ಬಿಗ್ ಬಾಸ್, ವ್ಯಕ್ತಿತ್ವಗಳ ಆಟ. ವ್ಯಕ್ತಿತ್ವ ಅನಾವರಣಗೊಳ್ಳುವ ಈ ರಿಯಾಲಿಟಿ ಶೋನಲ್ಲಿ ಪ್ರೀತಿ-ಪ್ರೇಮ, ಸ್ನೇಹ ಬಾಂಧವ್ಯ ಸಹಜ. ಈ ಮನೆಯಲ್ಲಿ ಶುರುವಾಗೋ ಸ್ನೇಹ, ಹೊರ ಬಂದ ಬಳಿಕವೂ ಸಾಗಿದ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಅದರಂತೆ ಸೀಸನ್ 11ರಲ್ಲೂ ಗಮನ ಸೆಳೆದ ಅಪ್ಪಟ ಸ್ನೇಹವೆಂದರೆ ಗೌತಮಿ ಜಾಧವ್ ಮತ್ತು ಉಗ್ರಂ ಮಂಜು ಅವರದ್ದು.
ಪ್ರೇಕ್ಷಕರ ಮನಸೆಳೆದಿದ್ದ ಗೆಳೆತನ: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಕಳೆದ ಭಾನುವಾರ, ಜನವರಿ 26ರಂದು ಸೀಸನ್ 11ನ್ನು ಯಶಸ್ವಿಯಾಗಿ ಪೂರ್ಣಗೊಳಿಸಿಕೊಂಡಿದೆ. ಹನುಮಂತು ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ಸೀಸನ್ ಇಡೀ ಗೌತಮಿ ಜಾಧವ್ ಮತ್ತು ಉಗ್ರಂ ಮಂಜು ಅವರ ಗೆಳೆತನ ಪ್ರೇಕ್ಷಕರ ಗಮನ ಸೆಳೆದಿತ್ತು. ಗೆಳೆಯ ಗೆಳೆತಿ ಎಂದು ಕರೆದುಕೊಳ್ಳುತ್ತಿದ್ದ ಇವರು ಪ್ರತೀ ಹಂತದಲ್ಲೂ ಪರಸ್ಪರ ಹೆಗಲು ಕೊಡುವ ಮೂಲಕ ಬಿಗ್ ಬಾಸ್ ಪಯಣ ಪೂರ್ಣಗೊಳಿಸಿದ್ರು.
ಮಿಶ್ರಪ್ರತಿಕ್ರಿಯೆ ಪಡೆದ ಸ್ನೇಹ: ಇವರ ಗೆಳೆತನ ಅದೆಷ್ಟೋ ಮಂದಿಗೆ ಮಾದರಿ ಆಗೋ ಜೊತೆಗೆ ಮಿಶ್ರ ಪ್ರತಿಕ್ರಿಯೆಯನ್ನೂ ಸ್ವೀಕರಿಸಿದೆ. ಇವರ ಸ್ನೇಹ ಬಿಗ್ ಬಾಸ್ ಆಟದ ಮೇಲೆ ಪರಿಣಾಮ ಬೀರಿದೆ, ಇಬ್ಬರೂ ತಮ್ಮ ಕಂಫರ್ಟ್ ಝೋನ್ನಲ್ಲಿದ್ದು ಆಟಕ್ಕೆ ಸಂಪೂರ್ಣ ಕೊಡುಗೆ ನೀಡುತ್ತಿಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ಗಳಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು ಕೂಡಾ. ನಿರೂಪಕ ಸುದೀಪ್, ಇತರ ಸ್ಪರ್ಧಿಗಳಿಂದ ಹಿಡಿದು, ಪ್ರೇಕ್ಷಕರ ಪೈಕಿ ಹೆಚ್ಚಿನವರು ಬಹುತೇಕ ಇದೇ ರೀತಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಆದ್ರೆ ಬಿಗ್ ಬಾಸ್ ಮನೆಯಲ್ಲಿರೋದು ಬೆರಳೆಣಿಕೆ ಸಂಖ್ಯೆಯ ಜನರು, ಮೊಬೈಲ್ ಕಂಪ್ಯೂಟರ್ ಟಿವಿ ಪುಸ್ತಕಗಳಿಲ್ಲ. ಬೆರೆಯಲು ಹೆಚ್ಚು ಮಂದಿಯಿಲ್ಲ. ಹಾಗಾಗಿ ತಮ್ಮ ಕಂಫರ್ಟ್ ಝೋನ್ನಲ್ಲಿರೋದು ಸಹಜ ಎಂದು ಅಭಿಮಾನಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ಟ್ರೋಲಿಗರೇ ರೋಸ್ಟ್ ಆದ ಕ್ಷಣವಿದು: ಇವರ ಗೆಳೆತನ ಜನಪ್ರಿಯವಾಗೋ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಗೂ ಗುರಿಯಾಗಿತ್ತು. ಇದೀಗ, ಗೌತಮಿ ಜಾಧವ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಟೀಕಾಕಾರರನ್ನು ಗಪ್ಚುಪ್ಗೊಳಿಸಿದೆ. ಟ್ರೋಲಿಗರೇ ರೋಸ್ಟ್ ಆದ ಕ್ಷಣವಿದು. ಬಿಗ್ ಬಾಸ್ ನಂತರ ಗೆಳೆಯ ಉಗ್ರಂ ಮಂಜು ಅವರನ್ನು ಗೆಳತಿ ಗೌತಮಿ ಜಾಧವ್ ಭೇಟಿಯಾಗಿದ್ದು, ಗೌತಮಿ ಪತಿ ಅಭಿಷೇಕ್ ಕೂಡಾ ಸಾಥ್ ನೀಡಿದ್ದಾರೆ. ಮೂವರೂ ಗುಣಮಟ್ಟದ ಕ್ಷಣ ಕಳೆದಿದ್ದು, ಸುಂದರ ಫೋಟೋವನ್ನು ನಟಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 'ಸಾಕ್ಷಾತ್ ಮಹಾಲಕ್ಷ್ಮಿ': ದೇವತೆಯಂತಾದ ರಾಧಿಕಾ ಪಂಡಿತ್! ಅಭಿಮಾನಿಗಳು ಮಂತ್ರಮುಗ್ಧ
ಫಸ್ಟ್ ಪಿಕ್ಚರ್ ಟುಗೆದರ್: ಫೋಟೋ ಶೇರ್ ಮಾಡಿದ ನಟಿ ಫಸ್ಟ್ ಪಿಕ್ಚರ್ ಟುಗೆದರ್ ಎಂದು ಬರೆದುಕೊಂಡಿದ್ದಾರೆ. ಉಗ್ರಂ ಮಂಜು ಅವರು ಗೌತಮಿ ಪತಿ ಅಭಿ ಹೆಗಲ ಮೇಲೆ ಕೈ ಹಾಕಿ ಫ್ಲೆಂಡ್ಲಿಯಾಗಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಗೌತಮಿ ಎಂದಿನಂತೆ ನಗುಮೊಗದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಪೋಟೋವನ್ನು ಗೌತಮಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದು, ನಟಿ ತಮ್ಮ ಸ್ಟೋರಿ ಸೆಕ್ಷನ್ನಲ್ಲಿ ರೀಶೇರ್ ಮಾಡುತ್ತಿದ್ದಾರೆ. ಹೀಗೆ ರೀಶೇರ್ ಆದ ಸ್ಟೋರಿ ಒಂದರಲ್ಲಿ, ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು ಎಂದು ಬರೆಯಲಾಗಿದೆ.
ಇದನ್ನೂ ಓದಿ: ಚಿತ್ರರಂಗದಲ್ಲಿ 29 ವರ್ಷ: ಸಾಥ್ ಕೊಟ್ಟವರಿಗೆ 'ಥ್ಯಾಂಕ್ಸ್'; ಅಭಿಮಾನಿಗಳು ನನ್ನ 'ಸೌಭಾಗ್ಯ'ವೆಂದ ಕಿಚ್ಚ
'ಇಷ್ಟೆಲ್ಲಾ ನೆಗೆಟಿವ್ ಆಗಿದೆ. ಜನಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮಂಜು - ಗೌತಮಿ ಮೀಟ್ ಆಗಿದ್ದಾರೆ. ನಿಜವಾದ ಫ್ರೆಂಡ್ಶಿಪ್ ಅಂದ್ರೆ ಇದು' ಎಂದು ಒಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಮತ್ತೊಂದು ಸ್ಟೋರಿನಲ್ಲಿ, ಖುಷಿಯಲ್ಲಿ ಮಾತ್ರ ಅಲ್ಲ, ಕಷ್ಟದಲ್ಲಿ ಜೊತೆಗೆ ಇರುವುದೇ ನಿಜವಾದ ಗೆಳೆತನ ಎಂದು ಬರೆಯಲಾಗಿದೆ.