ್ಕು ರಕ್ಷಿಸಬೇಕು ಎಂದು ಪೀಠಕ್ಕೆ ಕೋರಿದರು.
ಇದಕ್ಕೆ ಸರ್ಕಾರಿ ಪರ ವಕೀಲರು, ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ. ಒಂದು ವಾರ ಅಥವಾ 10 ದಿನಗಳ ಬಳಿಕ ಅರ್ಜಿದಾರರು ಸಭೆ ನಡೆಸಬಹುದಾಗಿದೆ. ಈಗಾಗಲೇ ಸಭೆ ನಡೆಸಲು ಅನುಮತಿ ಕೋರಿ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಹಾಗೂ ಅಹಿತರಕರ ಘಟನೆ ನಡೆದರೆ ಅರ್ಜಿದಾರರನ್ನು ಹೊಣೆ ಮಾಡಲಾಗದು. ಹೀಗಾಗಿ, ಅನುಮತಿ ನೀಡಬಾರದು ಎಂದು ತಿಳಿಸಿದರು.
ವಾದ ಆಲಿಸಿದ ಪೀಠ, ಅರ್ಜಿದಾರರ ನಿರಂತರ ಕೋರಿಕೆಯ ಮೇರೆಗೆ ಸೀಮಿತ ಅವಧಿಗೆ ಸಭೆ ನಡೆಸಲು ಷರತ್ತುಗಳನ್ನು ವಿಧಿಸಿ, ಅನುಮತಿಸಿತು.