ರಾಮನಗರ : ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಚನ್ನಪಟ್ಟಣ ಹಾಗೂ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ತಿಳಿಸಿದರು.
ಭಾನುವಾರ ಚನ್ನಪಟ್ಟಣದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಅವರು ಮಾತನಾಡಿದರು. ಇದು ಋಣ ತೀರಿಸುವ ಕಾರ್ಯಕ್ರಮ. ನೀವು ನಮಗೆ ಕೊಟ್ಟ ಶಕ್ತಿಗೆ ಅಭಿನಂದನೆ ಸಲ್ಲಿಸಲು ಈ ಕಾರ್ಯಕ್ರಮ ಮಾಡಿದ್ದೇವೆ. ಬೆಳಗಾವಿ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು 2 ಬಾರಿ ಮುಂದೂಡಲಾಗಿತ್ತು. ಇಂದು ಬೆಳಗ್ಗೆ ಮುಖ್ಯಮಂತ್ರಿಗಳ ಕಾಲಿಗೆ ಪೆಟ್ಟಾಗಿದ್ದು, ವೈದ್ಯರ ಸಲಹೆ ಮೇರೆಗೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಈ ಚುನಾವಣೆಯಲ್ಲಿ ಹಗಲು ರಾತ್ರಿ ಶ್ರಮಿಸಿದ ಎಲ್ಲಾ ನಾಯಕರು, ಮಂತ್ರಿಗಳು, ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಅಭಿವೃದ್ಧಿಗೆ ಮತ ಕೊಟ್ಟಿದ್ದೀರಿ. ನಾನು 1989ರಿಂದ ಈ ಜಿಲ್ಲೆಯ ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ಸ್ಥಾನಗಳನ್ನು ಗೆಲ್ಲಿಸಿದ್ದೀರಿ ಎಂದರು.
ನಮ್ಮನ್ನು ಟೀಕಿಸಿದವರಿಗೆ ತಕ್ಕ ಉತ್ತರ - ನಾನು ಯಾರನ್ನೂ ಟೀಕಿಸುವ ಅಗತ್ಯವಿಲ್ಲ. ನಮ್ಮನ್ನು ಅಪೂರ್ವ ಸಹೋದರರು ಎಂದವರು, ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಿಎಂಗಳಾದ ಹೆಚ್ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ದಳದ ಎಲ್ಲ ನಾಯಕರಿಗೆ ಇದು ತಕ್ಕ ಉತ್ತರವಾಗಿದೆ. ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ. ನಮ್ಮ ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ" ಎಂದು ಡಿಕೆಶಿ ಹೊಗಳಿದರು.
![dcm-d-k-shivakumar](https://etvbharatimages.akamaized.net/etvbharat/prod-images/02-02-2025/r-kn-rmn-02-02022025-kanva-dcm-ka10051_02022025205250_0202f_1738509770_833.jpg)
''ಈ ಕ್ಷೇತ್ರದಲ್ಲಿ ಶಾಸಕ ಸ್ಥಾನ ಖಾಲಿಯಾದ ಬಳಿಕ, ನಾನು ಕ್ಷೇತ್ರದ ಪ್ರತಿ ಹೋಬಳಿಗೆ ಬಂದು ಮನೆ ಬಾಗಿಲಿಗೆ ಸರ್ಕಾರವನ್ನು ತಂದು 25 ಸಾವಿರಕ್ಕೂ ಹೆಚ್ಚು ಜನರ ಅರ್ಜಿ ಸ್ವೀಕರಿಸಿದ್ದೇನೆ. 19 ಸಾವಿರಕ್ಕೂ ಹೆಚ್ಚು ಜನ ಮನೆ, ನಿವೇಶನ, ಪಹಣಿ ಇಲ್ಲ ಎಂದು ಅರ್ಜಿ ಸಲ್ಲಿಸಿದ್ದೀರಿ. ಚುನಾವಣೆಗೂ ಮುನ್ನ ಈ ಕ್ಷೇತ್ರ ನನ್ನ ಜವಾಬ್ದಾರಿ ಎಂದು ಮಾತು ಕೊಟ್ಟಿದ್ದೆ. ನಾನು ಈಗಲೂ ಹೇಳುತ್ತೇನೆ. ಇಲ್ಲಿ ಯೋಗೇಶ್ವರ್ ಮಾತ್ರವಲ್ಲ, ನಾನು ಕೂಡ ಕ್ಷೇತ್ರದ ಅಭ್ಯರ್ಥಿಯೇ. ನಾನು, ಯೋಗೇಶ್ವರ್, ಬಾಲಕೃಷ್ಣ, ಇಕ್ಬಾಲ್ ಹುಸೇನ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರವಿ, ರಾಮೋಜಿ ಗೌಡ ಸೇರಿ ಡಿ. ಕೆ ಸುರೇಶ್ ಅವರ ಸಹಕಾರದಲ್ಲಿ ಜಿಲ್ಲೆಯಲ್ಲಿ ಬದಲಾವಣೆ ತರುತ್ತೇವೆ" ಎಂದು ಭರವಸೆ ನೀಡಿದರು.
ನಾನು ಮುಂದಿನ ಒಂದು ವಾರದಲ್ಲಿ ಮತ್ತೆ ಕ್ಷೇತ್ರಕ್ಕೆ ಬಂದು ಕೊಟ್ಟ ಮಾತು ಈಡೇರಿಸುವ ಕೆಲಸದ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಚುನಾವಣೆ ಸಮಯದಲ್ಲಿ ನಾನು ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಮಾಡಿದ್ದೆ. ನೀವು ಶಾಸಕರಾಗಿ, ಮುಖ್ಯಮಂತ್ರಿಯಾಗಿ ಯಾವ ಸಾಧನೆ ಮಾಡಿದ್ದೀರಿ? ಎಂದು. ಯೋಗೇಶ್ವರ್ ಅವರು ಅನೇಕ ದೇವಾಲಯ ಕಟ್ಟಿಸಿದ್ದಾರೆ, ನೀವು ಯಾವ ದೇವಾಲಯ ಕಟ್ಟಿದ್ದೀರಿ?. ಶಾಲೆಗಾಗಿ ನೀವು 2 ಎಕರೆ ಜಮೀನು ದಾನ ಮಾಡಿದ್ದೀರಾ? ಎಂದು ಸವಾಲು ಹಾಕಿದ್ದೆ. ನನ್ನ ಪ್ರಶ್ನೆಗೆ ಅವರಿಂದ ಉತ್ತರ ಬರಲಿಲ್ಲ ಎಂದು ಡಿಸಿಎಂ ಹೇಳಿದ್ರು.
![dcm-d-k-shivakumar](https://etvbharatimages.akamaized.net/etvbharat/prod-images/02-02-2025/r-kn-rmn-01-02022025-dcm-programme-ka10051_02022025164134_0202f_1738494694_344.jpg)
ಸುರೇಶ್ ಅವರ ಸವಾಲನ್ನು ನಾಲ್ವರು ಶಾಸಕರು ಸ್ವೀಕರಿಸುತ್ತೇವೆ; ಈಗ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆ ಸಮಯದಲ್ಲಿ ನಾವು ಜ್ಯೋತಿ ಬೆಳಗುವಾಗ, ನೀವು ನಾಲ್ಕು ಜನ ಶಾಸಕರು ಸೇರಿ ಏನು ಸಾಧನೆ ಮಾಡುತ್ತೀರಿ? ನೋಡುತ್ತೇವೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಸವಾಲು ಹಾಕಿದ್ದಾರೆ. ನಾವೆಲ್ಲರೂ ಸೇರಿ ಈ ಸವಾಲು ಸ್ವೀಕರಿಸಬೇಕು ಎಂದರು.
ಚನ್ನಪಟ್ಟಣದ ಮತದಾರರಿಗೆ ಮಂಕು ಬೂದಿ ಎರಚಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದ್ದೀರಿ. ನಮ್ಮ ಮೇಲೆ ಹಾಗೂ ಗ್ಯಾರಂಟಿ ಯೋಜನೆಗೆ ಮತ ನೀಡಿದ್ದೀರಿ. ಈ ಕ್ಷೇತ್ರಕ್ಕೆ ಈಗಾಗಲೇ 600 ಕೋಟಿ ರೂಪಾಯಿ ಅನುದಾನ ತಂದು ಕೆಲಸ ಆರಂಭಿಸಿದ್ದೇವೆ. ಚುನಾವಣೆಗೆ ಬಂದಾಗ ಅಭಿವೃದ್ಧಿ ಬೇಕೋ, ಕಣ್ಣೀರು ಬೇಕೋ ನಿರ್ಧಾರ ಮಾಡಿ ಎಂದು ನಿಮ್ಮ ಹತ್ತಿರ ಮನವಿ ಮಾಡಿದ್ದೆ. ನೀವು ಅಭಿವೃದ್ಧಿಯನ್ನೇ ಆಯ್ಕೆ ಮಾಡಿದ್ದೀರಿ ಎಂದು ಹೆಚ್ಡಿಕೆ ಕಣ್ಣೀರಿನ ಕುರಿತು ಡಿಕೆಶಿ ವ್ಯಂಗ್ಯವಾಡಿದರು.
ಚುನಾವಣೆ ಸಮಯದಲ್ಲಿ ಜೆಡಿಎಸ್ ನಾಯಕರು ಭಾವನಾತ್ಮಕವಾಗಿ ನಿಮ್ಮನ್ನು ಸೆಳೆಯುವ ಪ್ರಯತ್ನ ಮಾಡಿದರು. ಕಣ್ಣೀರು ಹಾಕಿದ್ದರು. ಭಾವನಾತ್ಮಕವಾಗಿ ನಿಮ್ಮನ್ನು ಬ್ಲಾಕ್ ಮೇಲ್ ಮಾಡಲು ನೋಡಿದ್ದರು. ಆದರೆ ನೀವು ಜಗ್ಗಲಿಲ್ಲ, ಬಗ್ಗಲಿಲ್ಲ ಎಂದರು. ದೇವರು ವರ- ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ ಎಂದು ನಾನು ಹೇಳುತ್ತಿರುತ್ತೇನೆ. ಈಗ ನೀವು ನಮಗೆ ಅವಕಾಶ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ನಾವು ಸಾಧನೆ ಮಾಡಲು ರೂಪುರೇಷೆ ನಿರ್ಮಿಸಬೇಕು. ನಾನು ಆಕಾಶವನ್ನು ಧರೆಗೆ ಇಳಿಸುತ್ತೇನೆ ಎಂದು ಹೇಳುವುದಿಲ್ಲ. ನಿಮ್ಮ ಕಣ್ಣಿಗೆ ಕಾಣುವ ಬದಲಾವಣೆ ತರುತ್ತೇವೆ ಎಂದರು.
ಲಂಚಕ್ಕೆ ಅವಕಾಶವಿಲ್ಲ ; ನಿವೇಶನ ಮತ್ತು ಮನೆಗಳಿಗಾಗಿ 300 ಎಕರೆ ಜಮೀನು ಗುರುತಿಸಲಾಯಿತು. ಸಚಿವ ಜಮೀರ್ ಅಹಮದ್ ಖಾನ್ ಅವರು 5 ಸಾವಿರ ಮನೆಗಳನ್ನು ಮಂಜೂರು ಮಾಡಿದರು. ಇವುಗಳನ್ನು ಹಂಚುವ ಕೆಲಸ ಮಾಡುತ್ತೇವೆ. ನೀವು ಅಧಿಕಾರಿಗಳಿಗೆ ಲಂಚ ನೀಡುವುದಕ್ಕೆ ನಾನು ಹಾಗೂ ಯೋಗೇಶ್ವರ್ ಬಿಡುವುದಿಲ್ಲ ಎಂದು ಹೇಳಿದರು.
ಮೂರು ಕ್ಷೇತ್ರಗಳ ಉಪಚುನಾವಣೆಗಳ ಪೈಕಿ ಸಂಡೂರು ಬಿಟ್ಟರೆ ಎಲ್ಲೂ ನೀವು ಗೆಲ್ಲಲ್ಲ ಅಂತ ಮಾಧ್ಯಮಗಳು ಹೇಳಿದ್ದವು. ಎಲ್ಲಾ ಸಮೀಕ್ಷೆಗಳು ತಲೆ ಕೆಳಗಾಗುತ್ತವೆ, ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದೆ. ನಮ್ಮ ಸರ್ಕಾರದ ಸಂಖ್ಯಾಬಲ 135 ಅಲ್ಲ, 138 ಎಂದು ಹೇಳಿದ್ದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಅವರ ಸುಪುತ್ರ ವಿರುದ್ಧ ಗೆಲ್ಲುತ್ತೇವೆ ಎಂದು ಹೇಳಿದ್ದೆವು. ನೀವು ಅದೇ ರೀತಿ ಫಲಿತಾಂಶ ಕೊಟ್ಟಿದ್ದೀರಿ ಎಂದು ಡಿಕೆಶಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.
ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಆಸೆ ಇತ್ತು ; ''ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಇಚ್ಛೆ ಇತ್ತು. ಪಕ್ಷ ಅದಕ್ಕೆ ಒಪ್ಪಲಿಲ್ಲ. ಸುರೇಶ್ ಅವರು ಸ್ಪರ್ಧಿಸಲು ಒತ್ತಡ ಇತ್ತು. ನಾವು ಕುಟುಂಬಕ್ಕಿಂತ ಪಕ್ಷ ಮುಖ್ಯ ಎಂದು ತೀರ್ಮಾನ ಮಾಡಿದೆವು. ಯೋಗೇಶ್ವರ್ ಅವರು ಪಕ್ಷ ಹಾಗೂ ನಾಯಕತ್ವ ಒಪ್ಪಿ ಬಂದ ನಂತರ, ನಮ್ಮ ಪಕ್ಷದ ಹಿರಿಯ ನಾಯಕರ ಜತೆ ಚರ್ಚೆ ಮಾಡಿ, ಅಂತಿಮ ತೀರ್ಮಾನ ಮಾಡಿದೆವು. ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಲು ಆಗಲಿಲ್ಲ. ಆದರೆ ಚಿಂತೆ ಮಾಡುವುದು ಬೇಡ, ನಾವು ಎಲ್ಲಾ ಕಾರ್ಯಕರ್ತರ ರಕ್ಷಣೆ ಮಾಡೇ ಮಾಡುತ್ತೇವೆ" ಎಂದು ಡಿಕೆಶಿ ಅಭಯ ನೀಡಿದರು.
ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸುತ್ತೇವೆ ; ''ನಮಗೆ ಮಹಿಳೆಯರು ಹೆಚ್ಚು ಬೆಂಬಲ ನೀಡಿದ್ದಾರೆ, ಕಾರ್ಯಕರ್ತರು ಒಗ್ಗಟ್ಟಿನ ಕೆಲಸ ಮಾಡಿದ್ದಾರೆ. ನಾನು, ಸುರೇಶ್, ಪುಟ್ಟಣ್ಣ, ಬಾಲಕೃಷ್ಣ, ರವಿ, ಇಕ್ಬಾಲ್ ಹುಸೇನ್ ಎಲ್ಲರೂ ನಿಮ್ಮ ಜತೆ ಇರುತ್ತೇವೆ. ಕ್ಷೇತ್ರದಲ್ಲಿ ಮೊದಲ ಬಾರಿಗೆ 25 ಸಾವಿರ ಮತಗಳ ಅಂತರದ ಗೆಲುವು ನೀಡಿದ್ದೀರಿ. ಮುಂದೆ ನಾನು ಹಾಗೂ ಯೋಗೇಶ್ವರ್ ಸತ್ತೆಗಾಲಕ್ಕೆ ಭೇಟಿ ನೀಡಿ ನೀರಾವರಿ ಯೋಜನೆ, ಕೆರೆ ತುಂಬಿಸುವ ಕೆಲಸ, ರಸ್ತೆ ಅಭಿವೃದ್ಧಿ ಸೇರಿ ಎಲ್ಲಾ ಯೋಜನೆ ಬಗ್ಗೆ ಗಮನ ಹರಿಸುತ್ತೇವೆ" ಎಂದು ಹೇಳಿದರು.
![DCM D K Shivakumar](https://etvbharatimages.akamaized.net/etvbharat/prod-images/02-02-2025/23458402_thumhjsdfgsfs.jpg)
ದಳದ ಕಾರ್ಯಕರ್ತರು ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ಕೊಟ್ಟು, ಈ ಭಾಗದ ಜನರ ಆಸ್ತಿ ಮೌಲ್ಯ ಹೆಚ್ಚಿಸಲು ನಾವು ಕೆಲಸ ಮಾಡೋಣ. ಒಬ್ಬ ವ್ಯಕ್ತಿಗಾಗಿ ಪಕ್ಷವನ್ನೇ ಬಲಿಕೊಟ್ಟ ಬಗ್ಗೆ ಈಗ ಚರ್ಚೆ ಬೇಡ. ಯೋಗೇಶ್ವರ್ ಹಿರಿಯರು, ಅನುಭವ ಇರುವವರು, ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಾರೆ. ನಾನು, ಸಿದ್ದರಾಮಯ್ಯ ಅವರು ಹಾಗೂ ಇಡೀ ಸರ್ಕಾರ ನಿಮ್ಮ ಜತೆ ನಿಲ್ಲಲಿದೆ ಎಂದು ತಿಳಿಸಿದರು.
ಕಣ್ವ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿಎಂ : ಕಾರ್ಯಕ್ರಮದ ನಂತರ ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಕಣ್ವ ಅಣೆಕಟ್ಟೆಗೆ ಭೇಟಿ ನೀಡಿ ಭಾನುವಾರ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸಿ. ಪಿ ಯೋಗೇಶ್ವರ್, ಮಾಜಿ ಸಂಸದ ಡಿ. ಕೆ ಸುರೇಶ್, ಶಾಸಕರಾದ ಬಾಲಕೃಷ್ಣ, ರಂಗನಾಥ್, ಎನ್ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಎಸ್. ರವಿ ಮತ್ತಿತರ ನಾಯಕರು ಉಪಸ್ಥಿತರಿದ್ದರು.
ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಜನಪ್ರತಿನಿಧಿಗಳ ಜತೆ ಮೋಟಾರ್ ಬೋಟ್ ಮೂಲಕ ಕಣ್ವ ಡ್ಯಾಮ್ನಲ್ಲಿ ವಿಹಾರ ನಡೆಸಿದರು. ಕಣ್ವ ಅಣೆಕಟ್ಟಿನ ಪ್ರದೇಶವನ್ನು ಪ್ರವಾಸೋದ್ಯಮದ ತಾಣವಾಗಿ ರೂಪಿಸಲು ಇರುವ ಅವಕಾಶಗಳ ಕುರಿತು ಚರ್ಚೆ ನಡೆಸಿದರು. ಜಲ ವಿಹಾರ, ಜಲ ಕ್ರೀಡೆ, ಪಾರ್ಕ್ ನಿರ್ಮಾಣ ಸೇರಿದಂತೆ ಅಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಇದನ್ನೂ ಓದಿ : ಕಾಂಗ್ರೆಸ್ನಿಂದ ಬಿಜೆಪಿಗೆ ಹೋದವರನ್ನು ಯೂಸ್ ಅಂಡ್ ಥ್ರೋ ಮಾಡಲಾಗಿದೆ : ಡಿಸಿಎಂ ಡಿ ಕೆ ಶಿವಕುಮಾರ್ - DCM D K SHIVAKUMAR