ಬೆಂಗಳೂರು: ರಾಜ್ಯದಲ್ಲಿ ಕೆಲ ತಿಂಗಳಿಂದ ನಡೆಯುತ್ತಿರುವ ಬಿಜೆಪಿಯ ಆಂತರಿಕ ಕಲಹಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ಕಠಿಣ ಸಂದೇಶ ಕಳುಹಿಸಿದೆ. ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಮೂಲಕ ರಾಜ್ಯ ನಾಯಕರಿಗೆ ಸಂದೇಶ ರವಾನಿಸಿಡಿರುವ ದೆಹಲಿ ಹೈಕಮಾಂಡ್, ಯಾವ ನಾಯಕರೂ ಕೂಡ ಬಹಿರಂಗವಾಗಿ ಮಾತನಾಡಬಾರದೆಂದು ಸೂಚನೆ ಕೊಟ್ಟಿದೆ.
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರನ್ನು ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಕರೆಸಿಕೊಂಡ ಸುಧಾಕರ್ ರೆಡ್ಡಿ ಅವರು ಚರ್ಚೆ ನಡೆಸಿದ್ದಾರೆ. ಇದರ ಜೊತೆಗೆ ಯಾವುದೇ ನಾಯಕರು ಬಹಿರಂಗವಾಗಿ ಮಾತನಾಡಬಾರದೆಂದು ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಬಹಿರಂಗವಾಗಿಯೇ ರಾಜ್ಯ ನಾಯಕರಿಗೆ ಸಂದೇಶ ರವಾನೆ ಮಾಡಿದ್ದಾರೆ.
ಇಂದು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸುಧಾಕರ್ ರೆಡ್ಡಿ, "ನಾನು ಪ್ರತಿಯೊಬ್ಬರಿಗೂ ಹೇಳುತ್ತೇನೆ. ಎಲ್ಲರೂ ಅತಿ ಮುಖ್ಯ ಹಿರಿಯರು. ಮಾಧ್ಯಮದ ಮೂಲಕ ನಾವು ಎಲ್ಲರ ಮಾತುಗಳನ್ನೂ ನೋಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಆಂತರಿಕ ಚುನಾವಣೆ ಮುಕ್ತಾಯ ಆಗಿದೆ. ಕರ್ನಾಟಕದಲ್ಲಿ ಕೂಡ ಆ ಪ್ರೊಸಿಜರ್ ನಡೆಯುತ್ತಿದೆ. ಈಗಾಗಲೇ ಅನೇಕ ಜಿಲ್ಲಾಧ್ಯಕ್ಷರ ಆಯ್ಕೆ ಆಗಿದೆ. ಯಾರೇ ಮಾತಾಡಬೇಕಾದರೆ, ಪಕ್ಷದ ವೇದಿಕೆಯಲ್ಲಿ ಮಾತಾಡಿ" ಎಂದು ಮನವಿ ಮಾಡಿದರು.
"ರಾಜ್ಯದ ಯಾವುದೇ ನಾಯಕರು ಆಗಲಿ ಎ ಅಥವಾ ಬಿ ಯಾರೇ ಆಗಲಿ, ಒಂದು ವೇದಿಕೆಯಲ್ಲಿ ಚರ್ಚೆ ಮಾಡಲಿ. ಪಕ್ಷದ ಗೈಡ್ ಲೈನ್ಸ್ ಅಡಿ ನಡೆಯಬೇಕು. ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಜನರ ವಿರೋಧ ಕಾಂಗ್ರೆಸ್ ಮೇಲೆ ಇದೆ. ಸ್ವತಃ ಸಿದ್ದರಾಮಯ್ಯ ಆರೋಪ ಹೊತ್ತಿದ್ದಾರೆ. ಅದರ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ಸಲಹೆ ನೀಡಿದರು. ಪಕ್ಷದ ಎಲ್ಲಾ ನಾಯಕರು ಶಾಂತ ರೀತಿಯಲ್ಲಿ, ಸಹೋದರ ಭಾವದಲ್ಲಿ ಶಿಸ್ತಿನಿಂದ ನಡೆಯಬೇಕು. ಏನೇ ಸಮಸ್ಯೆ ಇದ್ದರೂ ಪಕ್ಷ ಅದನ್ನು ನೋಡಿಕೊಳ್ಳಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಆಂತರಿಕ ಕಿತ್ತಾಟದಿಂದ ಪಕ್ಷಕ್ಕೆ ಹಿನ್ನಡೆ, ಕೆಲವೇ ದಿನಗಳಲ್ಲಿ ಗೊಂದಲಗಳಿಗೆ ಪರಿಹಾರ: ಅಶೋಕ್