ಹೈದರಾಬಾದ್: ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಪತಿಯೇ ಪತ್ನಿಯನ್ನು ಕೊಂದು ಶವವನ್ನು ತುಂಡು ತುಂಡು ಮಾಡಿ ಕುಕ್ಕರ್‌ನಲ್ಲಿ ಬೇಯಿಸಿರುವ ಪ್ರಕರಣ ಸಂಚಲನವನ್ನುಂಟು ಮಾಡಿದೆ. ಇದೇ ತಿಂಗಳ 18ರಂದು ಪತಿ ಗುರುಮೂರ್ತಿ, ಆಕೆಯ ಪೋಷಕರೊಂದಿಗೆ ಪತ್ನಿ ವೆಂಕಟ ಮಾಧವಿ ಕಾಣೆಯಾಗಿದ್ದಾರೆ ಎಂದು ಮೀರ್‌ಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೀರ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ನಿತ್ಯ ನಡೆಯುತ್ತಿದ್ದ ಜಗಳ: ಈ ಪ್ರಕರಣದ ಬೆನ್ನಟ್ಟಿದ ಪೊಲೀಸರಿಗೆ ಬೆಚ್ಚಿ ಬೀಳುವ ಸತ್ಯಗೊತ್ತಾಗಿದೆ. ಪ್ರಾಥಮಿಕ ತನಿಖೆ ವೇಳೆ, ಕೆಲ ದಿನಗಳಿಂದ ಪತಿ - ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಮೀರ್‌ಪೇಟೆ ಪೊಲೀಸರಿಗೆ ತಿಳಿದು ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆ ವೇಳೆ ಅಸಲಿ ಸತ್ಯ ಹೊರ ಬಿದ್ದಿದೆ. ಪತ್ನಿ ವೆಂಕಟ ಮಾಧವಿಯನ್ನು ತಾನೇ ಕೊಂದಿರುವುದಾಗಿ ಪತಿ ಒಪ್ಪಿಕೊಂಡಿದ್ದಾನೆ. ಶವವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿದ್ದೆ ಎಂದು ಬಾಯ್ಬಿಟ್ಟಿದ್ದಾನೆ. ಹೀಗೆ ಕುಕ್ಕರ್‌ನಲ್ಲಿ ಬೇಯಿಸಿದ್ದ ದೇಹದ ಭಾಗಗಳನ್ನು ಬಳಿಕ ಚೀಲದಲ್ಲಿ ಸುತ್ತಿ ಜಿಲ್ಲೇಲಗೂಡ ಕೆರೆಯಲ್ಲಿ ಎಸೆದಿದ್ದೇನೆ ಎಂದು ಪೊಲೀಸರಿಗೆ ನಡೆದ ಸಂಗತಿಯನ್ನು ಆರೋಪಿ ಪತಿ ತಿಳಿಸಿದ್ದಾನೆ.
ಸದ್ಯ ಪೊಲೀಸರು ಗುರುಮೂರ್ತಿ ಹೇಳಿದ ವಿಷಯಗಳನ್ನು ದಾಖಲಿಸಿಕೊಂಡಿದ್ದು, ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮೃತದೇಹದ ಕುರುಹುಗಳಿಗಾಗಿ ಜಿಲ್ಲಾಲಗೂಡ ಹೊಂಡದಲ್ಲಿ ಶೋಧ ಕೂಡಾ ನಡೆಸಲಾಗಿದೆ.
ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡ್ತಿದ್ದ ಆರೋಪಿ: ಗುರುಮೂರ್ತಿ ಈ ಹಿಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಪ್ರಸ್ತುತ ಕಾಂಚನ್‌ಬಾಗ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಗುರುಮೂರ್ತಿ 13 ವರ್ಷಗಳ ಹಿಂದೆ ವೆಂಕಟಮಾಧವಿ ಅವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ತೂಪ್ರಾನಪೇಟೆಯ ದಂಡುಪಲ್ಲಿ ಪ್ರದೇಶದಲ್ಲಿ ಈ ದಂಪತಿ ವಾಸವಾಗಿದ್ದರು. ವೆಂಕಟಮಾಧವಿ ವಿರುದ್ಧ ನಾಪತ್ತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಶೀಘ್ರವೇ ಸಂಪೂರ್ಣ ಮಾಹಿತಿ ಬಹಿರಂಗವಾಗಲಿದೆ ಎಂದು ಮೀರ್‌ಪೇಟ್ ಸಿಐ ನಾಗರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಟ್ರೈನ್ ಚೈನ್ ಎಳೆದು ಇಳಿದ ಪ್ರಯಾಣಿಕರ ಮೇಲೆ ಹರಿದ ರೈಲು: 11ಕ್ಕೂ ಹೆಚ್ಚು ಮಂದಿ ಸಾವು