ಬೆಂಗಳೂರು: ರಾಜ್ಯ ಅರಣ್ಯ ಇಲಾಖೆಯ 150 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಸ್ವತ್ತನ್ನು ಕಾನೂನುಬಾಹಿರವಾಗಿ ಸ್ವಾಧೀನದಲ್ಲಿರಿಸಿಕೊಂಡಿರುವ ಆರೋಪದಡಿ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸೇರಿದಂತೆ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಲೋಕಾಯುಕ್ತದಲ್ಲಿ ದೂರು ನೀಡಲಾಗಿದೆ.
ಸ್ಯಾಮ್ ಪಿತ್ರೋಡಾ, ಕರ್ನಾಟಕ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯ ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಕೆ. ಸಿಂಗ್ ಮತ್ತು ಸಂಜಯ್ ಮೋಹನ್, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎನ್.ರವೀಂದ್ರ ಕುಮಾರ್ ಮತ್ತು ಎಸ್.ಎಸ್.ರವಿಶಂಕರ್ ವಿರುದ್ಧ ಬಿಜೆಪಿ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ.
ಆರೋಪಗಳು: ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ (ಸ್ಯಾಮ್ ಪಿತ್ರೋಡಾ) ಅವರು 23/10/1991ರಂದು ಮುಂಬೈನ ರಿಜಿಸ್ಟ್ರಾರ್ ಆಫ್ ಕೋ–ಆಪರೇಟಿವ್ ಸೊಸೈಟೀಸ್ ಕಚೇರಿಯಲ್ಲಿ "Foundation for Revitalisation of Local Health Traditions" (FRLHT) ಎಂಬ ಸಂಸ್ಥೆ ನೋಂದಣಿ ಮಾಡಿದ್ದಾರೆ. ನಂತರ ಸ್ಯಾಮ್ ಪಿತ್ರೋಡಾ ಅವರ ಲಿಖಿತ ರೂಪದ ಮನವಿಯಂತೆ 2010ರಲ್ಲಿ FRLHT ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸಲಾಗಿದೆ. 2008ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ "Foundation for Revitalisation of Local Health Traditions" (FRLHT) ಎಂಬ ಅದೇ ಹೆಸರಿನ Trust Deedನ್ನು ದಿನಾಂಕ 05/09/2008ರಂದು ನೋಂದಣಿ ಮಾಡಿಸಲಾಗಿದೆ.
ಗಿಡಮೂಲಿಕೆ ಔಷಧಿ ಸಸಿಗಳ ಸಂರಕ್ಷಣೆ ಮತ್ತು ಸಂಶೋಧನೆ ಕಾರ್ಯಕ್ಕೆಂದು ಸ್ಯಾಮ್ ಪಿತ್ರೋಡಾರವರು 1996ರಲ್ಲಿ FRLHT ಸಂಸ್ಥೆಗೆ ಮೀಸಲು ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ನೀಡುವಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಅದರಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಸ್ಯಾಮ್ ಪಿತ್ರೋಡಾರವರ ಅಧ್ಯಕ್ಷತೆಯ FRLHT, Mumbai ಸಂಸ್ಥೆಗೆ ಬೆಂಗಳೂರಿನ ಯಲಹಂಕ ಬಳಿಯ ಜಾರಕಬಂಡೆ ಕಾವಲ್‌ನ ‘ಬಿ’ ಬ್ಲಾಕ್‌ನಲ್ಲಿ 5 ಹೆಕ್ಟೇರ್ (12.35 ಎಕರೆ) ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶವನ್ನು 5 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿತ್ತು.
ಇದಕ್ಕೆ ಕೇಂದ್ರದ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ (Ministry of Forest, Ecology & Environment, Govt: of India) ಯೂ ಸಹ ಅನುಮೋದನೆ ನೀಡಿತ್ತು. FRLHT ಸಂಸ್ಥೆಗೆ ನೀಡಿದ್ದ 5 ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯದ ನಂತರ (2001ರಲ್ಲಿ) ಮುಂದಿನ 10 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಮುಂದುವರೆಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಆದೇಶಿಸಿತ್ತು. 2001ರ ಆದೇಶದಂತೆ ದಿನಾಂಕ 2/12/2011ಕ್ಕೆ ಸ್ಯಾಮ್ ಪಿತ್ರೋಡಾ ಅವರ FRLHT ಸಂಸ್ಥೆಗೆ ನೀಡಿದ್ದ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ.
ಇದಾದ ನಂತರ ಅರಣ್ಯ ಇಲಾಖೆಯು FRLHT ಸಂಸ್ಥೆಯ ಗುತ್ತಿಗೆ ಅವಧಿಯನ್ನು ವಿಸ್ತರಿಸಿಲ್ಲ. ಆದರೂ ಸಹ 150 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ 12.35 ಎಕರೆ ವಿಸ್ತೀರ್ಣದದ ಸರ್ಕಾರಿ ಸ್ವತ್ತನ್ನು ರಾಜ್ಯ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ ಎಂದು ಎನ್.ಆರ್.ರಮೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: 'ಸ್ಯಾಮ್ ಪಿತ್ರೋಡಾ ಒಬ್ಬ 420': ಕಾಂಗ್ರೆಸ್‌ನಿಂದ ದೇಶ ಒಡೆಯುವ, ಛಿದ್ರಗೊಳಿಸವ ಕೆಲಸ- ಆರ್.ಅಶೋಕ್ - Ashok Slams Congress