ನವದೆಹಲಿ: 2025-26 ಸಾಲಿನ ಆರ್ಥಿಕ ವರ್ಷದ ಕೇಂದ್ರ ಬಜೆಟ್ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮಂಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದರು.
ಮಾಧ್ಯಮವೊಂದಕ್ಕೆ ಭಾನುವಾರ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಕಡಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪೂರ್ಣ ಬೆಂಬಲವಿತ್ತು. ಇದು ಈ ಹಿಂದೆಯೇ ಜಾರಿಯಾಗಬೇಕಿತ್ತು. ಆದರೆ, ಅಧಿಕಾರಿಗಳ ಮನವೊಲಿಸುವಲ್ಲಿ ಸಮಯ ಹಿಡಿಯಿತು ಎಂದು ಅವರು ಹೇಳಿದರು.
ಪ್ರಾಮಾಣಿಕ ತೆರಿಗೆ ಪಾವತಿಸುತ್ತಿದ್ದರೂ, ನಮಗೆ ಯಾವುದೇ ಲಾಭ ಇಲ್ಲ ಎಂದು ಪ್ರತಿ ಬಾರಿಯೂ ಆರೋಪಿಸುತ್ತಿದ್ದ ದೇಶದ ಮಧ್ಯಮ ವರ್ಗದವರಿಗೆ ಈ ಬಾರಿ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ. ಅವರ ಆಕಾಂಕ್ಷೆಗಳಿಗೆ ಸರ್ಕಾರ ಸ್ಪಂದಿಸಿದೆ. ಮಿಡಲ್ ಕ್ಲಾಸ್ ಜನರ ಧ್ವನಿಯನ್ನು ನಾವು ಆಲಿಸಿದ್ದೇವೆ ಎಂದು ಸೀತಾರಾಮನ್ ತಿಳಿಸಿದರು.
ಡಾಲರ್ ಎದುರು ಮಾತ್ರ ರೂಪಾಯಿ ಕುಸಿತ : ರೂಪಾಯಿ ಮೌಲ್ಯದಲ್ಲಿ ಕುಸಿತದ ಬಗ್ಗೆ ಮಾತನಾಡಿರುವ ಅವರು, ಅಮೆರಿಕನ್ ಡಾಲರ್ ಎದುರು ಮಾತ್ರ ಭಾರತದ ರೂಪಾಯಿ ಕುಸಿಯುತ್ತಿದೆ. ಬಿಟ್ಟರೆ, ವಿಶ್ವದ ಯಾವುದೇ ಕರೆನ್ಸಿ ವಿರುದ್ಧ ನಮ್ಮ ಕರೆನ್ಸಿ ಸ್ಥಿರವಾಗಿದೆ. ಈ ಬಗ್ಗೆ ಟೀಕೆ ಮಾಡುವುದೇ ಅಪಮೌಲ್ಯ ಎಂದರು.
ನಮ್ಮ ಮ್ಯಾಕ್ರೋ ಆರ್ಥಿಕ ನೀತಿಗಳಿಂದಾಗಿ ರೂಪಾಯಿ ಅಪಮೌಲ್ಯವಾಗಿಲ್ಲ. ಡಾಲರ್ ಎದುರು ವಿಶ್ವದ ಎಲ್ಲ ಕರೆನ್ಸಿಗಳು ಕುಸಿಯುತ್ತಿವೆ. ಇದಕ್ಕೆ ಬೇರೆಯದ್ದೇ ಕಾರಣಗಳಿವೆ. ಡಾಲರ್ ಹೆಚ್ಚಿನ ಬಳಕೆ ಕಾರಣ, ಅದರ ಮುಂದೆ ಎಲ್ಲ ಕರೆನ್ಸಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ಹಣಕಾಸು ಸಚಿವರು ಸ್ಪಷ್ಟನೆ ನೀಡಿದರು.
ರೂಪಾಯಿ ಮೌಲ್ಯ ಪಾತಾಳಕ್ಕಿಳಿದಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ನಿರಾಧಾರ. ಡಾಲರ್ ಹೊರತಾಗಿ ನಮ್ಮ ರೂಪಾಯಿ ಗಟ್ಟಿಯಾಗಿದೆ. ಇತರ ಕರೆನ್ಸಿಗಳಿಗೆ ಹೋಲಿಸಿಕೊಂಡರೆ, ನಮ್ಮ ರೂಪಾಯಿ ಅತಿ ಕಡಿಮೆ ಅಪಮೌಲ್ಯವಾಗಿದೆ ಎಂದು ತಿಳಿಸಿದರು.
ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್ : ಫೆಬ್ರವರಿ 1 ಮಂಡಿಸಿದ ಮುಂಗಡಪತ್ರದಲ್ಲಿ ಮಧ್ಯಮ ವರ್ಗಕ್ಕೆ ಆದಾಯ ತೆರಿಗೆಯಲ್ಲಿ ಭರ್ಜರಿ ವಿನಾಯಿತಿ ನೀಡಲಾಗಿದೆ. ಯಾವುದೇ ನೌಕರರು 12.75 ಲಕ್ಷ ರೂಪಾಯಿವರೆಗೆ ಗಳಿಸುತ್ತಿದ್ದಲ್ಲಿ ಹೊಸ ತೆರಿಗೆ ಪದ್ಧತಿಯಡಿ ಯಾವುದೇ ತೆರಿಗೆ ಕಟ್ಟುವಂತಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಇದು ದೇಶದ ಕೋಟ್ಯಂತರ ಮಧ್ಯಮವರ್ಗಕ್ಕೆ ನೀಡಿದ ಬಂಪರ್ ಕೊಡುಗೆಯಾಗಿದೆ.