ಹುಬ್ಬಳ್ಳಿ: ಸಭೆ, ಸಮಾರಂಭ, ಗೃಹ ಪ್ರವೇಶ, ಹುಟ್ಟುಹಬ್ಬ ಸೇರಿದಂತೆ ನಾನಾ ಕಾರ್ಯಕ್ರಮಗಳಲ್ಲಿ ಊಟ ಮಾಡಿದ ಮೇಲೆ ಆಹಾರ ಉಳಿಯುತ್ತದೆ. ಹಾಗೆ ಉಳಿದ ಆಹಾರ ತಿನ್ನುವ ಹೊಟ್ಟೆ ಸೇರದೆ, ಕಸದ ತೊಟ್ಟಿ ಸೇರುತ್ತೆ. ಹೀಗೆ ಅನಗತ್ಯವಾಗಿ ಕಸದ ತೊಟ್ಟಿ ಪಾಲಾಗುವ ಆಹಾರವನ್ನು ತೆಗೆದುಕೊಂಡು ಹಸಿದವರ ಹೊಟ್ಟೆ ತುಂಬಿಸುವ ಮಹತ್ವದ ಕಾರ್ಯವನ್ನು ಹುಬ್ಬಳ್ಳಿಯ ದಂಪತಿ ಮಾಡುತ್ತಿದ್ದಾರೆ.
"ಹಸಿದವರಿಗೆ ಅನ್ನ ಜೋಳಿಗೆ" ಎಂಬ ಹೆಸರಿನಲ್ಲಿ ಊಟ ಮಾಡಿ ಉಳಿದ ಆಹಾರವನ್ನು ಸಂಗ್ರಹಿಸಿ ಹಸಿದವರ ಹೊಟ್ಟೆ ತುಂಬಿಸುತ್ತಿರುವ ಇವರ ಹೆಸರು ಕರಿಯಪ್ಪ ಮತ್ತು ಸುನಂದಾ ಶಿರಹಟ್ಟಿ. ತಮ್ಮ ತಂದೆ ನೀಲಪ್ಪ ಶಿರಹಟ್ಟಿ ಸೇವಾ ಟ್ರಸ್ಟ್ ಎಂಬ ಹೆಸರಲ್ಲಿ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದಿರುವ ಕರಿಯಪ್ಪ, ಇದಕ್ಕಾಗಿಯೇ ಪ್ರತ್ಯೇಕ ವಾಹನ ಮಾಡಿದ್ದಾರೆ. ಅದೇ ವಾಹನದ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಕಳೆದ 19 ವರ್ಷಗಳಿಂದ ಹಸಿದವರ ಹೊಟ್ಟೆ ತುಂಬಿಸುವ ಸೇವೆ ಮಾಡುತ್ತಿರುವ ದಂಪತಿ, ಇದುವರೆಗೆ ಯಾರ ನೆರವಿಲ್ಲದೆ ತಾವೇ ಆಹಾರ ತಲುಪಿಸುತ್ತಾ ಬಂದಿದ್ದಾರೆ. ಆದರೆ, ಇದೀಗ ಆಹಾರದ ಮಹತ್ವ ಅರಿತಿರುವ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ಮಹತ್ಕಾರ್ಯಕ್ಕೆ ಅಗತ್ಯವಾದ ವಾಹನವಿಲ್ಲದೆ ದಂಪತಿ ಪರದಾಡುವಂತಾಗಿದ್ದು, ದಾನಿಗಳ ನೆರವಿಗೆ ಕೈ ಚಾಚಿದ್ದಾರೆ.
ವಿವಿಧ ಸಭೆ-ಸಮಾರಂಭಗಳಲ್ಲಿ ಉಳಿಯುವ ಆಹಾರವನ್ನು ಸಂಗ್ರಹಿಸಿ ಅಗತ್ಯವುಳ್ಳವರಿಗೆ ತಲುಪಿಸುವುದು, ತಮ್ಮ ಖರ್ಚಿನಲ್ಲಿಯೇ ಒಂದಿಷ್ಟು ಆಹಾರ ಸಿದ್ಧಪಡಿಸಿ ಸ್ವತಃ ತಾವೇ ಹಸಿದವರು ನೆಲೆಸಿರುವ ಸ್ಥಳಕ್ಕೆ ತೆರಳಿ ಅವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ಚಾಲಕನಾಗಿರುವ ಕರಿಯಪ್ಪ ಅವರಿಗೆ ಇವರ ಪತ್ನಿ ಸುನಂದಾ ಶಿರಹಟ್ಟಿ ಸಾಥ್ ನೀಡಿದ್ದಾರೆ. ಈ ದಂಪತಿ ಹಸಿದವರ ಹೊಟ್ಟೆ ತುಂಬಿಸುವ ಕಾಯಕದಲ್ಲೇ ಮನಃಶಾಂತಿ ಕಂಡುಕೊಂಡಿದ್ದಾರೆ.

ಇವರ ನಿಸ್ವಾರ್ಥ ಕಾರ್ಯವನ್ನು ಮಹಾನಗರದ ಜನತೆ ಗುರುತಿಸಿದ್ದು, ವಿವಿಧ ಸಮಾರಂಭಗಳಲ್ಲಿ ತಯಾರಿಸಿದ ಆಹಾರ ವ್ಯರ್ಥ ಮಾಡದೇ ಅಗತ್ಯವುಳ್ಳವರಿಗೆ ತಲುಪಿಸುವ ಕೆಲಸ ಆಗುತ್ತಿದೆ. ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾಜಿ ಸೈನಿಕರೊಬ್ಬರು ತಮ್ಮ ಹಳೆಯ ಓಮಿನಿ ವ್ಯಾನ್ ಕೊಟ್ಟಿದ್ದರು. ಈ ವಾಹನ ಸಾಕಷ್ಟು ಅನುಕೂಲವಾಗಿತ್ತಾದರೂ ಇತ್ತೀಚೆಗೆ ಅದರ ಅವಧಿ ಪೂರ್ಣಗೊಂಡಿದ್ದರಿಂದ ವಾಹನವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬುದ್ಧಿಮಾಂದ್ಯರ ಹೇರ್ ಕಟಿಂಗ್, ಶೇವಿಂಗ್: ಸಹಕರಿಸುವ ನಿರ್ಗತಿಕರು, ಬುದ್ಧಿಮಾಂದ್ಯರಿಗೆ ತಾವೇ ಕಟಿಂಗ್, ಶೇವಿಂಗ್ ಮಾಡುತ್ತಾರೆ. ಇದಕ್ಕಾಗಿ ಅವರೊಂದಿಗೆ ಕಿಟ್ ಸದಾ ಸಿದ್ಧವಿರುತ್ತದೆ. ಇವರಿಗಾಗಿಯೇ ಒಂದಿಷ್ಟು ಟೀ ಶರ್ಟ್ಗಳನ್ನು ಖರೀದಿಸಿ ವಿತರಿಸುತ್ತಾರೆ.

ನಿತ್ಯ ಒಂದಿಲ್ಲೊಂದು ಕಡೆಯಿಂದ ಇವರಿಗೆ ಆಹಾರ ದೊರೆಯುತ್ತದೆ. ಇನ್ನೂ ಕೆಲ ದಾನಿಗಳು ವಿಶೇಷ ದಿನಗಳಲ್ಲಿ ಅಡುಗೆ ಸಿದ್ಧಪಡಿಸಿ ಅಥವಾ ಹೋಟೆಲ್‌ಗಳ ಮೂಲಕ ಆಹಾರ ಕೊಡಿಸುವವರಿದ್ದಾರೆ. ಇಂತಹ ಆಹಾರಕ್ಕಾಗಿ ಮಹಾನಗರದ ವ್ಯಾಪ್ತಿಯಲ್ಲಿ ಕಾಯುವ ಕುಟುಂಬಗಳಿವೆ. ಅಂತಹ ಕುಟುಂಬಗಳನ್ನು ಗುರುತಿಸಿರುವ ಕರಿಯಪ್ಪ ಆಯಾ ಪ್ರದೇಶಗಳಿಗೆ ತೆರಳಿ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಕರಿಯಪ್ಪ ಕೆಲಸದ ನಿಮಿತ್ತ ಹೊರ ಹೋದರೆ ಈ ಕಾರ್ಯವನ್ನು ಪತ್ನಿ ಸುನಂದಾ ಅವರು ನಿರ್ವಹಿಸುತ್ತಾರೆ.
ಈ ಕುರಿತಂತೆ ಕರಿಯಪ್ಪ ಶಿರಹಟ್ಟಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, "ಕಳೆದ 19 ವರ್ಷಗಳಿಂದ ಬಡವರು, ನಿರ್ಗತಿಕರು, ಅನಾಥರ ಪರವಾಗಿ ಅನ್ನಜೋಳಿಗೆ ಕಾರ್ಯ ನಡೆಸುತ್ತಿದ್ದೇವೆ. ಸಭೆ, ಸಮಾರಂಭಗಳಲ್ಲಿ ಊಟ ಮಾಡಿ ಉಳಿದ ಆಹಾರವನ್ನು ಸಂಗ್ರಹಿಸಿ ಹಸಿದವರಿಗೆ ಹಂಚುವ ಕಾರ್ಯ ಮಾಡುತ್ತಿದ್ದೇವೆ. ಸಾಕಷ್ಟು ಜನ ಆಹಾರವನ್ನು ನಮಗೆ ಕೊಡುತ್ತಾರೆ. ಅದೇ ಆಹಾರವನ್ನು ಹಸಿದವರಿಗೆ ಮುಟ್ಟಿಸುವ ಕಾಯಕ ಮಾಡುತ್ತಿದ್ದೇವೆ" ಎಂದರು.

"ಹಸಿವಿನಿಂದ ಯಾರೂ ಬಳಲಬಾರದು. ಸಾಯಬಾರದು ಎಂಬ ಸದ್ದುದೇಶದಿಂದ ಆರಂಭಿಸಿದ್ದೇವೆ. ತಮ್ಮ ಬಳಿ ಆಹಾರವಿದ್ದರೂ ಯಾರಿಗೆ ಕೊಡಬೇಕು ಅಂತ ತಿಳಿಯುವುದಿಲ್ಲ. ಇದಕ್ಕಾಗಿ ನಾವು ನಂಬರ್ ಕೊಟ್ಟಿದ್ದೇವೆ. ಹುಬ್ಬಳ್ಳಿ ನಗರದ ಸಾರ್ವಜನಿಕರು ಫೋನ್ ಕರೆ ಮಾಡಿದರೆ ನಾವು ಅಲ್ಲಿಗೆ ತೆರಳಿ ಆಹಾರ ಸಂಗ್ರಹಿಸಿ ಹಸಿದವರಿಗೆ ವಿತರಿಸುತ್ತೇವೆ" ಎಂದು ಹೇಳಿದರು.
"ಹಸಿದವರ ಬಳಿಗೆ ನಾವೇ ಹೋಗಿ ಆಹಾರ ವಿತರಿಸುತ್ತೇವೆ. ನಾವು ದುಡಿದ ದುಡ್ಡಿನಿಂದ ಈ ಕಾರ್ಯ ಮಾಡುತ್ತೇವೆ. ನಮ್ಮದು ಒಂದು ದಿನಸಿ ಅಂಗಡಿ ಇಟ್ಟುಕೊಂಡಿದ್ದೇವೆ. ನಾನು ದುಡಿದ ದುಡ್ಡು, ನಮ್ಮ ತಾಯಿಯ ವೃದ್ದಾಪ್ಯ ವೇತನ, ಪತ್ನಿ ವಿಶೇಷಚೇತನ ವೇತನದಿಂದ ಸಮಾಜಮುಖಿ ಕಾರ್ಯ ಮುಂದುವರೆಸಿದ್ದೇವೆ. ಸಾರ್ವಜನಿಕರಿಂದ ಹಣವನ್ನು ಪಡೆದು ಕೆಲಸ ಮಾಡುತ್ತಿಲ್ಲ. ನಮ್ಮ ಸ್ವಂತ ಖರ್ಚಿನಲ್ಲಿ ಇದೆಲ್ಲ ಮಾಡುತ್ತೇವೆ. ನಮಗೆ ಮಕ್ಕಳಿಲ್ಲ. ಹೀಗಾಗಿ ದೀನ, ದಲಿತ, ಅನಾಥರೆ ನನ್ನ ಮಕ್ಕಳು, ಅವರ ಜೀವನ ನಮ್ಮ ಬದುಕಾಗಿರಬೇಕು ಎಂಬುದು ನನ್ನ ಕನಸು" ಎಂದು ಮನದಾಳದ ಮಾತು ಹಂಚಿಕೊಂಡರು.

ಕರಿಯಪ್ಪರ ಪತ್ನಿ ಸುನಂದಾ ಪ್ರತಿಕ್ರಿಯಿಸಿ, ''ಹಸಿದವರು ಕೂಡ ಅನ್ನ, ಆಹಾರವಿಲ್ಲದೆ ಸಾಯಬಾರದು. ಅವರು ನಮ್ಮ ಕುಟುಂಬದವರು ಎಂಬ ದೃಷ್ಟಿಯಿಂದ ಈ ಸೇವಾ ಕಾರ್ಯ ಮಾಡುತ್ತಿದ್ದೇವೆ. ಸಾಕಷ್ಟು ಜನ ದಾನಿಗಳು ಮನೆಗೆ ಬಂದು ಹಂಚಲು ಊಟ ಕೊಟ್ಟು ಹೋಗುತ್ತಾರೆ. ಆದ್ರೆ ನಮಗೆ ವಾಹನವಿಲ್ಲ. ಹೀಗಾಗಿ ಸೆಕೆಂಡ್ ಹ್ಯಾಂಡ್ ವಾಹನವನ್ನು ದಾನಿಗಳು ಕೊಟ್ಟರೆ ಇನ್ನಷ್ಟು ಸೇವೆ ಮಾಡಲು ಅನುಕೂಲವಾಗಲಿದೆ. ಕೆಲವೊಮ್ಮ 300-400 ಆಟೋ ಬಾಡಿಗೆ ಕೊಟ್ಟು ಆಹಾರ ವಿತರಿಸಿ ಬಂದಿದ್ದೇವೆ. ರೈಲು ನಿಲ್ದಾಣ, ಬಸ್ ನಿಲ್ದಾಣಕ್ಕೆ ತೆರಳಲು ಆಟೋ ಕೂಡ ಸಿಗುವುದಿಲ್ಲ. ಅನ್ನ ಚೆಲ್ಲಬಾರದು ಎಂಬ ಕಾರಣಕ್ಕೆ ನಡೆದುಕೊಂಡು ಹೋಗಿ ಹಂಚಿ ಬರುತ್ತೇನೆ. ವಾಹನ ಖರೀದಿಸುವ ಶಕ್ತಿಯಿಲ್ಲದ ಕಾರಣ ದಾನಿಗಳ ಮೊರೆ ಹೋಗಿದ್ದೇವೆ'' ಎಂದರು.

''ಈ ದಂಪತಿಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಬಡವರು, ನಿರ್ಗತಿಕರು, ಅನ್ನ ಇಲ್ಲದೆ ಉಪವಾಸವಿದ್ದವರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಇದರಿಂದ ಪ್ರೇರಣೆ ಪಡೆದು ನಾನು ಕೂಡ ಇವರ ಜೊತೆ ತೆರಳಿ ಬಡವರ ಸೇವೆ ಮಾಡಿದ್ದೇನೆ. ಇವರ ಸೇವಾ ಕಾರ್ಯ ನೋಡಿದ್ರೆ ನಮಗೂ ಖುಷಿಯಾಗುತ್ತದೆ'' ಎಂದು ಬೀಬಿ ಆಯುಷಾ ಹೇಳಿದರು.

ದಂಪತಿಯ ಸೇವಾ ಕಾರ್ಯಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಮಹಾನಗರ ಪಾಲಿಕೆ, ಉದ್ಯಮಿಗಳು, ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಅಥವಾ ಒಂದಿಷ್ಟು ದಾನಿಗಳು ಸೇರಿ ಒಂದು ವಾಹನಗಳ ಕೊಡಿಸಿದರೆ ಇವರ ಕೆಲಸಕ್ಕೆ ಹೆಗಲುಕೊಟ್ಟಂತಾಗುತ್ತದೆ. ಇವರ ಸಂಪರ್ಕ ಸಂಖ್ಯೆ 9380136683. ಆಸಕ್ತರು ಕರೆ ಮಾಡಿ ವಿಚಾರಿಸಬಹುದು.
ಇದನ್ನೂ ಓದಿ: ಹಾವೇರಿ: ಇನ್ನರ್ವ್ಹೀಲ್ ಕ್ಲಬ್ ಆಹಾರ ಮೇಳ; ಬಾಯಲ್ಲಿ ನೀರೂರಿಸಿದ ವಿವಿಧ ಖಾದ್ಯಗಳು - FOOD FESTIVAL