ಪೇಶಾವರ(ಪಾಕಿಸ್ತಾನ): ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಏಳು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಸೇನಾ ಮಾಧ್ಯಮ ವಿಭಾಗ ಭಾನುವಾರ ತಿಳಿಸಿದೆ.
"ಇಲ್ಲಿನ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಉಗ್ರರ ಇರುವಿಕೆ ವರದಿಯಾದ ಮೇಲೆ ಭದ್ರತಾ ಸಿಬ್ಬಂದಿ ಗುಪ್ತಚರ - ಆಧಾರಿತ ಕಾರ್ಯಾಚರಣೆಗಳನ್ನು ನಡೆಸಿದೆ. ಮೊದಲ ಕಾರ್ಯಾಚರಣೆಯು ದಾರಬನ್‌ನಲ್ಲಿ ನಡೆದಿದೆ. ಮೊದಲ ಕಾರ್ಯಾಚರಣೆಯಲ್ಲಿ ನಾಲ್ಕು ಖ್ವಾರಿಜ್‌ಗಳನ್ನು ಹೊಡೆದುರಳಿಸಲಾಯಿತು. ಮತ್ತೊಂದು ಕಾರ್ಯಾಚರಣೆಯು ಮಡ್ಡಿಯಲ್ಲಿ ನಡೆದಿದ್ದು, ಅಲ್ಲಿ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ತಟಸ್ಥಗೊಳಿಸಿದವು" ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ ತನ್ನ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಈ ಪ್ರದೇಶದಲ್ಲಿ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಐಎಸ್ಪಿಆರ್ ತಿಳಿಸಿದೆ.
ಹಾಗೇ ಶುಕ್ರವಾರ, ಕರಕ್ ಜಿಲ್ಲೆಯಲ್ಲಿ ಗುಪ್ತಚರ ಆಧಾರಿತ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಆರು ಭಯೋತ್ಪಾದಕರನ್ನು ಕೊಂದು ಹಾಕಿದ್ದರು.
2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ಮರಳಿ ಪಡೆದ ನಂತರ ಪಾಕಿಸ್ತಾನವು ಭಯೋತ್ಪಾದಕ ದಾಳಿಗಳ ಉಲ್ಬಣವನ್ನು ಎದುರಿಸುತ್ತಿದೆ. ವಿಶೇಷವಾಗಿ ಖೈಬರ್ ಪಂಖ್ತುಖ್ವಾ (ಕೆಪಿ) ಮತ್ತು ಬಲೂಚಿಸ್ತಾನ್ ಗಡಿ ಪ್ರಾಂತ್ಯಗಳಲ್ಲಿ ಕಾನೂನು ಜಾರಿ ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿಗಳನ್ನು ನಡೆಸುತ್ತಿದ್ದಾರೆ.
ಭಯೋತ್ಪಾದಕ ದಾಳಿಗಳಲ್ಲಿ ತೀವ್ರ ಹೆಚ್ಚಳ: ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್‌ಫ್ಲಿಕ್ಟ್ ಅಂಡ್ ಸೆಕ್ಯುರಿಟಿ ಸ್ಟಡೀಸ್ (ಪಿಐಸಿಎಸ್‌ಎಸ್) ಥಿಂಕ್ ಟ್ಯಾಂಕ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ 2025ರ ಜನವರಿಯಲ್ಲಿ ದೇಶವು ಭಯೋತ್ಪಾದಕ ದಾಳಿಗಳಲ್ಲಿ ತೀವ್ರ ಹೆಚ್ಚಳವನ್ನು ಕಂಡಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ 42 ಪ್ರತಿಶತದಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಖೈಬರ್ ಪಖ್ತುಂಖ್ವಾದಲ್ಲಿ ಪಾಕ್ ಸೈನಿಕರ ಕಾರ್ಯಾಚರಣೆ; 15 ಖ್ವಾರಿಜ್ ಉಗ್ರರು ಹತ