ಬೆಂಗಳೂರು: ಲಘು ಹಾಗೂ ಹಗುರ ಹೆಲಿಕಾಪ್ಟರ್ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ಗೆ (ಹೆಚ್ಎಎಲ್) ದೇಶ ಹಾಗೂ ವಿದೇಶಗಳಿಂದ ಹೆಲಿಕಾಪ್ಟರ್ಗಳ ಉತ್ಪಾದನೆಗೆ ಬೇಡಿಕೆ ಬರುತ್ತಿದೆ. ಇದರ ಹಣಕಾಸು ವಹಿವಾಟು ಮುಂದಿನ ಆರು ತಿಂಗಳಲ್ಲಿ ಸುಮಾರು 2.5 ಲಕ್ಷ ಕೋಟಿಗೆ ಹೆಚ್ಚಳವಾಗಲಿದೆ ಎಂದು ಸಂಸ್ಥೆಯ ಸಿಎಂಡಿ ಡಾ.ಡಿ.ಕೆ.ಸುನಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಪ್ರಸ್ತುತ ಆರ್ಥಿಕ ವರ್ಷದ 9 ತಿಂಗಳಲ್ಲಿ 55 ಸಾವಿರ ಕೋಟಿ ಮೊತ್ತದ ಹೆಲಿಕಾಪ್ಟರ್ಗಳನ್ನು ತಯಾರಿಸಿಕೊಡಲು ಆರ್ಡರ್ ಬಂದಿವೆ. ಮುಂದಿನ ಐದಾರು ತಿಂಗಳಲ್ಲಿ 1.2 ಲಕ್ಷ ಕೋಟಿಗೆ ದಾಟಲಿದ್ದು, ಒಟ್ಟಾರೆ 2.5 ಲಕ್ಷ ಕೋಟಿ ರೂಪಾಯಿ ವಹಿವಾಟು ಆಗಲಿದೆ" ಎಂದು ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ನಿಮಿತ್ತವಾಗಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಎಂಡಿ ಮಾಹಿತಿ ನೀಡಿದ್ದಾರೆ.
"ಸದ್ಯ ತೇಜಸ್ ಹಾಗೂ ಪ್ರಚಂಡ್ ಲಘು ಯುದ್ಧ ಹೆಲಿಕಾಫ್ಟರ್ಗಳ (ಎಲ್ಸಿಎ) ತಯಾರಿಕೆಗೆ ಬೇಡಿಕೆ ಸೃಷ್ಟಿಯಾಗಿದೆ. ಅತ್ಯಾಧುನಿಕ ಹಾಗೂ ಸುಧಾರಿತ 97 ತೇಜಸ್ ಹಾಗೂ 156 ಎಲ್ಸಿಎ ಹೆಲಿಕಾಪ್ಟರ್ಗಳನ್ನು ಉತ್ಪಾದಿಸಲಾಗುತ್ತಿದ್ದು, ಐದಾರು ತಿಂಗಳಲ್ಲಿ ನಿರ್ಮಾಣ ಕಾರ್ಯ ಮುಗಿಯಲಿದೆ. ಬೇಡಿಕೆಗಳಿಗೆ ತಕ್ಕಂತೆ ತ್ವರಿತಗತಿಯಲ್ಲಿ ಹೆಲಿಕಾಪ್ಟರ್ಗಳನ್ನು ಬೆಂಗಳೂರು, ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ಮೂರು ಕಡೆಯ ನಿರ್ಮಾಣ ಘಟಕಗಳಲ್ಲಿ ನಿರ್ಮಿಸಲಾಗುತ್ತಿದೆ".
"ಈ ಮೂರು ಘಟಕಗಳಲ್ಲಿ 2026ರ ವೇಳೆಗೆ 26 ಏರ್ಕ್ರಾಫ್ಟ್ ತಯಾರಿಸುವ ಗುರಿಯಿದೆ. ಉತ್ಪಾದನೆ ವೇಗ ಹೆಚ್ಚಿಸಲು ಟಾಟಾ ಹಾಗೂ ಎಲ್ ಅಂಡ್ ಟಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತೀಯ ಸೇನೆಗೆ ಮಾತ್ರವಲ್ಲದೇ, ವಿದೇಶಗಳಿಂದಲೂ ಬೇಡಿಕೆ ಬರುತ್ತಿದೆ. ಮಲೇಶಿಯಾ, ಫಿಲಿಪ್ಪಿನ್ಸ್ ಹಾಗೂ ಉತ್ತರ ಅಮೇರಿಕ ಸೇರಿದಂತೆ ವಿವಿಧ ಕಡೆಗಳಿಂದ ಹೆಲಿಕಾಪ್ಟರ್ ಉತ್ಪಾದಿಸಲು ಹೆಚ್ ಎಎಲ್ ಮುಂದಾಗಿದೆ. ಸುಧಾರಿತ ಹಾಗೂ ಆತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ಆದ್ಯತೆ ನೀಡುತ್ತಿದ್ದು, ಇದರ ಭಾಗವಾಗಿ ಸಂಶೋಧನೆ ಹಾಗೂ ಅಭಿವೃದ್ಧಿಗೆ 2,500 ಕೋಟಿ ವ್ಯಯಿಸಲಾಗುತ್ತಿದೆ. ಸದ್ಯ ತೇಜಸ್ ಲಘು ಹೆಲಿಕಾಪ್ಟರ್ಗಳ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಹೆಚ್ಚಿಸಲಾಗಿದೆ" ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ: ಕನ್ನಡದಲ್ಲೇ ಮಾತು ಆರಂಭಿಸಿದ ಆನಂದ್ ಮಹಿಂದ್ರಾ