ಬೆಂಗಳೂರು: ಬಾಹ್ಯಾಕಾಶ ವಲಯದ ನವೋದ್ಯಮಗಳಲ್ಲಿ ತಂತ್ರಜ್ಞಾನದ ಗುಣಮಟ್ಟ ಇನ್ನಷ್ಟು ಎತ್ತರಕ್ಕೆ ಏರಬೇಕಿದ್ದು, ಎಲ್ಲ ರಾಜ್ಯಗಳಲ್ಲಿ 'ಸ್ಪೇಸ್ ಪಾರ್ಕ್'ಗಳ ನಿರ್ಮಾಣ ಅಗತ್ಯವಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದರು.
ವಾಣಿಜ್ಯ ಬಾಹ್ಯಾಕಾಶ ವಲಯದ ಭವಿಷ್ಯ: 'ಜಾಗತಿಕ ಹೂಡಿಕೆದಾರರ ಸಮಾವೇಶ (ಜಿಮ್-25)'ದಲ್ಲಿ 'ವಾಣಿಜ್ಯ ಬಾಹ್ಯಾಕಾಶ ವಲಯದ ಭವಿಷ್ಯ' ಗೋಷ್ಠಿಯಲ್ಲಿ ಅವರು ವಿಚಾರ ಮಂಡಿಸಿದರು. ಈ ಹಿಂದೆ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಪಾಲುದಾರಿಕೆ ಕುರಿತು ಸ್ಪಷ್ಟತೆ ಇರಲಿಲ್ಲ. ಆದರೆ ಈಗ ಸರ್ಕಾರ ಸ್ಪಷ್ಟ ನೀತಿ ರೂಪಿಸಿದ್ದು, ಹೂಡಿಕೆಗೆ ಸಕಾಲ. ವಾಣಿಜ್ಯ ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಪಾಲುದಾರಿಕೆ ಮತ್ತು ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ನವೋದ್ಯಮಿಗಳು ಹಾಗೂ ಯುವ ಉದ್ಯಮಿಗಳು ಇದರ ಸದುಪಯೋಗ ಪಡೆಯಬೇಕು. ನವೋದ್ಯಮಗಳಿಗೆ ವೆಂಚರ್ ಕ್ಯಾಪಿಟಲ್ ಅಗತ್ಯವಿದ್ದು, ಸರ್ಕಾರ ಕೂಡಾ ಹಲವು ಕಾರ್ಯಕ್ರಮಗಳ ಮೂಲಕ ಹಣಕಾಸು ನೆರವು ನೀಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಸಹಭಾಗಿತ್ವ ಅತ್ಯಗತ್ಯ ಎಂದರು.
ಉಪಗ್ರಹ ಆಧರಿತ ಸೇವೆ ಒದಗಿಸುವ ಉದ್ಯಮಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶ: ಉಪಗ್ರಹ ತಯಾರಿಕೆ ಮತ್ತು ಉಡಾವಣೆ, ಉಪಗ್ರಹಗಳ ಕಾರ್ಯನಿರ್ವಹಣೆ, ಮೂಲಸೌಕರ್ಯ ವೃದ್ಧಿ, ಸಂಪರ್ಕ ಅಪ್ಲಿಕೇಶನ್ಗಳ ಅಭಿವೃದ್ಧಿ, ದತ್ತಾಂಶ ಸೇವೆ, ದತ್ತಾಂಶ ವಿಶ್ಲೇಷಣೆ ಮುಂತಾದ ವಲಯಗಳಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶಗಳಿವೆ. ಹವಾಮಾನ, ಮೀನುಗಾರಿಕೆ, ಸಾಗರ ಆರ್ಥಿಕತೆ, ಕೃಷಿ ಮುಂತಾದ ವಲಯಗಳಲ್ಲಿ ಉಪಗ್ರಹ ಆಧರಿತ ಸೇವೆ ಒದಗಿಸುವ ಉದ್ಯಮಕ್ಕೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳಿವೆ ಎಂದು ವಿವರಿಸಿದರು.
ಸಾರ್ವಜನಿಕರಿಗೆ ಮಾಹಿತಿ, ಜ್ಞಾನ ಹಾಗೂ ದತ್ತಾಂಶ ಒದಗಿಸಲು ಈ ಹಿಂದೆ ಸರ್ಕಾರ ಹೆಚ್ಚಿನ ಹೂಡಿಕೆ ಮಾಡಬೇಕಾದ ಅಗತ್ಯತೆ ಇತ್ತು. ಆದರೆ ಈಗ ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದ ಹಾಗೂ ಖಾಸಗಿ ಉಪಕ್ರಮಗಳಿಂದ ಮಾಹಿತಿ ಮತ್ತು ದತ್ತಾಂಶಗಳು ಉಚಿತವಾಗಿ ಎಲ್ಲರಿಗೂ ಲಭ್ಯವಾಗಿವೆ. ಹೀಗಾಗಿ ಸರ್ಕಾರಕ್ಕೆ ಈ ವಲಯದ ಮೇಲಿನ ಹೂಡಿಕೆ ಹೊರೆ ತಪ್ಪಿದೆ. ಆದರೆ ನವೋದ್ಯಮಗಳು ಈ ಉಚಿತ ದತ್ತಾಂಶದ ಲಾಭ ಪಡೆಯಬೇಕು ಎಂದರು.
ಭಾರತಕ್ಕೆ ಕ್ರಾಂತಿಕಾರಕ ಬದಲಾವಣೆ ತರುವ ಸಾಮರ್ಥ್ಯ: ಬಾಹ್ಯಾಕಾಶ, ಮಾಹಿತಿ ತಂತ್ರಜ್ಞಾನ, ಸೆಮಿ ಕಂಡಕ್ಟರ್ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಭಾರತ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ವೃತ್ತಿಪರ ಮತ್ತು ಪ್ರತಿಭಾನ್ವಿತ ತಂತ್ರಜ್ಞರ ಬಹುದೊಡ್ಡ ಪಡೆಯನ್ನೇ ಹೊಂದಿರುವ ಭಾರತ, ವಾಣಿಜ್ಯ ಬಾಹ್ಯಾಕಾಶ ವಲಯದಲ್ಲಿ ಜಾಗತಿಕವಾಗಿ ಕ್ರಾಂತಿಕಾರಕ ಬದಲಾವಣೆ ತರುವ ಸಾಮರ್ಥ್ಯ ಹೊಂದಿದೆ ಎಂದು ಅಮೆರಿಕ-ಭಾರತ ಉದ್ಯಮ ಮಂಡಳಿಯ ಡಿಜಿಟಲ್ ಆರ್ಥಿಕತೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಜೇಕಬ್ ಗಲ್ಲಿಷ್ ತಿಳಿಸಿದರು.
ಇದನ್ನೂ ಓದಿ: ಹೂಡಿಕೆದಾರರ ಸಮಾವೇಶದಲ್ಲಿ ಗಮನ ಸೆಳೆದ ಪಾಡ್ ತಂತ್ರಜ್ಞಾನ: ಏನಿದು ಹೊಸ ಸಾರಿಗೆ ವ್ಯವಸ್ಥೆ?
ಇದನ್ನೂ ಓದಿ: ಬೆಂಗಳೂರಲ್ಲಿ ಏರ್ ಟ್ಯಾಕ್ಸಿ! ಅಗ್ಗದ ಬೆಲೆಯಲ್ಲಿ ಏರ್ ಟ್ರಾವೆಲ್: ಈ ಎಲೆಕ್ಟ್ರಿಕ್ ಹೆಲಿಕಾಪ್ಟರ್ ವಿಶೇಷತೆಗಳೇನು?