ಬೆಂಗಳೂರು: ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಶಾಸಕಿ ಕನೀಜ್ ಫಾತಿಮಾ ಸೇರಿದಂತೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಐವರು ಸದಸ್ಯರನ್ನು ನೇಮಕ ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಹಾಗೂ ವಕ್ಫ್ ಮಂಡಳಿಗೆ ಸದಸ್ಯರಿಗೆ ಹೈಕೋರ್ಟ್ ಎರಡು ವಾರ ಕಾಲಾವಕಾಶ ನೀಡಿದೆ.
ಯಾದಗಿರಿ ಜಿಲ್ಲೆ ನಿವಾಸಿ ಸೈಯದ್ ಖುಸ್ರೋ ಹುಸೇನಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ, ಎರಡು ವಾರಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರ, ವಕ್ಫ್ ಮಂಡಳಿ, ಐವರು ಮಂಡಳಿ ಸದಸ್ಯರಿಗೆ ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರ ಮನವಿ ಏನು?: ವಕ್ಫ್ ಮಂಡಳಿಗೆ ಸೈಯದ್ ನಾಸೀರ್ ಹುಸೇನ್, ಕನೀಜ್ ಫಾತಿಮಾ, ಆರ್.ಅಬ್ದುಲ್ ರಿಯಾಜ್ ಖಾನ್, ಆಸೀಫ್ ಅಲಿ ಶೇಕ್ ಹುಸೇನ್, ಕೆ.ಅನ್ವರ್ ಬಾಷಾ ವಕ್ಫ್ ಮಂಡಳಿ ಸದಸ್ಯರಾಗಿ 2024ರ ಅ.31ರಂದು ಚುನಾಯಿತರಾಗಿದ್ದಾರೆ. ಈ ಹಿಂದೆ ಇವರು ವಕ್ಫ್ ಮಂಡಳಿ ಸದಸ್ಯರಾಗಿದ್ದಾಗ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ವಕ್ಫ್ ಆಸ್ತಿಗಳ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಅವರ ನೇಮಕಾತಿಯನ್ನು ರದ್ದುಗೊಳಿಸಿ, ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ವಕೀಲರ ವಾದ: ''ಅರ್ಜಿದಾರರು ವಕ್ಫ್ ಮಂಡಳಿ ಸದಸ್ಯರಲ್ಲ. ಚುನಾವಣೆಗೂ ಅವರು ಸ್ಪರ್ಧಿಸಿರಲಿಲ್ಲ. ಅರ್ಜಿ ಸಲ್ಲಿಸುವ ಅರ್ಹತೆ ಅವರಿಗಿಲ್ಲ. ಈಗಾಗಲೇ ವಕ್ಫ್ ಮಂಡಳಿ ಸದಸ್ಯರ ಚುನಾವಣೆ ನಡೆದಿದೆ. ಫೆಬ್ರವರಿ 17ಕ್ಕೆ ವಕ್ಫ್ ಮಂಡಳಿ ಅಧ್ಯಕ್ಷರ ಚುನಾವಣೆ ನಿಗದಿಯಾಗಿದೆ. ಅರ್ಜಿಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಹಾಗಾಗಿ, ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬಾರದು. ಅರ್ಜಿದಾರರು ಕೋರಿರುವ ಮನವಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು'' ಎಂದು ಸರ್ಕಾರದ ಪರ ಹಾಗೂ ಮಂಡಳಿಯ ಸದಸ್ಯರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: ಜನನಿ ಪಬ್ಲಿಕ್ ಶಾಲೆಯ 18 ಮಕ್ಕಳು ಸಿಬಿಎಸ್‌ಇ ಪರೀಕ್ಷೆಗೆ ಹಾಜರಾಗಲು ಹೈಕೋರ್ಟ್ ಅನುಮತಿ