ಮೈಸೂರು: "ಲೋಕಾಯುಕ್ತ ವರದಿಯನ್ನು ತಮಗಿಷ್ಟ ಬಂದ ರೀತಿ ಬರೆಸಿಕೊಂಡಿದ್ದಾರೆ. ಅವರನ್ನು ದೇವರೇ ಕಾಪಾಡಬೇಕು" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಇಂದು ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿದರು.
"ಈ ವಿಚಾರದಲ್ಲಿ ತಪ್ಪು ಮಾಡದ ಅಮಾಯಕರು ಬಲಿಯಾಗುತ್ತಾರೆ. ಲೂಟಿ ಹೊಡೆದವರು ತಪ್ಪಿಸಿಕೊಳ್ಳುತ್ತಾರೆ. ಮುಡಾ ಹಗರಣ ಕಣ್ಣಿಗೆ ಕಟ್ಟಿದಂತಿದೆ. ಸಾಕಷ್ಟು ಪ್ರಕರಣಗಳನ್ನು ತೆಗೆದರೆ ಮುಖ್ಯಮಂತ್ರಿಗಳ ಬಂಡವಾಳ ಗೊತ್ತಾಗುತ್ತದೆ" ಎಂದರು.
"40 ವರ್ಷದ ಹಿಂದೆ ಸ್ವಂತ ದುಡ್ಡಿನಲ್ಲಿ ಖರೀದಿಸಿದ ಬಿಡದಿಯ ನನ್ನ ಜಮೀನನ್ನು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿದ ಎಸ್ಐಟಿಯಿಂದ ಅಳತೆ ಮಾಡಿಸುತ್ತಿದ್ದಾರೆ. ಆ ಜಮೀನಿನ ಮೂಲ ದಾಖಲೆಗಳೇ ಇಲ್ಲ ಎಂದವರು, ಈಗ ಅಳತೆ ಮಾಡಿಸುತ್ತಿದ್ದಾರೆ. ಇದರಿಂದ ನನ್ನನ್ನು ಹೆದರಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
"ಈ ಸರ್ಕಾರದಲ್ಲಿ ಯಾರಿಗೂ ರಕ್ಷಣೆ ಇಲ್ಲ. ಮರಾಠಿಯವರು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರದಿಂದ ಆಗುತ್ತಿಲ್ಲ" ಎಂದು ಟೀಕಿಸಿದರು.
"ಗ್ಯಾರಂಟಿ ಹೆಸರಿನಲ್ಲಿ ಎಲ್ಲಾ ಬೆಲೆಗಳು ಗಗನಕ್ಕೇರಿವೆ. ಈ ರೀತಿ ದರಗಳನ್ನೇರಿಸಿ ಗ್ಯಾರಂಟಿ ಕೊಡುವುದಾದರೆ ನಾನು ಪ್ರತಿಯೊಬ್ಬ ಮಹಿಳೆಗೂ 10 ಸಾವಿರ ರೂ ಕೊಡಬಲ್ಲೆ" ಎಂದು ಟೀಕಿಸಿದ ಕುಮಾರಸ್ವಾಮಿ, "ಉದಯಗಿರಿ ಗಲಾಟೆ ವಿಚಾರದಲ್ಲಿ ಎರಡೂ ಪಕ್ಷಗಳು ಯಾರನ್ನೂ ಓಲೈಕೆ ಮಾಡಬಾರದು. ರಾಜ್ಯ ಶಾಂತಿಯ ತೋಟವಾಗಬೇಕು. ಪೊಲೀಸ್ ಠಾಣೆ ಮೇಲೆ ಕಲ್ಲು ಬೀಸಿದವರನ್ನು ಗುರುತಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಂದೆ ಆ ರೀತಿಯಾಗದಂತೆ ಕ್ರಮ ವಹಿಸಬೇಕು" ಎಂದರು.
ಕೊಪ್ಪಳದಲ್ಲಿ ಸ್ಟೀಲ್ ಫ್ಯಾಕ್ಟರಿ ವಿರೋಧಿಸಿ ಕೊಪ್ಪಳ ಬಂದ್‌ಗೆ ಕರೆ ನೀಡಿದ್ದು, ಈ ಸರ್ಕಾರ ಗಮನಹರಿಸಬೇಕು ಎಂದರು.
ಜಾತಿ ಗಣತಿ ಇಟ್ಟುಕೊಂಡು ಸರ್ಕಾರ ಗುಮ್ಮ ಬಿಡುತ್ತೇನೆ ಎನ್ನುತ್ತಿದೆ. ವರದಿ ಇಟ್ಟುಕೊಂಡು ಪೂಜೆ ಮಾಡುವುದನ್ನು ಬಿಟ್ಟು ಬಿಡುಗಡೆ ಮಾಡಲಿ. ಆಗ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ನೋಡಲಿ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಮುಂದಿನ ಚುನಾವಣೆಯೆಂದು ಹೇಳುತ್ತಿದ್ದಾರೆ. ಇದರಿಂದ ಮುಖ್ಯಮಂತ್ರಿಯಾಗುತ್ತೇನೆ ಎಂದು ನಿದ್ದೆಗೆಟ್ಟು ಕುಳಿತಿರುವ ನಮ್ಮ ಸ್ನೇಹಿತರಿಗೆ ನಿದ್ದೆಗೆಟ್ಟಿದೆ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಮುಂದಿನ ಐದು ವರ್ಷವಲ್ಲ, 50 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರಲಿ, ಮುಂದಿನ ಚುನಾವಣೆ ಬರಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಗೊತ್ತಾಗುತ್ತದೆ ಎಂದು ಟಾಂಗ್ ಕೊಟ್ಟರು.