ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡಿ ಕೇವಲ 8 ತಿಂಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಅವುಗಳ ನಡುವಿನ ಆಂತರಿಕ ಜಗಳ ಮತ್ತು ಸಂಘರ್ಷವು ಭಾರೀ ಮಹತ್ವಾಕಾಂಕ್ಷೆಯಿಂದ ಉದಯಿಸಿದ ಕೂಟವು ಬಲ ಕಳೆದುಕೊಂಡು ಕ್ಷೀಣವಾಗುತ್ತಿದೆ. ಇದರ ಪರಿಣಾಮ ಎನ್ಡಿಎ ಕೂಟದ ನೇತಾರ ಬಿಜೆಪಿಯು ರಾಷ್ಟ್ರ ರಾಜಕೀಯದಲ್ಲಿ ಕಂಗೊಳಿಸುತ್ತಿದೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ಪತನವಾಗುವ ಮೂಲಕ ಇಂಡಿಯಾ ಕೂಟದ ಸರ್ಕಾರಗಳ ಸಂಖ್ಯೆ ಎಂಟಕ್ಕೆ ಇಳಿದಿದೆ. ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ, ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರ ಬಿಜೆಪಿಯೇತರ ಸರ್ಕಾರಗಳಿವೆ.
ರಾಜ್ಯಗಳಲ್ಲಿ ಪರಸ್ಪರ ಎದುರಾಳಿಯಾಗಿರುವ ವಿಪಕ್ಷಗಳು 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿನ ಕಳಪೆ ಸಾಧನೆ ಮತ್ತು ಬಿಜೆಪಿಯನ್ನು ಎದುರಿಸಲು ಒಟ್ಟಾಗಿ ಸೇರಿ ಹೊಸದಾಗಿ I.N.D.I.A ಕೂಟವನ್ನು ರಚಿಸಿಕೊಂಡಿದ್ದವು. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುವುದನ್ನು ತಡೆದು ಭಾಗಶಃ ಯಶಸ್ವಿಯಾದವು. ಇದು ಕಡಿಮೆ ಸಾಧನೆಯೇನಲ್ಲ.
ರಾಷ್ಟ್ರದಲ್ಲಿ ಒಗ್ಗಟ್ಟು, ರಾಜ್ಯಗಳಲ್ಲಿ ಪ್ರತಿಸ್ಪರ್ಧಿ : ಇಂಡಿಯಾ ಕೂಟ ರಚನೆಗೂ ಮೊದಲು, ನಂತರ ವಿಪಕ್ಷಗಳ ಮಂತ್ರ ಒಂದೇ ಆಗಿತ್ತು. ರಾಷ್ಟ್ರ ಮಟ್ಟದ ಚುನಾವಣೆಯಲ್ಲಿ ಒಗ್ಗಟ್ಟು ಪ್ರದರ್ಶನ ಮತ್ತು ರಾಜ್ಯ ಚುನಾವಣೆಗಳಲ್ಲಿ ಪ್ರತ್ಯೇಕ ಸ್ಪರ್ಧೆ. ಇದೇ ಅವರಿಗೆ ಮುಳುವಾಗುತ್ತದೆ ಎಂಬುದು ಗೊತ್ತಿರಲಿಲ್ಲ. ಹೀಗಾಗಿ, ರಾಜ್ಯ ಚುನಾವಣೆಗಳಲ್ಲಿ ಕಿತ್ತಾಡುವ ಮೂಲಕ ಬಿಜೆಪಿಗೆ ಲಾಭ ತಂದುಕೊಡುತ್ತಿರುವುದು ಸುಳ್ಳಲ್ಲ. ಇದಕ್ಕೆ ಹರಿಯಾಣ, ದೆಹಲಿ ಚುನಾವಣೆಗಳು ಉದಾಹರಣೆಯಾಗಿವೆ.
ಇಂಡಿಯಾ ಕೂಟದ ಅತಿದೊಡ್ಡ ಪಾಲುದಾರ ಪಕ್ಷವಾದ ಕಾಂಗ್ರೆಸ್, ದೆಹಲಿ ಚುನಾವಣೆಯಲ್ಲಿ ಆಪ್ ವಿರುದ್ಧ ನೇರವಾಗಿ ಕಣಕ್ಕಿಳಿಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಅರವಿಂದ್ ಕೇಜ್ರಿವಾಲ್ ಮತ್ತವರ ಪಕ್ಷದ ನಾಯಕರ ವಿರುದ್ಧ ಟೀಕಾಸ್ತ್ರ ಬಳಸಿದರು. ಮದ್ಯ ಹಗರಣದ ರೂವಾರಿ, ಶೀಶ್ಮಹಲ್ ಆರೋಪಗಳು ಕೇಜ್ರಿವಾಲ್ಗೆ ಭಾರೀ ಹೊಡೆತ ನೀಡಿದವು.
ಇತ್ತ ಅದೇ ಕೂಟದ ಮಿತ್ರ ಪಕ್ಷಗಳಾದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿಜೆಪಿಯನ್ನು ಎದುರಿಸಲು ಆಪ್ಗೆ ಬೆಂಬಲ ನೀಡಿದವು. ಆದರೆ, ಚುನಾವಣೆಯಲ್ಲಿ ಅವುಗಳು ಮತ ತಂದುಕೊಡಲು ಸಾಧ್ಯವಾಗಲಿಲ್ಲ.
ದೆಹಲಿ, ಹರಿಯಾಣ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಳ್ಳದೆ ಇರುವುದು ಎರಡೂ ಪಕ್ಷಗಳು ಪರಸ್ಪರ ಎದುರಾಳಿಗಳು ಎಂಬುದು ಇಲ್ಲಿ ಸಾಬೀತಾಗುತ್ತದೆ. ಇದು ಕೂಟದಲ್ಲಿ ಪಕ್ಷಗಳ ನಡುವೆ ಅಂತರ ಬೆಳೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ನಾಯಕರ ಸೋಲಿನ ಆಲಾಪ : ದೆಹಲಿ ಸೋಲಿನ ಬಳಿಕ ಇಂಡಿಯಾ ಕೂಟದ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು "ನಾವು ಇನ್ನೂ ಹೊಡೆದಾಡಿಕೊಳ್ಳೋಣ" ಎಂದು ವ್ಯಂಗ್ಯವಾಡಿದ್ದಾರೆ.
ತೀವ್ರ ನಿರಾಶೆ ವ್ಯಕ್ತಪಡಿಸಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಇಂಡಿಯಾ ಬಣದಲ್ಲಿನ ಭಿನ್ನಾಭಿಪ್ರಾಯಗಳು ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಗೆಲುವಿಗೆ ದಾರಿ ಮಾಡಿಕೊಟ್ಟವು ಎಂದು ಹೇಳಿವೆ. ಸಿಪಿಐ(ಎಂ) ಪಕ್ಷವು ಕಾಂಗ್ರೆಸ್ ಅನ್ನು ತೀವ್ರವಾಗಿ ಟೀಕಿಸಿದೆ. ದೆಹಲಿಯಲ್ಲಿ ಬಿಜೆಪಿಯ ಗೆಲುವಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದೆ.
ಇದನ್ನೂ ಓದಿ: ಎದ್ದಲ್ಲೇ ಬಿದ್ದ ಆಮ್ ಆದ್ಮಿ : ದೆಹಲಿಯಲ್ಲಿ ಹುಟ್ಟಿದ ಪಕ್ಷಕ್ಕೆ ಅಲ್ಲೇ ಸೋಲು, ಪಂಜಾಬಲ್ಲಿ ಮಾತ್ರ ಅಧಿಕಾರ