Women's Under-19 World Cup: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮಹಿಳಾ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರು 9 ವಿಕೆಟ್ಗಳಿಂದ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ಸತತ ಎರಡನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2023ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲೂ ಭಾರತ ಗೆಲುವು ಸಾಧಿಸಿತ್ತು.
ಮಲೇಷ್ಯಾದ ಕೌಲಾಲಂಪುರ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 82 ರನ್ಗಳ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಭಾರತೀಯ ವನಿತೆಯರು 11.2 ಓವರ್ಗಳಲ್ಲೇ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾದರು. ಗೊಂಗಡಿ ತ್ರಿಷಾ (44) ಮತ್ತು ಸನಿಕಾ ಚಾಲ್ಕೆ (26) ಅಜೇಯವಾಗಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
𝐂𝐇𝐀𝐌𝐏𝐈𝐎𝐍𝐒 🏆 🇮🇳
— ICC (@ICC) February 2, 2025
Congratulations India 👏#U19WorldCup #SAvIND pic.twitter.com/OZ7KMDkG4E
ಇದಕ್ಕೂ ಮುನ್ನ ಭಾರತಕ್ಕೆ ಬೃಹತ್ ಗುರಿ ನೀಡುವ ಉದ್ದೇಶದಿಂದಾಗಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಭಾರತೀಯರ ಸ್ಪಿನ್ ದಾಳಿಗೆ ಸಿಲುಕಿ ಅಲ್ಪ ಮೊತ್ತಕ್ಕೆ ಪತನ ಕಂಡಿತು. ತಂಡದ ಪರ ವ್ಯಾನ್ ವೂರ್ಸ್ಟ್ (23), ಕೌಲಿಂಗ್ (15), ಕರ್ಬು ಮೆಸೊ (10) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಎರಡಂಕಿ ಸ್ಕೋರ್ ಗಳಿಸಲು ಸಹ ಸಾಧ್ಯವಾಗಲಿಲ್ಲ.
ಭಾರತದ ಪರ ಗೊಂಗಡಿ ತ್ರಿಷಾ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರು 4 ಓವರ್ಗಳಲ್ಲಿ 15 ರನ್ ಮಾತ್ರ ನೀಡಿ ವಿಕೆಟ್ ಪಡೆದರು. ಉಳಿದಂತೆ ವೈಷ್ವಿ ಶರ್ಮಾ, ಆಯುಷಿ ಶುಕ್ಲಾ, ಪಾರುಣಿಕ ಸಿಸೊಡಿಯಾ ತಲಾ 2 ವಿಕೆಟ್ ಕಬಳಿಸಿದರೆ, ಶಭನಮ್ ಶಕಿಲ್ 1 ವಿಕೆಟ್ ಉರುಳಿಸಿದರು. ಇದರೊಂದಿಗೆ ಭಾರತ ಟೂರ್ನಿಯಲ್ಲಿ ಸೋಲಿಲ್ಲದೆ ವಿಶ್ವಕಪ್ ಎತ್ತಿ ಹಿಡಿದು ದಾಖಲೆ ಬರೆದಿದೆ.
ತ್ರಿಶಾ ಆಲ್ರೌಂಡರ್ ಪ್ರದರ್ಶನ : ವಿಶ್ವಕಪ್ ಟೂರ್ನಿಯಲ್ಲಿ ಆಲ್ರೌಂಡರ್ ಗೊಂಗಡಿ ತ್ರಿಷಾ ಉತ್ತಮ ಪ್ರದರ್ಶನ ತೋರಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ (309) ಎನಿಸಿಕೊಂಡಿದ್ದಾರೆ. ತ್ರಿಶಾ ಬ್ಯಾಟಿಂಗ್ ಜೊತೆಗೆ ಟೂರ್ನಿಯಲ್ಲಿ ಬೌಲಿಂಗ್ ಮೂಲಕವೂ 7 ವಿಕೆಟ್ ಕಬಳಿಸಿದ್ದಾರೆ. ಫೈನಲ್‌ನಲ್ಲಿ ಸರ್ವತೋಮುಖ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಗಿದೆ. ಪ್ಲೇಯರ್ ಆಫ್ ದಿ ಟೂರ್ನಿ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡರು.
ಇತ್ತೀಚೆಗೆ ನಡೆದ ಏಷ್ಯಾ ಕಪ್‌ನಲ್ಲಿ ತ್ರಿಶಾ ಪ್ಲೇಯರ್ ಆಫ್ದಿ ಟೂರ್ನಿ ಪ್ರಶಸ್ತಿಗೂ ಪಾತ್ರರಾಗಿದ್ದರು. ಉಳಿದಂತೆ ವೈಷ್ಣವಿ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 5 ರನ್ಗೆ 5 ವಿಕೆಟ್ ಪಡೆದಿದ್ದು ಇವರ ಬೆಸ್ಟ್ ಇನ್ನಿಂಗ್ಸ್ ಆಗಿದೆ.
ಇದನ್ನೂ ಓದಿ: 'ನನ್ನ ಪತ್ನಿ ನೋಡುತ್ತಿದ್ದಾಳೆ, ದಯವಿಟ್ಟು ಬಿಟ್ಟು ಬಿಡು': ಸ್ಮೃತಿ ಮಂಧಾನಗೆ ರೋಹಿತ್ ಮನವಿ!