ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು ಕ್ಷುಲ್ಲಕ ಕಾರಣಗಳಿಗಾಗಿ ಹಲ್ಲೆಗೈದ 63 ಪ್ರಕರಣಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಠೋಡ್ ಅವರಿಗೆ ವಾಯುವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ ಅವರು ಇಂದು ಮನವಿ ಸಲ್ಲಿಸಿದರು.
ಸಂಸ್ಥೆಯ ಚಾಲಕ, ನಿರ್ವಾಹಕರು ದೈನಂದಿನ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರಿಂದ ದೌರ್ಜನ್ಯಕ್ಕೆ ಒಳಗಾಗಿದ್ದು, 63 ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಚಾಲಕರಿಗೆ ದಾರಿ ಬಿಡದಿರುವುದು, ಜೋರಾಗಿ ಹಾರ್ನ್ ಬಳಕೆ ಮಾಡಿರುವುದು, ನಿರ್ವಾಹಕರಿಗೆ ಚಿಲ್ಲರೆ ಕೊಡುವಾಗ ಸಂಬಂಧಿಸಿದ ಅಸಮಾಧಾನ, ನಿಗದಿತ ಸ್ಥಳದಲ್ಲಿ ಇಳಿಸದಿರುವುದು, ಲಗೇಜು ದರ ವಿಚಾರ ಸೇರಿದಂತೆ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ಉಂಟಾಗಿ ಜಗಳಗಳಾಗಿದ್ದು, ಹಲ್ಲೆಗೂ ತಲುಪಿವೆ. ಕೆಲವೊಮ್ಮೆ ಗಂಭೀರ ಘರ್ಷಣೆಯಾಗಿ ಪೊಲೀಸ್ ಠಾಣೆಯವರೆಗೂ ತಲುಪುತ್ತಿದೆ. ಪೊಲೀಸ್ ಇಲಾಖೆಯ ವತಿಯಿಂದ ಸಾಕ್ಷ್ಯ ಸಂಗ್ರಹದ ಕೊರತೆಯೋ ಅಥವಾ ಇತರ ಕಾರಣಗಳಿಂದ ಈ ಪ್ರಕರಣಗಳು 'ಬಿ' ರಿಪೋರ್ಟ್ ಆಗುತ್ತಿವೆ. ಈ ರೀತಿ ವಿವಿಧ ವಿಭಾಗ/ಘಟಕಗಳಲ್ಲಿ ಕಾರ್ಯನಿರತ ಚಾಲನಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆದು ಎಫ್ಐಆರ್ ಆಗಿರುವ ಮತ್ತು ಕೆಲವು ಪ್ರಕರಣಗಳಲ್ಲಿ ರಾಜಿ ಸಂಧಾನ ನಡೆದ ಹಾಗೂ ಕೆಲವು ನ್ಯಾಯಾಲಯದಲ್ಲಿ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ.
ಇತ್ತೀಚಿಗೆ ಚಿಕ್ಕ ಬಾಳೆಕುಂದ್ರಿ ಗ್ರಾಮದಲ್ಲಿ ಸಂಸ್ಥೆಯ ಸಿಬ್ಬಂದಿ, ನಿರ್ವಾಹಕರ ಮೇಲೆ ಹಲ್ಲೆ ಮಾಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಸಿಬ್ಬಂದಿಯ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಈ ವಿಷಯವನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬೆಳಗಾವಿ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಜೊತೆಗೆ ಮಹಾರಾಷ್ಟ್ರದಲ್ಲಿ ಸಂಸ್ಥೆಯ ವಾಹನಗಳನ್ನು ಅಡ್ಡಗಟ್ಟಿ ಅವುಗಳಿಗೆ ಕಪ್ಪು ಬಣ್ಣ ಬಳಿಯುವುದರ ಮೂಲಕ ವಿರೂಪಗೊಳಿಸಲಾಗಿದೆ.
ಈ ಕುರಿತು ಪೊಲೀಸ್ ಇಲಾಖೆಯ ವತಿಯಿಂದ ವಿಶೇಷ ಕ್ರಮ ಕೈಗೊಂಡು, ತಮ್ಮ ಅಧೀನದ ಠಾಣೆಗಳಿಗೆ ವಿಶೇಷ ನಿರ್ದೇಶನಗಳನ್ನು ನೀಡಬೇಕು. ಬಸ್ ನಿಲ್ದಾಣಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಪಹರೆಯನ್ನು ಹೆಚ್ಚಿಸಲು, ಸಂಸ್ಥೆಯ ಸಿಬ್ಬಂದಿಗಳ ಭದ್ರತೆಗಾಗಿ ತ್ವರಿತ ಸ್ಪಂದನಾ ತಂಡವನ್ನು ನಿಯೋಜಿಸಲು, ದೌರ್ಜನ್ಯಕ್ಕೊಳಗಾದ ಚಾಲಕ/ನಿರ್ವಾಹಕರ ದೂರುಗಳ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು, ಸಾರ್ವಜನಿಕರಲ್ಲಿ ಸಂಚಾರ ಸೌಜನ್ಯ ಮತ್ತು ಸಾರಿಗೆ ಸಿಬ್ಬಂದಿಯ ಗೌರವ ಕುರಿತು ಜಾಗೃತಿಯ ಅಭಿಯಾನ ಹಮ್ಮಿಕೊಳ್ಳಲು ಮತ್ತು ಸಂಸ್ಥೆಯ ಸಿಬ್ಬಂದಿಯ ಭದ್ರತೆಯ ವಿಷಯದಲ್ಲಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.